ಸಿಬಿಎಸ್ ಇ ಪ್ರಶ್ನೆ ಪತ್ರಿಕೆ ಸೋರಿಕೆ: ದೆಹಲಿಯ 5 ಟ್ಯುಟೋರಿಯಲ್, 18 ಮಂದಿ ವಿದ್ಯಾರ್ಥಿಗಳ ವಿಚಾರಣೆ
ಸಿಬಿಎಸ್ ಇ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ದೆಹಲಿ ಸಿಸಿಬಿ ಪೊಲೀಸರು ಪ್ರಕರಣ ಸಂಬಂಧ 5 ಟ್ಯುಟೋರಿಯಲ್ ಹಾಗೂ 8 ಮಂದಿ ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

Published On :
ನವದೆಹಲಿ: ಭಾರಿ ಚರ್ಚೆಗೆ ಕಾರಣವಾಗಿರುವ ಸಿಬಿಎಸ್ ಇ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ದೆಹಲಿ ಸಿಸಿಬಿ ಪೊಲೀಸರು ಪ್ರಕರಣ ಸಂಬಂಧ 5 ಟ್ಯುಟೋರಿಯಲ್ ಹಾಗೂ 8 ಮಂದಿ ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಮಾಧ್ಯಮಗಳಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಸಿಬಿಎಸ್ ಇ 10 ಮತ್ತು 12ನೇ ತರಗತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಖಾಸಗಿ ಟುಟೋರಿಯಲ್ ಗಳ ಕೈವಾಡ ಶಂಕೆ ಮೇರೆಗೆ ದೆಹಲಿ ಪೊಲೀಸರು 5 ಟ್ಯುಟೋರಿಯಲ್ ಗಳು ಹಾಗೂ 18 ಮಂದಿ ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಅಧಿಕಾರಿಗಳು ರಾಜಿಂದರ್ ನಗರದ ಸುತ್ತಮುತ್ತಲಿರುವ ಐದು ಟ್ಯುಟೋರಿಯಲ್ ಗಳನ್ನು ವಿಚಾರಣೆಗೊಳಪಡಿಸಿದ್ದು, ಅಂತೆಯೇ ವಾಟ್ಸಪ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 18 ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಲಾಗಿದೆ.
ಈಗಾಗಲೇ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ದೆಹಲಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಸಿಸಿಬಿ ಪೊಲೀಸರಿಗೆ ಫ್ಯಾಕ್ಸ್ ಮೂಲಕ ದೂರು ನೀಡಲಾಗಿದೆ. ಮಾರ್ಚ್ 23ರಂದೇ ಸಿಸಿಬಿ ಪೊಲೀಸರಿಗೆ ಅನಾಮಧೇಯ ವ್ಯಕ್ತಿಯೋರ್ವ ಫ್ಯಾಕ್ಸ್ ನಲ್ಲಿ ದೂರು ರವಾನೆ ಮಾಡಿದ್ದ. ಪೊಲೀಸರು ಶಂಕೆ ವ್ಯಕ್ತಪಡಿಸಿರುವಂತೆ ದೆಹಲಿಯ ರಾಜಿಂದರ್ ನಗರದಲ್ಲಿರುವ ಟುಟೋರಿಯಲ್ ನಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಶಂಕೆ ಇದ್ದು, ಇದೇ ಕಾರಣಕ್ಕೆ ಇಲ್ಲಿಂದಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಂತೆಯೇ ಪೊಲೀಸರಿಗೆ ಬಂದಿರುವ ದೂರಿನಲ್ಲೂ ಇದೇ ರಾಜಿಂದರ್ ನಗರದ ಎರಡು ಖಾಸಗಿ ಶಾಲೆಗಳ ವಿರುದ್ಧ ಆರೋಪ ಮಾಡಲಾಗಿದೆ. ಅಲ್ಲದೆ ಮಾರ್ಚ್ 26ರಂದು ಶನಿವಾರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಂತೆಯೇ ಎನ್ವಲಪ್ ನಲ್ಲಿ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆದಿರುವ ಶೀಟ್ ಗಳು ಲಭ್ಯವಾಗಿತ್ತು. ಇದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬುದು ಅಧಿಕಾರಿಗಳಿಗೆ ಖಚಿತವಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ದೆಹಲಿ ಪೊಲೀಸರು 2 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಮಾರ್ಚ್ 27ರಂದು ಅರ್ಥಶಾಸ್ತ್ರ ಪತ್ರಿಕೆ ಸೋರಿಕೆ ಸಂಬಂಧ ಮತ್ತು ಮಾರ್ಚ್ 28ರಂದು ಗಣಿತಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ದೂರು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


