56 ಪಾಕ್ ಕೈದಿಗಳನ್ನು ಬಿಡುಗಡೆ ಮಾಡಲು ಕೇಂದ್ರ ನಿರ್ಧಾರ: ಸುಪ್ರೀಂ ಕೋರ್ಟ್ ಗೆ ಮಾಹಿತಿ
ಭಾರತ-ಪಾಕಿಸ್ತಾನ ರಾಜತಾಂತ್ರಿಕ ಅಧಿಕಾರಿಗಳ ಕಿರುಕುಳ ವಿವಾದ ಸುದ್ದಿಯಲ್ಲಿರುವಂತೆಯೇ ಕೇಂದ್ರ ಸರ್ಕಾರ ಶುಕ್ರವಾರ ಪಾಕಿಸ್ತಾನದ 56 ಕೈದಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿರುವುದಾಗಿ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.

Published On :
ನವದೆಹಲಿ: ಭಾರತ-ಪಾಕಿಸ್ತಾನ ರಾಜತಾಂತ್ರಿಕ ಅಧಿಕಾರಿಗಳ ಕಿರುಕುಳ ವಿವಾದ ಸುದ್ದಿಯಲ್ಲಿರುವಂತೆಯೇ ಕೇಂದ್ರ ಸರ್ಕಾರ ಶುಕ್ರವಾರ ಪಾಕಿಸ್ತಾನದ 56 ಕೈದಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿರುವುದಾಗಿ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಈ ಬಗ್ಗೆ ಇಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ಭಾರತದ ಜೈಲಿನಲ್ಲಿ 56 ಪಾಕಿಸ್ತಾನಿ ಕೈದಿಗಳ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗದ ಕಾರಣ ನಾವು ಅವರನ್ನು ಬಿಡುಗಡೆ ಮಾಡಿ ಮತ್ತೆ ಅವರ ದೇಶಕ್ಕೆ ವಾಪಸು ಕಳಿಸಲು ಬಯಸುತ್ತೇವೆ ಎಂದು ಹೇಳಿದೆ. ಅಲ್ಲದೆ ಈ ಬಗ್ಗೆ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಕೂಡ ಸಲ್ಲಿಕೆ ಮಾಡಿದೆ.
ಮಾರ್ಚ್ 7ಕ್ಕೂ ಮೊದಲು ಭಾರತ ಸಲ್ಲಿಸಿದ್ದ ಮಾನವೀಯ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದು ಪಾಕಿಸ್ತಾನ, ಮಾನವೀಯ ಆಧಾರದ ಮೇಲೆ ಕೈದಿಗಳ ಬಿಡುಗಡೆಗೆ ಒಪ್ಪಿಗೆ ಸೂಚಿಸಿತ್ತು. ಅದರಂತೆ ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸಿಫ್, 18 ವರ್ಷ ದಾಟದ ಹಾಗೂ 60 ವರ್ಷ ದಾಟಿದ ಕೈದಿಗಳನ್ನು ಬಿಡುಗಡೆ ಮಾಡೋಣ ಎಂಬ ಶರತ್ತು ಹಾಕಿದ್ದರು.
ಕೈದಿಗಳ ರಾಷ್ಟ್ರೀಯತೆ ಸ್ಪಷ್ಟಪಡಿಸದ ಪಾಕಿಸ್ತಾನ
ಇನ್ನು ಪ್ರಸ್ತುತ ಭಾರತ ಸರ್ಕಾರ 56 ಪಾಕಿಸ್ತಾನಿ ಕೈದಿಗಳ ಬಿಡುಗಡೆ ಮುಂದಾಗಿದೆಯಾದರೂ, ತನ್ನ ದೇಶದ ನಾಗರಿಕರ ಬಿಡುಗಡೆ ಮಾಡಿಸಿಕೊಳ್ಳಲು ಪಾಕಿಸ್ತಾನ ಸರ್ಕಾರ ಉತ್ಸುಕತೆ ತೋರುತ್ತಿಲ್ಲ. ಭಾರತ ಸರ್ಕಾರದ ಸತತ ಪ್ರಯತ್ನಗಳ ಹೊರತಾಗಿಯೂ ಪಾಕಿಸ್ತಾನ ವಿದೇಶಾಂಗ ಇಲಾಖೆ 56 ಕೈದಿಗಳ ರಾಷ್ಟ್ರೀಯತೆಯನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಹೀಗಾಗಿ ಕೈದಿಗಳ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ತಾನು ಸಲ್ಲಿಕೆ ಮಾಡಿರುವ ಅಫಿಡವಿಟ್ ನಲ್ಲೂ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಭಾರತದಲ್ಲಿರುವ ಎಲ್ಲ 56 ಕೈದಿಗಳಿಗೆ ಪಾಕಿಸ್ತಾನ ರಾಯಭಾರ ಕಚೇರಿಯ ಸಂಪರ್ಕದ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಅವರನ್ನು ಇನ್ನೂ ಹೆಚ್ಚು ದಿನ ಅವರನ್ನು ದೇಶದಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಲ್ಲದೆ ಭಾರತೀಯ ಜೈಲುಗಳಲ್ಲಿ ಇನ್ನೂ 340 ಪಾಕ್ ಪ್ರಜೆಗಳು ಇದ್ದಾರೆ ಎಂದು ಹೇಳಿದೆ.
ಇನ್ನು ಪ್ರಸ್ತುತ ಭಾರತ ಬಿಡುಗಡೆ ಮಾಡಲು ಮುಂದಾಗಿರುವ ಕೈದಿಗಳ ಪೈಕಿ ಮೀನುಗಾರರು ಸೇರಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


