ದೇಶ

ಒಂದು ದೇಶ-ಒಂದು ಚಾಲನಾ ಪರವಾನಗಿ ಕುರಿತು ನೀವು ತಿಳಿಯಬೇಕಾದ ಅಂಶಗಳು

ದೇಶಾದ್ಯಂತ ಏಕರೂಪ ಚಾಲನಾ ಪರವಾನಗಿ (ಡಿಎಲ್), ವಾಹನ ನೋಂದಣಿ ಪ್ರಮಾಣ ಪತ್ರ (ಆರ್​ಸಿ) ವಿತರಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ.

ಒಂದು ದೇಶ-ಒಂದು ಚಾಲನಾ ಪರವಾನಗಿ ಕುರಿತು ನೀವು ತಿಳಿಯಬೇಕಾದ ಅಂಶಗಳು
ಸಂಗ್ರಹ ಚಿತ್ರ
Published On :
ನವದೆಹಲಿ: ದೇಶಾದ್ಯಂತ ಏಕರೂಪ ಚಾಲನಾ ಪರವಾನಗಿ (ಡಿಎಲ್), ವಾಹನ ನೋಂದಣಿ ಪ್ರಮಾಣ ಪತ್ರ (ಆರ್​ಸಿ) ವಿತರಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ.
ಈ ಸಂಬಂಧ ಕೇಂದ್ರ ಸರ್ಕಾರ ಕಾರ್ಯಮಗ್ನವಾಗಿದ್ದು, 2019ರ ಜುಲೈನಿಂದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೇ ವಿನ್ಯಾಸ, ಬಣ್ಣದ ಡಿಎಲ್ ಕಾರ್ಡ್ ವಿತರಿಸಲು ಮುಂದಾಗಿದೆ. ಕೇಂದ್ರಸರ್ಕಾರದ ಈ ಮಹತ್ವದ ಯೋಜನೆಯ ಕೆಲ ಪ್ರಮುಖಾಂಶಗಳು ಇಲ್ಲಿವೆ.
ಒಂದು ದೇಶ-ಒಂದು ಚಾಲನಾ ಪರವಾನಗಿ
ಕೇಂದ್ರ ಸರ್ಕಾರದ ಉದ್ದೇಶಿಸಿರುವ ಈ ಯೋಜನೆ ಅನ್ವಯ ದೇಶಾದ್ಯಂತ ಒಂದೇ ಚಾಲನಾ ಪರವಾನಗಿ ಚಾಲ್ತಿಗೆ ಬರಲಿದೆ. ಕೇವಲ ಚಾಲನಾ ಪರವಾನಗಿ ಮಾತ್ರವಲ್ಲದೇ ಈ ಏಕರೂಪ ಚಾಲನಾ ಪರವಾನಗಿ (ಡಿಎಲ್), ವಾಹನ ನೋಂದಣಿ ಪ್ರಮಾಣ ಪತ್ರವನ್ನೂ (ಆರ್​ಸಿ) ವಿತರಿಸಲು ಕೇಂದ್ರ ಮಹತ್ವದ ಹೆಜ್ಜೆ ಇರಿಸಿದೆ. 
20 ರೂ. ಖರ್ಚು
ಹೊಸ ಡಿಎಲ್ ಅಥವಾ ಆರ್​ಸಿ ಹೊಂದಲು ಕೇವಲ 15ರಿಂದ 20 ರೂ. ಖರ್ಚು ಬರುತ್ತದೆ. ಆದ್ದರಿಂದ, ನಿರ್ದಿಷ್ಟ ಅವಧಿಯಲ್ಲಿ ಈ ಕಾರ್ಡ್ ವಿತರಣೆ ಕಾರ್ಯ ಪೂರ್ಣಗೊಳಿಸ ಬಹುದು ಎನ್ನಲಾಗಿದೆ.
ಸ್ಮಾರ್ಟ್ ಕಾರ್ಡ್
ಹೊಸದಾಗಿ ವಿತರಿಸಲಾಗುವ ಡಿಎಲ್, ಆರ್​ಸಿ ಸ್ಮಾರ್ಟ್ ಕಾರ್ಡ್ ರೂಪದಲ್ಲಿರುತ್ತವೆ. ಮೈಕ್ರೋಚಿಪ್ ಜತೆಗೆ ಕ್ಯೂಆರ್ ಕೋಡ್ ಕೂಡ ಅಳವಡಿಕೆ ಆಗಿರುತ್ತದೆ. ಮೆಟ್ರೋ ರೈಲು, ಎಟಿಎಂ ಕಾರ್ಡ್​ಗಳಲ್ಲಿರುವಂತೆ ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್​ಎಫ್​ಸಿ; ಕಾರ್ಡ್ ಅನ್ನು ಗುರುತಿಸುವ ಯಂತ್ರಕ್ಕೆ 4 ಸೆಂ.ಮೀ. ಹತ್ತಿರ ತಂದಾಗ ಅದರಲ್ಲಿನ ವಿವರಗಳು ಯಂತ್ರದಲ್ಲಿ ಕಾಣಿಸುವುದು) ವ್ಯವಸ್ಥೆಯನ್ನು ಹೊಂದಿರುತ್ತದೆ. ಇದರಿಂದಾಗಿ ಸಂಚಾರ ಪೊಲೀಸರಿಗೆ ಸುಲಭವಾಗಿ ದಾಖಲೆ ಪರಿಶೀಲಿಸಲು ಮತ್ತು ಜುಲ್ಮಾನೆ ವಿಧಿಸಲು ಅನುಕೂಲವಾಗುತ್ತದೆ.
ಮೈಕ್ರೋ ಚಿಪ್ ಅಳವಡಿಕೆ
ಸ್ಮಾರ್ಟ್ ಕಾರ್ಡ್‌ಗಳಲ್ಲಿ ಡಿಎಲ್ ಮತ್ತು ಆರ್‌ಸಿಗಳಲ್ಲಿ ಮೈಕ್ರೋಚಿಪ್‌ಗಳನ್ನು ಅಳವಡಿಸಲಿದ್ದು, ಕ್ಯೂ ಆರ್ ಕೋಡ್‌ ಗಳನ್ನೂ ಈ ಕಾರ್ಡ್ ಗಳು ಹೊಂದಿರುತ್ತವೆ. ಅವುಗಳಲ್ಲಿ ಎನ್‌ಎಫ್‌ಸಿ(ನಿಯರ್ ಫೀಲ್ಡ್ ಕಮ್ಯುನಿಕೇಶನ್) ವೈಶಿಷ್ಟ್ಯವನ್ನೂ ಅಳವಡಿಸಲಾಗುತ್ತಿದ್ದು ಮೆಟ್ರೋ ಮತ್ತು ಎಟಿಎಂ ಕಾರ್ಡ್ ಗಳ ರೀತಿಯಲ್ಲಿ ಬಳಸಬಹುದಾಗಿದೆ. ಇದರಿಂದ ಟ್ರಾಫಿಕ್ ಪೊಲೀಸರು ವಿಶೇಷ ಸಾಧನಗಳ ಮೂಲಕ ಈ ಕಾರ್ಡ್‌ಳನ್ನು ಸ್ಕ್ಯಾನ್ ಮಾಡಿ ಎಲ್ಲ ವಿವರ ಪಡೆಯಬಹುದು. ನೂತನ ಡಿಎಲ್‌ನಲ್ಲಿ ಅಂಗಾಂಗ ದಾನ ಕುರಿತ ಚಾಲಕನ ಘೋಷಣೆ ಮತ್ತು ದೈಹಿಕ ವಿಕಲಚೇತನ ಅಥವಾ ಅಂಗವಿಕಲರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನವನ್ನು ಚಲಾಯಿಸುತ್ತಿರುವ ಬಗ್ಗೆ ಉಲ್ಲೇಖಗಳು ಇರಲಿವೆ ಎಂದು ತಿಳಿದುಬಂದಿದೆ.
ಯಾವೆಲ್ಲಾ ವಿವರ ಇರುತ್ತದೆ?
ಹೊಸ ಡಿಎಲ್​ನಲ್ಲಿ ಕೇಂದ್ರ, ರಾಜ್ಯಸರ್ಕಾರಗಳ ಲಾಂಛನ, ಅದನ್ನು ನೀಡಿದ ಪ್ರಾದೇಶಿಕ ಸಾರಿಗೆ ಕಚೇರಿ ವಿವರ, ವಿತರಿಸಿದ ದಿನಾಂಕ ಮತ್ತು ಮಾನ್ಯತೆ ಹೊಂದಿರುವ ಅವಧಿ, ವಾಹನ ಚಾಲಕರ ರಕ್ತದ ಗುಂಪು, ಅಂಗಾಂಗ ದಾನಕ್ಕೆ ಸಮ್ಮತಿ ಇರುವ ಕುರಿತು ಮಾಹಿತಿ, ಅಪಘಾತದ ಸಂದರ್ಭದಲ್ಲಿ ತುರ್ತಾಗಿ ಕರೆ ಮಾಡಬಹುದಾದ ದೂರವಾಣಿ ಸಂಖ್ಯೆ ದಾಖಲಾಗಿರುತ್ತದೆ. ಆರ್​ಸಿಯಲ್ಲೂ ಈ ಮಾಹಿತಿಗಳ ಜತೆಗೆ ವಾಹನ ವಾಣಿಜ್ಯ ಬಳಕೆಯದ್ದೋ ಅಥವಾ ವೈಯಕ್ತಿಕ ಬಳಕೆಯದ್ದೋ, ವಾಹನದ ಚಾಸಿ ಹಾಗೂ ಇಂಜಿನ್ ಸಂಖ್ಯೆ, ಮಾಲಿನ್ಯ ನಿಯಮ ಪಾಲನೆಯ ವಿವರ ಇರುತ್ತದೆ.
ಭದ್ರತೆಗೆ ಕ್ರಮ
ಭದ್ರತಾ ರೇಖೆ, ವಿವರಗಳ ಮೈಕ್ರೋ ಮುದ್ರಣ, ಮೈಕ್ರೋ ಗೆರೆ, ಹಾಲೋಗ್ರಾಮ್ ಮತ್ತು ವಾಟರ್​ವಾರ್ಕ್ ಎರಡೂ ಕಾರ್ಡ್​ಗಳಲ್ಲಿ ಸಾಮಾನ್ಯವಾಗಿರಲಿದೆ.
ಬದಲಾವಣೆಗೆ ಅವಕಾಶ
ಹೊಸದಾಗಿ ಡಿಎಲ್ ಮಾಡಿಸುವವರ ಜತೆಗೆ ಡಿಎಲ್ ಮತ್ತು ವಾಹನ ನೋಂದಣಿ ನವೀಕರಣದ ಸಂದರ್ಭದಲ್ಲೂ ಹೊಸ ಕಾರ್ಡ್ ಬದಲಿಸಿ ಕೊಡಲಾಗುತ್ತದೆ. ಸದ್ಯ ದೇಶಾದ್ಯಂತ ಪ್ರತಿದಿನ 32 ಸಾವಿರ ಡಿಎಲ್​ಗಳನ್ನು ಹೊಸದಾಗಿ ವಿತರಿಸಲಾಗುತ್ತಿದೆ ಇಲ್ಲವೇ ನವೀಕರಿ ಸಲಾಗುತ್ತದೆ. ಅಂತೆಯೇ ಪ್ರತಿದಿನ 43 ಸಾವಿರ ವಾಹನಗಳನ್ನು ಹೊಸದಾಗಿ ನೋಂದಣಿ ಮಾಡಿಸಲಾಗುತ್ತಿದೆ ಇಲ್ಲವೇ ನವೀಕರಿಸಲಾಗುತ್ತಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.