ದೆಹಲಿ: ಭಾರತದಲ್ಲಿ ಗೂಢಚಾರಿಕೆ ಶಂಕೆ: ಚೀನಾ ಮೂಲದ ವ್ಯಕ್ತಿ ಬಂಧನ
ಭಾರತದಲ್ಲಿ ಚೀನಾ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ರಾಜಧಾನಿ ದೆಹಲಿಯಲ್ಲಿ ಚೀನಾ ಮೂಲದ ವ್ಯಕ್ತಿಯೋರ್ವನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Published On :
ನವದೆಹಲಿ: ಭಾರತದಲ್ಲಿ ಚೀನಾ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ರಾಜಧಾನಿ ದೆಹಲಿಯಲ್ಲಿ ಚೀನಾ ಮೂಲದ ವ್ಯಕ್ತಿಯೋರ್ವನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಚಾರ್ಲಿಂ ಪೆಗ್ ಎಂಬ 39 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈತನಿಂದ ಭಾರತೀಯ ಪಾಸ್ ಪೋರ್ಟ್, ಆಧಾರ್ ಕಾರ್ಡ್, 3.5 ಲಕ್ಷ ರೂ. ನಗದು, ಒಂದು ಎಸ್ ಯುವಿ ಕಾರು ಮತ್ತು ಮಹತ್ವದ ದಾಖಲೆಗಳು, 2000 ಅಮೆರಿಕನ್ ಡಾಲರ್ ಮತ್ತು 2000 ಥಾಯ್ ಕರೆನ್ಸಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬಂಧಿತ ಚಾರ್ಲಿ ಪೆಂಗ್‍ನನ್ನು ಸೆಪ್ಟೆಂಬರ್ 13ರಂದು ದೆಹಲಿಯ ಮಂಜು ಕಾ ತಿಲ್ಲಾ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದರು. ಈತನನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಪೊಲೀಸರು ಹಾಜರುಪಡಿಸಿದ್ದರು. ಪ್ರಾಥಮಿಕ ಮಾಹಿತಿಗಳ ಅನ್ವಯ ಈತ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾನೆ ಎಂದು ತಿಳಿದು ಬಂದಿದೆ. ಹೀಗಾಗಿ ವಿಚಾರಣೆಗೆ ತಮ್ಮ ಕಸ್ಟಡಿಗೆ ವಹಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ಈತನನ್ನು ಇದೀಗ ಪೊಲೀಸರ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಚೀನಾದ ನಂಜಿಂಗ್ ಪ್ರದೇಶಕ್ಕೆ ಸೇರಿದ ಈತ ತರಬೇತಿ ಪಡೆದ ನುರಿತ ಗೂಢಚಾರನಾಗಿದ್ದಾನೆ ಎನ್ನಲಾಗಿದೆ. 5 ವರ್ಷಗಳ ಹಿಂದೆ ಭಾರತಕ್ಕೆ ಬಂದು, ದೆಹಲಿಯಲ್ಲಿ ನೆಲೆಸಿದ್ದ. ಅಲ್ಲದೆ ಈತ ಪದೇಪದೆ ಹಿಮಾಚಲ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದ. ಮಾತ್ರವಲ್ಲ ಈತ ಭಾರತೀಯ ಯುವತಿಯನ್ನು ವಿವಾಹವಾಗಿ, ಮಣಿಪುರದ ವಿಳಾಸದ ಆಧಾರದ ಮೇಲೆ ಪಾಸ್ ಪೋರ್ಟ್ ಪಡೆದಿದ್ದ. ಜೊತೆಗೆ ವಿದೇಶಿ ಕರೆನ್ಸಿ ವಿನಿಮಯ ಕಚೇರಿ ಹೊಂದಿದ್ದ. ಹವಾಲಾ ದಂಧೆಯಲ್ಲೂ ಭಾಗಿಯಾಗಿದ್ದ ಎಂಬ ಶಂಕೆ ಇದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮಣಿಪುರದಲ್ಲಿ ಕಳೆದ ವರ್ಷ ಡಿಸೆಂಬರ್ ನಲ್ಲಿ ಭಾರತದಲ್ಲಿ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಚೀನಾದ 55 ವರ್ಷದ ಕಿನ್ ಮಿನ್ ಕ್ಸಿವ್ ಕ್ಸಿಯಾಂಗ್ ಎಂಬವನನ್ನು ಬಂಧಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


