ಪುಲ್ವಾಮಾ ಉಗ್ರರ ದಾಳಿ; ಪ್ರಧಾನಿ ಮೋದಿ ನೇತೃತ್ವದಲ್ಲಿ ಸಂಪುಟ ಸಮಿತಿ ಸಭೆ
ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ಭದ್ರತಾ ವಾಹನದ ಮೇಲೆ ನಡೆದ ಭಯೋತ್ಪಾದಕ ಆತ್ಮಹತ್ಯಾ ದಾಳಿಯಿಂದ 40ಕ್ಕೂ ಹೆಚ್ಚು ಯೋಧರು ...

ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ಭದ್ರತಾ ವಾಹನದ ಮೇಲೆ ನಡೆದ ಭಯೋತ್ಪಾದಕ ಆತ್ಮಹತ್ಯಾ ದಾಳಿಯಿಂದ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾದ ಘಟನೆ ಹಿನ್ನಲೆಯಲ್ಲಿ ಪರಾಮರ್ಶೆ ನಡೆಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ದೆಹಲಿಯಲ್ಲಿ ಉನ್ನತ ಮಟ್ಟದ ಸಂಪುಟ ಸಮಿತಿ ಭದ್ರತಾ ಸಭೆ ನಡೆಯಿತು.
ಜಮ್ಮು ಕಾಶ್ಮೀರದ ಅವಂತಿಪೋರಾ ಎಂಬಲ್ಲಿ ನಡೆದ ಭಯೋತ್ಪಾದಕ ದಾಳಿ ಹಿನ್ನಲೆಯಲ್ಲಿ ಸರ್ಕಾರ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ತಿಳಿದುಬಂದಿದೆ. ಸಭೆಯಲ್ಲಿ ಭದ್ರತಾ ಪಡೆಯ ಉನ್ನತ ಮಟ್ಟದ ಅಧಿಕಾರಿಗಳು ಜಮ್ಮು-ಕಾಶ್ಮೀರದ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ.
ಉರಿ ದಾಳಿ ಮಾದರಿಯಲ್ಲಿ ನಿನ್ನೆ ನಡೆದ ಭಯೋತ್ಪಾದಕ ದಾಳಿಯ ಭೀಕರತೆ ಇರುವುದರಿಂದ ಸರ್ಕಾರ ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಲು ಯೋಚನೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದ ಗಡಿ ಭಾಗದಲ್ಲಿ ತೀವ್ರ ಭದ್ರತೆ ಹಾಗೂ ಉಗ್ರರ ತಾಣಗಳ ಮೇಲೆ ಭದ್ರತಾ ಪಡೆಗೆ ಹದ್ದಿನ ಕಣ್ಣಿಡಲು ಈಗಾಗಲೇ ರಕ್ಷಣಾ ಇಲಾಖೆ ಆದೇಶ ನೀಡಿದೆ.
ಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪಾಲ್ಗೊಂಡಿದ್ದರು.
ಈ ಮಧ್ಯೆ 12 ಸದಸ್ಯರ ರಾಷ್ಟ್ರೀಯ ತನಿಖಾ ತಂಡ ಜಮ್ಮು-ಕಾಶ್ಮೀರಕ್ಕೆ ತೆರಳಿದ್ದು ಪುಲ್ವಾಮಾ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಿದೆ. ಇಂದು ಅಪರಾಹ್ನ ರಾಜನಾಥ್ ಸಿಂಗ್ ಕಾಶ್ಮೀರಕ್ಕೆ ತೆರಳಿ ಅಲ್ಲಿನ ಪರಿಸ್ಥಿತಿ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ.
ನಿನ್ನೆ ಜಮ್ಮುವಿನ ಪುಲ್ವಾಮಾ ಜಿಲ್ಲೆಯಲ್ಲಿ ಜೈಶ್ ಇ ಮೊಹಮ್ಮದ್ ಸಂಘಟನೆಯ ಆತ್ಮಹತ್ಯಾ ದಾಳಿಕೋರ ಸಿಆರ್ ಪಿಎಫ್ ವಾಹನದ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 37 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


