ಮೊದಲೇ ಸುಳಿವು ಸಿಕ್ಕಿತ್ತು, ಆದರೂ ಪುಲ್ವಾಮಾದಲ್ಲಿ ಭೀಕರ ಉಗ್ರ ದಾಳಿ; ತಪ್ಪಾಗಿದ್ದೆಲ್ಲಿ?
ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯು ದಾಳಿ ನಡೆಸುತ್ತದೆ ಎಂಬ ಸುಳಿವು ಸಿಕ್ಕಿತ್ತು. ಆದರೂ ಯೋಧರ ಸಾವನ್ನು ತಪ್ಪಿಸಲು ಸಾಧ್ಯವಾಗಿಲ್ಲ.

Published On :
ನವದೆಹಲಿ: ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯು ದಾಳಿ ನಡೆಸುತ್ತದೆ ಎಂಬ ಸುಳಿವು ಸಿಕ್ಕಿತ್ತು. ಆದರೂ ಯೋಧರ ಸಾವನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಮೇಲ್ನೋಟಕ್ಕೆ ಇಲ್ಲಿ ಯಾವುದೇ ಭದ್ರತಾ ವೈಫಲ್ಯ ಆಗಿಲ್ಲ. ಆದರೆ ದಾಳಿಗೆ ನಾಗರಿಕ ವಾಹನ ಬಳಸಿದ್ದರಿಂದ ಇಂತಾ ಭೀಕರ ದಾಳಿ ನಡೆದಿದೆ.
ಭಾರತೀಯ ಸೇನೆಯ ಮೇಲೆ ಭಾರಿ ಪ್ರಮಾಣದಲ್ಲಿ ದಾಳಿ ನಡೆಸಲು ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯು ವರ್ಷದ ಹಿಂದೆಯೇ ಪ್ಲಾನ್ ಮಾಡಿತ್ತು. ಎರಡು ದಿನಗಳ ಹಿಂದೆಯಷ್ಟೇ ಭಾರತದ ಗುಪ್ತಚರರಿಗೆ ಈ ಪ್ಲಾನ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದೇ ರೀತೆ ಸೇನೆ ಸಹ ಭದ್ರತಾ ತಪಾಸಣೆ, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿತ್ತು. ಆದರೆ ಸ್ಥಳೀಯ ಜನರಿಗೆ ಹೆದ್ದಾರಿ ಬಳಸಲು ನೀಡಲಾಗಿದ್ದ ಮುಕ್ತ ಅವಕಾಶವನ್ನು ಉಗ್ರಗಾಮಿಯೂ ತನ್ನ ಕೃತ್ಯಕ್ಕೆ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ.
ದಾಳಿಯ ಸಂದರ್ಭದಲ್ಲಿ 78 ವಾಹನಗಳಲ್ಲಿ ಒಟ್ಟು 2,547 ಯೋಧರು ಎರಡು ಭಾಗಗಳಾಗಿ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಾಗುತ್ತಿದ್ದರು. ಕಳೆದ 6 ದಿನಗಳಿಂದ ಈ ಹೆದ್ದಾರಿ ಬಂದ್ ಆಗಿದ್ದರಿಂದ ನಿನ್ನೆ ಮಾಮೂಲಿಗಿಂತ ಹೆಚ್ಚು ಸೈನಿಕರು ಆ ಮಾರ್ಗದಲ್ಲಿ ಹೋಗುತ್ತಿದ್ದರು. ಇದೇ ಸಮಯಕ್ಕೆ ಕಾಯುತ್ತಿದ್ದ ಉಗ್ರರಿಗೆ ಇನ್ನೂ ಹೆಚ್ಚು ಮಂದಿಯನ್ನು ಕೊಲ್ಲುವ ಗುರಿ ಇತ್ತು. ಆದರೆ ಯೋಧರ ಒಂದು ಬಸ್ ಮಾತ್ರ ದಾಳಿಗೆ ತುತ್ತಾಗಿದೆ.
ದಾಳಿಯ ಮುನ್ಸೂಚನೆ ಇದ್ದರಿಂದ ಟ್ರಕ್ ಸಾಗುವ ಮಾರ್ಗವನ್ನು ಸಂಪೂರ್ಣವಾಗಿ ತಪಾಸಣೆ ಮಾಡಲಾಗಿತ್ತು. ಅಲ್ಲಿ ಯಾವುದೇ ಐಇಡಿ ಸ್ಫೋಟಕಗಳು ಪತ್ತೆಯಾಗಲಿಲ್ಲ. ಗುಂಡು ಅಥವಾ ಗ್ರೆನೇಡ್ ದಾಳಿ ಆಗುವ ಯಾವುದೇ ಅಪಾಯವೂ ಕಾಣಲಿಲ್ಲ. ಆದರೆ ಹೆದ್ದಾರಿಗೆ ಕೂಡಿಕೊಳ್ಳುವ ಅಡ್ಡ ರಸ್ತೆಯಿಂದ ಬಂದ ವಾಹನವು ಈ ದುರಂತಕ್ಕೆ ಕಾರಣವಾಗಿರುವುದು ಸದ್ಯಕ್ಕೆ ತಿಳಿದುಬಂದ ಮಾಹಿತಿಯಾಗಿದೆ.
ಜಮ್ಮು ಕಾಶ್ಮೀರದ ಸ್ಥಳೀಯರಿಗೆ ಹೆದ್ದಾರಿ ಬಳಸುವ ಮುಕ್ತ ಅವಕಾಶ ನೀಡಿದ್ದು ದೊಡ್ಡ ತಪ್ಪಾಗಿದೆ. ಆತ್ಮಾಹುತಿ ದಾಳಿಕೋರನು ಸ್ಥಳೀಯ ಗ್ರಾಮಸ್ಥರು ಸಂಚರಿಸುವ ಸರ್ವಿಸ್ ರೋಡ್ ಮುಖಾಂತರ ತನ್ನ ವಾಹನವನ್ನು ಚಲಾಯಿಸಿಕೊಂಡು ಬಂದು ಯೋಧರ ಕಾನ್ವಾಯ್ ನತ್ತ ನುಗ್ಗಿಸಿರುವ ಸಾಧ್ಯತೆ ಇದೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian Armyಜಮ್ಮು ಮತ್ತು ಕಾಶ್ಮೀರJammu and Kashmirಭಾರತೀಯ ಸೇನೆPulwama Terror Attackಪುಲ್ವಾಮಾ ಉಗ್ರರ ದಾಳಿCRPF martyrsಸಿಆರ್ ಪಿಎಫ್ ಹುತಾತ್ಮ ಯೋಧರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


