ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರಂಭ: ಪಕ್ಷದ ಉನ್ನತ ನಾಯಕರೊಂದಿಗೆ ಅಮಿತ್ ಶಾ ಮಹತ್ವದ ಚರ್ಚೆ
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಶನಿವಾರ ಆರಂಭಗೊಂಡಿದ್ದು, ಸಭೆಯನ್ನು ಉದ್ಘಾಟನೆ ಮಾಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಉನ್ನತ ನಾಯಕರೊಂದಿಗೆ ಮಹತ್ವದ ಚರ್ಚೆ ನಡೆಸುತ್ತಿದ್ದಾರೆ...

Published On :
ನವದೆಹಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಶನಿವಾರ ಆರಂಭಗೊಂಡಿದ್ದು, ಸಭೆಯನ್ನು ಉದ್ಘಾಟನೆ ಮಾಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಉನ್ನತ ನಾಯಕರೊಂದಿಗೆ ಮಹತ್ವದ ಚರ್ಚೆ ನಡೆಸುತ್ತಿದ್ದಾರೆ.
ಎರಡು ದಿನಗಳ ಕಾಲ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯಲಿದ್ದು, ದೇಶದ ವಿವಿಧ ರಾಜ್ಯಗಳ ಬಿಜೆಪಿ ನಾಯಕರು ಪಾಲ್ಗೊಂಡಿದ್ದಾರೆ.
ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿರುವ ಅಮಿತ್ ಶಾ ಅವರು, 2014 ರಲ್ಲಿ ಬಿಜೆಪಿ ಭರ್ಜರಿ ಗೆಲವು ಸಾಧಿಸಿದಂತೆಯೇ 2019ರ ಲೋಕಸಭಾ ಚುನಾವಣೆಯಲ್ಲಿಯೂ ಗೆಲುವು ಸಾಧಿಸಲು ನಾಯಕರು ಕಾರ್ಯನಿರ್ವಹಿಸಬೇಕೆಂದು ಹೇಳಿದ್ದಾರೆ.
ಸಭೆಯಲ್ಲಿ ಅಜಯ ಬಿಜೆಪಿ ಮಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಈ ಐದೂ ರಾಜ್ಯಗಳಲ್ಲಿಯೂ ಬಿಜೆಪಿ ಗೆಲವು ಸಾಧಿಸಲು ಕಾರ್ಯನಿರ್ವಹಿಸುವಂತೆ ಪಕ್ಷದ ನಾಯಕರಿಗೆ ಅಮಿತ್ ಶಾ ಕರೆ ನೀಡಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಕ್ಕಿಂತಲೂ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಮತಗಳು ಸಿಗುವ ವಿಶ್ವಾಸ ಬಿಜೆಪಿಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕೇವಲ ಚುನಾವಣೆಯಷ್ಟೇ ಅಲ್ಲದೆ, ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಬಗ್ಗೆ ನಾಯಕರು ಚರ್ಚೆ ನಡೆಸಲಿದ್ದಾರೆ. ಮೇಲ್ಜಾತಿ ಸಂಘಟನೆಗಳು ಆಕ್ರೋಶಿತವಾಗಿರುವ ನಡುವೆ ಮೋದಿ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಯಶಸ್ಸಿನ ಕುರಿತಂತೆ ಬೆಳಕು ಚೆಲ್ಲುವ ಬಗ್ಗೆ ಈ ಸಭೆಯಲ್ಲಿ ಮಾತುಕತೆಗಳು ನಡೆಯುವ ಸಾಧ್ಯತೆಗಳಿವೆ.
ತೈಲ ಬೆಲೆ ಏರಿಕೆ ಕುರಿತೂ ಪಕ್ಷದ ನಿಲುವು ಪ್ರಕಟವಾಗುವ ಸಾಧ್ಯತೆಗಳಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿ ಪಕ್ಷದ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ದಲಿತರ ಓಲೈಕೆಯ ಉದ್ದೇಶದಿಂದ ನೂತನ ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರ ಸಭಾಂಗಣದಲ್ಲಿ ಸಭೆ ಆಯೋಜಿಸಿರುವುದು ಎಲ್ಲರ ಗಮನ ಸೆಳೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


