ದೇಶ

ಶೋಪಿಯಾನ್ ಎನ್ ಕೌಂಟರ್: 4 ಉಗ್ರರ ಸದೆಬಡಿದ ಸೇನೆ, ಓರ್ವ ಯೋಧ ಹುತಾತ್ಮ

ಕಣಿವೆ ರಾಜ್ಯ ಜಮ್ಮುಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಉಪಟಳ ಮತ್ತೆ ಮುಂದುವರೆದಿದ್ದು, ಮಂಗಳವಾರ ಬೆಳಗ್ಗೆ ಶೋಪಿಯಾನ್ ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಭಾರತೀಯ ಸೇನೆ 4 ಉಗ್ರರನ್ನು ಕೊಂದು ಹಾಕಿದ್ದು, ಓರ್ವ ಯೋಧ ಹುತಾತ್ಮನಾಗಿದ್ದಾನೆ.

ಶೋಪಿಯಾನ್ ಎನ್ ಕೌಂಟರ್: 4 ಉಗ್ರರ ಸದೆಬಡಿದ ಸೇನೆ, ಓರ್ವ ಯೋಧ ಹುತಾತ್ಮ
ಸಂಗ್ರಹ ಚಿತ್ರ
Published On :
ಶ್ರೀನಗರ: ಕಣಿವೆ ರಾಜ್ಯ ಜಮ್ಮುಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಉಪಟಳ ಮತ್ತೆ ಮುಂದುವರೆದಿದ್ದು, ಮಂಗಳವಾರ ಬೆಳಗ್ಗೆ ಶೋಪಿಯಾನ್ ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಭಾರತೀಯ ಸೇನೆ 4 ಉಗ್ರರನ್ನು ಕೊಂದು ಹಾಕಿದ್ದು, ಓರ್ವ ಯೋಧ ಹುತಾತ್ಮನಾಗಿದ್ದಾನೆ.
ಶೋಪಿಯಾನ್ ನ ನಾಡಿಗಾಮ್‌ ಪ್ರಾಂತ್ಯದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಕಾಳಗ ನಡೆದಿದ್ದು ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಈ ವೇಳೆ ಪ್ಯಾರಾಮಿಲಿಟರಿ ಪಡೆಯ ಕಮಾಂಡೋ ಒಬ್ಬರು ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಸೇನೆ ಕೂಡಲೇ ಕಾರ್ಯಪ್ರವೃತ್ತರಾಗಿ ಘಟನಾ ಪ್ರದೇಶವನ್ನು ಸುತ್ತುವರೆಯಿತು. ಈ ವೇಳೆ ಉಗ್ರರು ಸೈನಿಕರನ್ನು ನೋಡುತ್ತಿದ್ದಂತೆಯೇ ಗುಂಡಿನ ಸುರಿಮಳೆಗೈದಿದ್ದಾರೆ.
ಸೇನೆ ಕೂಡ ಪ್ರತಿದಾಳಿ ನಡೆಸಿದ್ದು, ಈ ವೇಳೆ 4 ಉಗ್ರರು ಹತರಾಗಿದ್ದಾರೆ. ಅಂತೆಯೇ ಘಟನೆಯಲ್ಲಿ ಓರ್ವ ಯೋಧನಿಗೆ ಗುಂಡೇಟು ತಗುಲಿದ್ದು, ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧನನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಗುಂಡಿನ ಕಾಳಗದಲ್ಲಿ ಇನ್ನಿಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ನವೆಂಬರ್ 13ರಂದು ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಹೊತ್ತು ಭಾರತಕ್ಕೆ ನುಗ್ಗುತ್ತಿದ್ದ ಪಾಕಿಸ್ತಾನದ ಭಯೋತ್ಪಾದಕನನ್ನು ಸೇನೆ ಸದೆಬಡಿದಿತ್ತು. ಅದಕ್ಕೂ ಮುನ್ನ ಪುಲ್ವಾಮದಲ್ಲಿ ಭಾರಿ ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರು ಭಯೋತ್ಪಾದಕರನ್ನು ಯೋಧರು ಹೊಡೆದುರುಳಿಸಿದ್ದರು. ಭಾನುವಾರ ಪಂಜಾಬ್‍ನ ಅಮೃತಸರದ ಆಶ್ರಮವೊಂದರಲ್ಲಿ ಗ್ರೆನೇಡ್ ಸ್ಫೋಟಗೊಂಡ ಪರಿಣಾಮ ಮೂವರು ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಭಯೋತ್ಪಾದಕರ ಭೀತಿ ಹಿನ್ನೆಲೆಯಲ್ಲಿ ಗಡಿಯಲ್ಲಿ ಭಾರಿ ಭದ್ರತೆ ಕಲ್ಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.