ಸಂವಿಧಾನ ವಿಧಿ 35ಎ,360ನ್ನು ರದ್ದುಪಡಿಸುವುದಿಲ್ಲ ಎಂದು ರಾಜ್ಯಪಾಲರಿಂದ ಭರವಸೆ: ಒಮರ್ ಅಬ್ದುಲ್ಲಾ
ಸಂವಿಧಾನ ವಿಧಿ 35ಎ, ವಿಧಿ 370ನ್ನು ರದ್ದುಪಡಿಸುವ ಮತ್ತು ರಾಜ್ಯ ವಿಭಜನೆ ಕುರಿತು ಯಾವುದೇ ...

Published On :
ಜಮ್ಮು-ಕಾಶ್ಮೀರ: ಸಂವಿಧಾನ ವಿಧಿ 35ಎ, ವಿಧಿ 370ನ್ನು ರದ್ದುಪಡಿಸುವ ಮತ್ತು ರಾಜ್ಯ ವಿಭಜನೆ ಕುರಿತು ಯಾವುದೇ ಕ್ರಮವಾಗಲಿ, ನಿರ್ಧಾರವಾಗಲಿ ತೆಗೆದುಕೊಂಡಿಲ್ಲ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಭರವಸೆ ನೀಡಿದ್ದಾರೆ ಎಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ನ ನಾಯಕರ ನಿಯೋಗದೊಂದಿಗೆ ಇಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಸ್ಥಿತಿಗತಿ ಬಗ್ಗೆ ರಾಜ್ಯಪಾಲರಿಂದ ನಮಗೆ ಸ್ಪಷ್ಟತೆ ಬೇಕಾಗಿತ್ತು, ಅದಕ್ಕಾಗಿ ಭೇಟಿ ಮಾಡಿದ್ದೆವು ಎಂದರು.
ರಾಜ್ಯಪಾಲರಿಂದ ನಮಗೆ ಭರವಸೆ ಸಿಕ್ಕಿದೆ, ಆದರೆ ರಾಜ್ಯಪಾಲರ ಮಾತೇ ಅಂತಿಮವಲ್ಲ, ಕೇಂದ್ರ ಸರ್ಕಾರ ಈ ವಿಷಯದಲ್ಲಿ ಸಂಸತ್ತಿನಲ್ಲಿ ಸೋಮವಾರ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು.
ಜಮ್ಮು-ಕಾಶ್ಮೀರದಲ್ಲಿ ಉಂಟಾಗಿರುವ ಸ್ಥಿತಿಗತಿಯಲ್ಲಿ ರಾಜ್ಯಪಾಲರದ್ದು ಅಂತಿಮ ತೀರ್ಮಾನವಲ್ಲ, ಅಂತಿಮ ನಿರ್ಧಾರ ಭಾರತ ಸರ್ಕಾರದ್ದಾಗಿದೆ. ನಮಗೆ ಬಹಿರಂಗವಾಗಿ ರಾಜ್ಯಪಾಲರು ಏನು ಹೇಳಿದರು ಅನ್ನುವುದಕ್ಕಿಂತ ಮುಖ್ಯವಾಗಿ ಜಮ್ಮು-ಕಾಶ್ಮೀರ ಜನತೆ ಯಾವುದೇ ಕಾರಣಕ್ಕೂ ಗಾಬರಿಯಾಗಬೇಕಾಗಿಲ್ಲ ಎಂದು ಭಾರತ ಸರ್ಕಾರ ಬಹಿರಂಗವಾಗಿ ಹೇಳಿಕೆ ಕೊಡಬೇಕು ಎಂದು ಒತ್ತಾಯಿಸಿದರು.
ಈ ಮಧ್ಯೆ ಕೇಂದ್ರ ಸರ್ಕಾರ ಉಗ್ರರ ಬೆದರಿಕೆ ಹಿನ್ನಲೆಯಲ್ಲಿ ಸುರಕ್ಷತೆ ಕ್ರಮವಾಗಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ರದ್ದುಮಾಡಿದ್ದು ಯಾತ್ರಿಕರು ತಕ್ಷಣವೇ ಕಣಿವೆ ರಾಜ್ಯ ಬಿಟ್ಟು ಹೋಗುವಂತೆ ನಿರ್ದೇಶನ ನೀಡಿದೆ.
ಸಂವಿಧಾನದ 370ನೇ ವಿಧಿ ಏನು ಹೇಳುತ್ತದೆ: ಸಂವಿಧಾನದ 21ನೇ ಪರಿಚ್ಛೇದಲ್ಲಿ 370ನೇ ವಿಧಿ(Article) ಬಗ್ಗೆ ಉಲ್ಲೇಖಿಸಲಾಗಿದೆ. ಇದರ ಪ್ರಕಾರ ಜಮ್ಮು ಮತ್ತು ಕಾಶ್ಮೀರ ಶಾಸನಸಭೆ ನಿರ್ಣಯದ ಮೂಲಕ ಅಂಗೀಕರಿಸುವವರೆಗೆ ಅಲ್ಲಿನ ಆಡಳಿತಕ್ಕೆ ಅಗತ್ಯವಾದ ಅವಕಾಶಗಳನ್ನು ಒದಗಿಸುವುದು ಇದರ ಉದ್ದೇಶ.
370ನೇ ಪರಿಚ್ಛೇದವು ತಾತ್ಕಾಲಿಕವಾಗಿದ್ದು, ಇದು ಪರಿವರ್ತನೆಯ ಅಧಿಕಾರವೆ ಹೊರತೂ ಶಾಶ್ವತ ಅಧಿಕಾರವಲ್ಲ. ಇದು ಕಾಶ್ಮೀರಕ್ಕೆ ಮಾತ್ರವಲ್ಲ, ಉಳಿದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುತ್ತದೆ. ಆದರೆ, 370ನೇ ತಾತ್ಕಾಲಿಕ ಕ್ರಮ ಎಂಬುದನ್ನು ಒಪ್ಪಲು ಅಲ್ಲಿನ ಆಡಳಿತಗಾರರು ಷೇಕ್ ಅಬ್ದುಲ್ಲಾರಿಂದ ಹಿಡಿದು ಒಮರ್ ಅಬ್ದುಲ್ಲಾ ತನಕ ಮೆಹಬೂಬಾ ಮುಫ್ತಿ ತನಕ ಯಾರೂ ಒಪ್ಪಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


