ದೇಶ

ಉದ್ರಿಕ್ತ ಗುಂಪಿನಿಂದ ಯುವಕನ ರಕ್ಷಿಸಿದ ಪೊಲೀಸ್; ರಾತ್ರೋ ರಾತ್ರಿ ಹೀರೋ ಆದ ಉತ್ತರಾಖಂಡ ಆ'ರಕ್ಷಕ'

ಉದ್ರಿಕ್ತ ಗುಂಪಿಗೆ ಸಿಕ್ಕಿಬಿದ್ದಿದ್ದ ಯುವಕನನ್ನು ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿರುವ ಘಟನೆ ವರದಿಯಾಗಿದೆ.

ಉದ್ರಿಕ್ತ ಗುಂಪಿನಿಂದ ಯುವಕನ ರಕ್ಷಿಸಿದ ಪೊಲೀಸ್; ರಾತ್ರೋ ರಾತ್ರಿ ಹೀರೋ ಆದ ಉತ್ತರಾಖಂಡ ಆ'ರಕ್ಷಕ'
ಯುವಕನ ರಕ್ಷಣೆ ಮಾಡಿದ ಗಗನ್ ದೀಪ್ ಸಿಂಗ್
Published On :
ರಾಮನಗರ್: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮಕ್ಕಳ ಕಳ್ಳ ಎಂದು ಸಾರ್ವಜನಿಕರು ಯುವಕನ ಮೇಲೆ ಹಲ್ಲೆ ಮಾಡಿ ಕೊಂದು ಹಾಕಿದ ಘಟನೆ ಹಸಿರಾಗಿರುವಂತೆಯೇ ಇದಕ್ಕೆ ತ್ವದ್ವಿರುದ್ಧ ಎಂಬಂತೆ ಉದ್ರಿಕ್ತ ಗುಂಪಿಗೆ ಸಿಕ್ಕಿಬಿದ್ದಿದ್ದ ಯುವಕನನ್ನು ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿರುವ ಘಟನೆ ವರದಿಯಾಗಿದೆ.
ಉತ್ತರಾಖಂಡದ ಪೊಲೀಸ್ ಅಧಿಕಾರಿಯೊಬ್ಬರು ನೈತಿಕ ಪೊಲೀಸ್ ಗಿರಿಗೆ ಸೆಡ್ಡು ಹೊಡೆದು ಉದ್ರಿಕ್ತ ಗುಂಪಿನಿಂದ ಅಲ್ಪ ಸಂಖ್ಯಾತ ಸಮುದಾಯದ ಯುವಕನನ್ನು ರಕ್ಷಣೆ ಮಾಡುವ ಕರ್ತವ್ಯ ಪ್ರಜ್ಞೆ ಮರೆದಿದ್ದು, ಪೊಲೀಸ್ ಅಧಿಕಾರಿಯ ಕಾರ್ಯ ಇದೀಗ ಎಲ್ಲೆಡೆ ಅತೀವ ಶ್ಲಾಘನೆಗೆ ಪಾತ್ರವಾಗಿದೆ.  ಉದ್ರಿಕ್ತ ಜನರು ಗುಂಪೊಂದು ಅಲ್ಪ ಸಂಖ್ಯಾತ ಸಮುದಾಯದ ಯುವಕನಿಗೆ ಥಳಿಸುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸ್ ಅಧಿಕಾರಿಯೊಬ್ಬರು ಅತನನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
ಉತ್ತರಾಖಂಡದ ರಾಮನಗರ್ ಪ್ರದೇಶದಲ್ಲಿ ಯುವಕನೊಬ್ಬ ಅನ್ಯಕೋಮಿನ ಯುವತಿಯೊಂದಿಗೆ ಮಾತನಾಡುತ್ತಿದ್ದ ವೇಳೆ ಒಂದು ಕೋಮಿನ ಜನರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಸಾಕಷ್ಟು ಜನ ವ್ಯಕ್ತಿಯ ಸುತ್ತಲು ಸೇರಿ ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸ್ ಅಧಿಕಾರಿ ಗಗನ್ ದೀಪ್ ಸಿಂಗ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ ಪೊಲೀಸರ ಮಾತಿಗೂ ಬೆಲೆ ಕೊಡದ ಉದ್ರಿಕ್ತರು ಏಕಾಏಕಿ ಆತನ ಮೇಲೆ ಸಾಮೂಹಿಕ ಹಲ್ಲೆಗೆ ಮುಂದಾದರು. ಈ ವೇಳೆ ಗುಂಪಿನ ಮಧ್ಯೆ ನುಗ್ಗಿದ ಪೊಲೀಸ್ ಅಧಿಕಾರಿ ಗಗನ್ ದೀಪ್ ಸಿಂಗ್ ಯುವಕನನ್ನು ತಮ್ಮತ್ತ ಸೆಳೆದುಕೊಂಡು ಹೋಗಿ ರಕ್ಷಿಸಿದ್ದಾರೆ.
ಈ ಘಟನೆಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ಕರ್ತವ್ಯ ಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. 
ಮಾರ್ಕಂಡೇಯ ಕಾಟ್ಜು ಶ್ಲಾಘನೆ
ಇನ್ನು ಈ ವಿಡಿಯೋ ನೋಡಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು, ಅಧಿಕಾರಿಯ ಸಮಯ ಪ್ರಜ್ಞೆ ಹಾಗೂ ಶೌರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾನು ನನ್ನ ಕರ್ತವ್ಯ ಮಾಡಿದ್ದೇನೆ
ತಮ್ಮ ಶೌರ್ಯ ಮಾಧ್ಯಮಗಳಲ್ಲಿ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ ಗಗನ್ ದೀಪ್ ಸಿಂಗ್ ಅವರು, ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಗಂಗಾ ದಸರಾ ಸಂದರ್ಭದಲ್ಲಿ ನೂರಾರು ಭಕ್ತರು ಸೇರಿದ್ದರು. ಈ ವೇಳೆ ಗಲಾಟೆ ಆರಂಭವಾಗಿತ್ತು. ನಮಗೆ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದೆವು. ಅಷ್ಟು ಹೊತ್ತಿಗಾಗಲೇ ಯುವನ ವಿರುದ್ಧ ಕೆಲವರು ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ನಾನು ಆತನನ್ನು ಪಕ್ಕಕ್ಕೆ ಎಳೆದುಕೊಂಡು ಬಂದೆ. ಆ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು ಎಂದು ಗಗನ್ ದೀಪ್ ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.