ರಕ್ಷಣಾ ಆಮದು ಕಡಿಮೆಯಾಗಿದೆ, ಸೈಬರ್, ಸ್ಪೇಸ್, ರೊಬೋಟಿಕ್ ವಾರ್ ಎದುರಿಸುವ ನಂ.1 ರಾಷ್ಟ್ರವಾಗುವ ಗುರಿ: ಬಿಪಿನ್ ರಾವತ್
ಸ್ವದೇಶೀ ತಂತ್ರಜ್ಞಾನದ, ಸ್ವದೇಶಿ ನಿರ್ಮಿತ ಯುದ್ಧೋಪಕರಣಗಳಿಂದಲೇ ಮುಂದಿನ ಯುದ್ಧ ಗೆಲ್ಲುವ ಸಾಮರ್ಥ್ಯ ಈಗ ಭಾರತಕ್ಕಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ನವದೆಹಲಿ: ಸ್ವದೇಶೀ ತಂತ್ರಜ್ಞಾನದ, ಸ್ವದೇಶಿ ನಿರ್ಮಿತ ಯುದ್ಧೋಪಕರಣಗಳಿಂದಲೇ ಮುಂದಿನ ಯುದ್ಧ ಗೆಲ್ಲುವ ಸಾಮರ್ಥ್ಯ ಈಗ ಭಾರತಕ್ಕಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ನಡೆದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ನ ನಿರ್ದೇಶಕರ 41ನೇ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ರಾವತ್ ಅವರು, 'ಮುಂದಿನ ಯುದ್ಧಗಳನ್ನು ಎದುರಿಸಲು ಮತ್ತು ಗೆಲ್ಲಲು ಭಾರತವು ಸ್ವದೇಶಿ ಶಸ್ತ್ರಾಸ್ತ್ರಗಳನ್ನೇ ಬಳಸಲಿದೆ. ನಮಗೆ ಆ ಸಾಮರ್ಥ್ಯ ಈಗ ಸಿದ್ಧಿಸಿದೆ. ಶಸ್ತ್ರಾಸ್ತ್ರಗಳು ಮತ್ತು ಇತರೆ ಯುದ್ಧ ಪರಿಕರಗಳನ್ನು ಅಭಿವೃದ್ಧಿಪಡಿಸುವಾಗ ಭವಿಷ್ಯದಲ್ಲಿ ಎದುರಿಸಬೇಕಾದ ಯುದ್ಧಗಳನ್ನು ಗಮನದಲ್ಲಿಟ್ಟುಕೊಂಡು ಡಿಆರ್‌ಡಿಒ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳ ಮೂಲಕವೇ ಭಾರತ ಯುದ್ಧಗಳನ್ನು ಎದುರಿಸಿ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅಂತೆಯೇ ಭವಿಷ್ಯದ ಯುದ್ಧಗಳಿಗಾಗಿ ನಾವು ಈಗಿನಿಂದಲೇ ಸಿದ್ಧತೆ ನಡೆಸಬೇಕಿದ್ದು, ಸಂಪರ್ಕ ರಹಿತ ಯುದ್ಧ ಕ್ಷೇತ್ರದ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಪ್ರಮುಖವಾಗಿ ಸೈಬರ್, ಬಾಹ್ಯಾಕಾಶ, ಲೇಸರ್, ಎಲೆಕ್ಟ್ರಾನಿಕ್ ಮತ್ತು ರೋಬೋಟಿಕ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಉಪಯೋಗವನ್ನು ನಾವು ಬಹಳ ಅಗತ್ಯವಾಗಿ ಯುದ್ಧಗಳಿಗೆ ಬಳಸಿಕೊಳ್ಳಬೇಕಿದೆ. ಇದಕ್ಕೆ ಇನ್ನು ತಡ ಮಾಡುವಂತಿಲ್ಲ ಎಂದು ರಾವತ್ ಒತ್ತಿ ಹೇಳಿದರು.
ಇದೇ ವೇಳೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಸಾಧನೆಗಳನ್ನು ಶ್ಲಾಘಿಸಿದ ಬಿಪಿನ್ ರಾವತ್, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತವು ಹೆಚ್ಚಿನ ಪ್ರಗತಿ ಸಾಧಿಸಲು ಡಿಆರ್‌ಡಿಒ ಪ್ರಮುಖ ಪಾತ್ರ ವಹಿಸುತ್ತಿದೆ. ಅತಿ ಹೆಚ್ಚು ಶಸ್ತ್ರಾಸ್ತ್ರಗಳ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳಾಗಿದ್ದು, ಭಾರತದ ಮಟ್ಟಿಗೆ ಇದು ಮುಜುಗರ ತರುವ ವಿಷಯವೇ. ಆದರೆ, ಕಳೆದ ಕೆಲ ವರ್ಷಗಳಿಂದ ಇದು ಬದಲಾಗುತ್ತಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳ ಮೂಲಕ ನಮ್ಮ ಸೇನಾ ಅಗತ್ಯತೆಗಳನ್ನ ಪೂರೈಸಲು ಡಿಆರ್ಡಿಓ ಶ್ರಮಿಸುತ್ತಿದೆ. ಮುಂದಿನ ಯುದ್ಧವನ್ನು ನಾವು ದೇಶೀಯ ಶಸ್ತ್ರಾಸ್ತ್ರ ವ್ಯವಸ್ಥೆಯ ನೆರವಿನಿಂದಲೇ ಗೆಲ್ಲುತ್ತೇವೆಂಬ ವಿಶ್ವಾಸವಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


