ಪೌರತ್ವ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಮುಸ್ಲಿಂ ಸಂಘಟನೆಯಿಂದ 'ಸುಪ್ರೀಂ'ಗೆ ಅರ್ಜಿ
ಭಾರಿ ಚರ್ಚೆಗೆ ಗ್ರಾಸವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಮುಸ್ಲಿಂ ಸಂಘಟನೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿದೆ.

ನವದೆಹಲಿ: ಭಾರಿ ಚರ್ಚೆಗೆ ಗ್ರಾಸವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಮುಸ್ಲಿಂ ಸಂಘಟನೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿದೆ.
ಪೌರತ್ವ (ತಿದ್ದುಪಡಿ) ಮಸೂದೆಯು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿರುವ ಜಮಾತ್ ಉಲೇಮಾ ಎ ಹಿಂದ್, ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದೆ.
ರಾಜ್ಯಸಭೆಯಲ್ಲಿ ಬುಧವಾರ ರಾತ್ರಿ ಮಸೂದೆಗೆ ಅಂಗೀಕಾರ ದೊರೆತ ಕೆಲವೇ ನಿಮಿಷಗಳ ನಂತರ ಪ್ರತಿಕ್ರಿಯೆ ನೀಡಿದ ಜಮಾತ್ ನ ಅಧ್ಯಕ್ಷ ಮೌಲಾ ಅರ್ಷದ್ ಮದನಿ ಅವರು, 'ಇದೊಂದು ದುರಂತ' ಎಂದು ಬಣ್ಣಿಸಿದ್ದಾರೆ. 'ಶಾಸಕಾಂಗವು ತನ್ನ ಕೆಲಸವನ್ನು ಸರಿಯಾಗಿ ಕೆಲಸ ಮಾಡಿಲ್ಲ. ಹೀಗಾಗಿ ಅದರ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ತೀರ್ಮಾನಿಸಿದ್ದೇವೆ. ಈಗಾಗಲೇ ವಕೀಲರನ್ನು ಸಂಪರ್ಕಿಸಿದ್ದೇವೆ. ನಮ್ಮ ಅರ್ಜಿಯ ಕರಡು ಸಿದ್ಧವಾಗಿದ್ದು, ಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ' ಎಂದು ಹೇಳಿದ್ದಾರೆ.
ಅಂತೆಯೇ 'ಲೋಕಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತ ನಂತರ, ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆಯದಂತೆ ಮಾಡಲು ಜಮಾತ್ ತನ್ನ ಎಲ್ಲ ಪ್ರಯತ್ನ ಮಾಡಿತು. ವಿವಿಧ ಪಕ್ಷಗಳ ಸದಸ್ಯರನ್ನು ಭೇಟಿಯಾಗಿ ಮಸೂದೆಯ ದುಷ್ಪರಿಣಾಮಗಳನ್ನು ಮನವರಿಕೆ ಮಾಡಿಕೊಡಲು ಯತ್ನಿಸಿದೆವು. ಆದರೆ ಜಾತ್ಯತೀತ ಎಂದು ಹೇಳಿಕೊಳ್ಳುವ ಹಲವು ರಾಜಕೀಯ ಪಕ್ಷಗಳ ನಾಯಕರು ಬೇಜವಾಬ್ದಾರಿ ನಡವಳಿಕೆ ತೋರಿದರು. ಹೀಗಾಗಿಯೇ ಈ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆಯಿತು. ಅಲ್ಲದೆ 'ಧರ್ಮದ ಆಧಾರದ ಮೇಲೆ ಯಾವುದೇ ನಾಗರಿಕನನ್ನು ಪ್ರತ್ಯೇಕಿಸಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎನ್ನುವುದು ನಮ್ಮ ಸಂವಿಧಾನದ ಆಶಯ.
ಈ ಮಸೂದೆಯು ಸಂವಿಧಾನದ 14 ಮತ್ತು 15ನೇ ವಿಧಿಯನ್ನು ಉಲ್ಲಂಘಿಸುತ್ತದೆ. ದೇಶದ ಭದ್ರತೆ ಮತ್ತು ಸುರಕ್ಷೆಗೂ ಧಕ್ಕೆ ತರುತ್ತದೆ. ಮಸೂದೆಯ ದುಷ್ಪರಿಣಾಮಗಳು ಈಗ ನಮಗೆ ಕಾಣಿಸದಿರಬಹುದು. ಆದರೆ ಒಮ್ಮೆ ರಾಷ್ಟ್ರೀಯ ಪೌರತ್ವ ನೋಂದಣಿ ದೇಶವ್ಯಾಪಿ ಆರಂಭವಾದ ನಂತರ ಲಕ್ಷಾಂತರ ಮುಸ್ಲಿಮರ ಬದುಕಿನ ಮೇಲೆ ಇದರ ಪರಿಣಾಮ ಎದ್ದು ಕಾಣುತ್ತದೆ. ಇದು ಹಿಂದೂ–ಮುಸ್ಲಿಮರ ವಿವಾದವಲ್ಲ. ಬದಲಾಗಿ ಮನುಷ್ಯನ ಮೂಲಭೂತ ಹಕ್ಕುಗಳ ವಿಚಾರ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ಐಯುಎಂಎಲ್ ತೆಲಂಗಾಣ ಘಟಕದ ಕಾರ್ಯದರ್ಶಿ ಅಬ್ದುಲ್ ಗನಿ ಅವರು, ನಾವು ಈಗಾಗಲೇ ಸುಪ್ರೀಂ ಕೋರ್ಟ್ ಅಡ್ವೊಕೇಟ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ರನ್ನು ಭೇಟಿ ಮಾಡಿ ಈ ವಿಚಾರದ ಕುರಿತು ಚರ್ಚೆ ನಡೆಸಿದ್ದೇವೆ. ಸುಪ್ರೀಂ ಕೋರ್ಟ್ ನಲ್ಲಿ ಈ ಕುರಿತು ಅರ್ಜಿ ಸಲ್ಲಿಸುವ ಕುರಿತು ಸಂಪೂರ್ಣ ಮಾಹಿತಿ ಪಡೆದಿದ್ದು, ಶೀಘ್ರದಲ್ಲೇ ಈ ಕುರಿತು ಅರ್ಜಿ ಸಲ್ಲಿಕೆ ಮಾಡಲಿದ್ದೇವೆ. ಅಲ್ಲದೆ ಎನ್ ಆರ್ ಸಿ ಮತ್ತು ಸಿಎಬಿ ಕಾಯ್ದೆಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಲಿದ್ದೇವೆ ಎಂದು ಹೇಳಿದ್ದಾರೆ.
Related Article
ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ: ಕೇಂದ್ರ ಸಚಿವರ ಮನೆ ಮೇಲೆ ಪ್ರತಿಭಟನಾಕಾರರ ದಾಳಿ
ಪೌರತ್ವ ತಿದ್ದುಪಡಿ ಮಸೂದೆ: ಈಶಾನ್ಯದಲ್ಲಿ ತಾರಕ್ಕೇರಿದ ಕಿಚ್ಚು, ಹಿಂಸಾಚಾರ, ಹಲವೆಡೆ ಕರ್ಫ್ಯೂ ಜಾರಿ
ಪೌರತ್ವ ಮಸೂದೆ: 'ಸುಪ್ರೀಂ'ಗೆ ದೂರು ನೀಡಲು ವಿಪಕ್ಷಗಳ ಚಿಂತನೆ
'ಭಾರತದ ಸಂವಿಧಾನದ ಇತಿಹಾಸದಲ್ಲೇ ಇದು ಕರಾಳ ದಿನ'
ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ: ಮೋದಿ ಸರ್ಕಾರದಿಂದ ಮತ್ತೊಂದು ಐತಿಹಾಸಿಕ ಕಾನೂನು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


