1984ರಲ್ಲಿ ರಾಜೀವ್ ಗಾಂಧಿಗೆ ಪೂರ್ಣ ಬಹುಮತ ಸಿಕ್ಕಿತ್ತು, ಆದರೆ ಅಧಿಕಾರ ದುರ್ಬಳಕೆ ಮಾಡಿಕೊಂಡಿರಲಿಲ್ಲ:ಸೋನಿಯಾ ಗಾಂಧಿ
1984ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಕ್ಕಿತ್ತು, ಆದರೆ ತಮ್ಮ ಅಧಿಕಾರವನ್ನೆಂದೂ ದುರ್ಬಳಕೆ ಮಾಡಿಕೊಂಡಿರಲಿಲ್ಲ ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮೋದಿ ಸರ್ಕಾರದ ಮೇಲೆ ವಾಕ್ ಪ್ರಹಾರ ನಡೆಸಿದ್ದಾರೆ.

ನವದೆಹಲಿ: 1984ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಕ್ಕಿತ್ತು, ಆದರೆ ತಮ್ಮ ಅಧಿಕಾರವನ್ನೆಂದೂ ದುರ್ಬಳಕೆ ಮಾಡಿಕೊಂಡಿರಲಿಲ್ಲ. ಜನರಿಗೆ ಬೆದರಿಕೆಯೊಡ್ಡುವುದು, ಭಯ ಹುಟ್ಟಿಸುವುದು ಅಥವಾ ಸಂಸ್ಥೆಗಳನ್ನು ನಾಶಗೊಳಿಸುವ ಕೆಲಸವನ್ನೆಂದೂ ಮಾಡಲಿಲ್ಲ ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮೋದಿ ಸರ್ಕಾರದ ಮೇಲೆ ವಾಕ್ ಪ್ರಹಾರ ನಡೆಸಿದ್ದಾರೆ.
ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರ 75ನೇ ಜನ್ಮ ದಿನಾಚರಣೆ ಅಂಗವಾಗಿ ದೆಹಲಿಯಲ್ಲಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹಲವು ಅಸಾಧಾರಣ ಸವಾಲುಗಳನ್ನು ಇಂದು ಎದುರಿಸುತ್ತಿದೆ. ಆದರೆ ವಿಭಜಕ ಶಕ್ತಿಗಳ ವಿರುದ್ಧದ ಸೈದ್ಧಾಂತಿಕ ಹೋರಾಟವನ್ನು ಮುಂದುವರಿಸುತ್ತದೆ ಎಂದರು.
1984ರ ಚುನಾವಣೆಯಲ್ಲಿ ರಾಜೀವ್ ಗಾಂಧಿ ಅಭೂತಪೂರ್ವ ಮತಗಳೊಂದಿಗೆ ಗೆಲುವು ಕಂಡಿದ್ದರು. ಆದರೆ ಅವರು ತಮ್ಮ ಅಧಿಕಾರವನ್ನು ಎಂದಿಗೂ ಜನರಲ್ಲಿ ಭಯ ಹುಟ್ಟಿಸುವ ಅಥವಾ ಬೆದರಿಕೆಯೊಡ್ಡುವ ಕೆಲಸಗಳಿಗೆ ಬಳಸಿಕೊಳ್ಳಲಿಲ್ಲ. ಸಂಸ್ಥೆಗಳ ಸ್ವಾತಂತ್ರ್ಯವನ್ನು ನಾಶ ಮಾಡಲು, ಸಮಾಜದಲ್ಲಿ ವಿಭಿನ್ನ ದೃಷ್ಟಿಕೋನಗಳನ್ನು ಸೃಷ್ಟಿಸಿ, ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಎಂದಿಗೂ ನಡೆದುಕೊಂಡಿರಲಿಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸೋನಿಯಾ ಗಾಂಧಿಯವರು ಮಾಡುತ್ತಿರುವ ಮೊದಲ ಸಾರ್ವಜನಿಕ ಭಾಷಣ ಇದಾಗಿದೆ.
ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಪಿ ಚಿದಂಬರಂ ಅವರನ್ನು ಸಿಬಿಐ ಐಎನ್ಎಕ್ಸ್ ಮೀಡಿಯಾ ಕೇಸಿಗೆ ಸಂಬಂಧಪಟ್ಟಂತೆ ಬಂಧಿಸಿದ್ದು ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳನ್ನು ಸರ್ಕಾರ ದ್ವೇಷ ತೀರಿಸುವ ಇಲಾಖೆಗಳನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
1989ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಕ್ಕಿರಲಿಲ್ಲ. ಆಗ ಅವರು ಜನರ ತೀರ್ಪನ್ನು ವಿನಯದಿಂದ ಸ್ವೀಕರಿಸಿದರು. ಇಂದಿನ ಜನರಿಗೆ ನಾನು ಹೇಳುವುದಿಷ್ಟೆ, ಆ ಸಮಯದಲ್ಲಿ ದೇಶದ ಅತಿದೊಡ್ಡ ರಾಜಕೀಯ ಪಕ್ಷವಾಗಿದ್ದರೂ ಕೂಡ ರಾಜೀವ್ ಗಾಂಧಿಯವರು ಆ ಸಂದರ್ಭದಲ್ಲಿ ಅಧಿಕಾರಕ್ಕಾಗಿ ಹೋರಾಡಲಿಲ್ಲ. ರಾಜೀವ್ ಗಾಂಧಿ ಅವರೊಳಗಿದ್ದಂತಹ ನೈತಿಕ ಶಕ್ತಿ ಮತ್ತು ಪ್ರಾಮಾಣಿಕತೆ ಅವರನ್ನು ಹಾಗೆ ಮಾಡಲು ಬಿಡಲಿಲ್ಲ ಎಂದರು ಸೋನಿಯಾ ಗಾಂಧಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


