ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಯಿಂದ ಕುದುರೆ ವ್ಯಾಪಾರ: ಒಮರ್ ಅಬ್ದುಲ್ಲಾ ಆರೋಪ ತಳ್ಳಿಹಾಕಿದ ರಾಮ್ ಮಾಧವ್
ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆ ಮಾಡುವ ಸಲುವಾಗಿ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂಬ ಒಮರ್ ಅಬ್ದುಲ್ಲಾ ಅರ ಆರೋಪವನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಗುರುವಾರ ತಳ್ಳಿಹಾಕಿದ್ದಾರೆ...

Published On :
ನವದೆಹಲಿ; ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆ ಮಾಡುವ ಸಲುವಾಗಿ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂಬ ಒಮರ್ ಅಬ್ದುಲ್ಲಾ ಅರ ಆರೋಪವನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಗುರುವಾರ ತಳ್ಳಿಹಾಕಿದ್ದಾರೆ.
ಒಮರ್ ಅಬ್ದುಲ್ಲಾ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ಸಲುವಾಗಿ ಬಿಜೆಪಿ ಕುದುರೆ ವ್ಯಾಪಾರ ಹಾಗೂ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಒಮರ್ ಅಬ್ದುಲ್ಲಾ ಅವರು ಆರೋಪ ಮಾಡಿದ್ದಾರೆ. ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಒಮರ್ ಅಬ್ದುಲ್ಲಾ ಅವರೇಕೆ ಭಯ ಪಡುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ.
ಒಮರ್ ಅಬ್ದುಲ್ಲಾ ಏಕೆ ಭೀತಿಗೊಳಗಾಗುತ್ತಿದ್ದಾರೆ? ಪಕ್ಷದ ನಾಯಕರು ಒಮರ್ ಅಬ್ದುಲ್ಲಾ ಅವರಿಗೆ ಪ್ರಾಮಾಣಿಕರಾಗಿದ್ದಾರೆಂಬ ಭರವಸೆ ನನಗಿದೆ. ನಾವು ಯಾವುದೇ ರೀತಿಯ ಕುದುರೆ ವ್ಯಾಪಾರವನ್ನು ಮಾಡುತ್ತಿಲ್ಲ. ನಿಜ ಹೇಳಬೇಕೆಂದರೆ, ಒಮರ್ ಅಬ್ದುಲ್ಲಾ ಅವರ ಪಕ್ಷದಿಂದಲೇ ಈ ಹಿಂದೆ ಕುದುರೆ ವ್ಯಾಪಾರ ನಡೆಸಿತ್ತು. ಇತಿಹಾಸವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಒಮರ್ ಅವರು ಮೊದಲು ತಮ್ಮ ಪಕ್ಷ ಹಾಗೂ ತಮ್ಮ ಸಂಖ್ಯಾಬಲದ ಕುರಿತು ಚಿಂತನೆಗಳನ್ನು ನಡೆಸಲಿ ಎಂದು ಹೇಳಿದ್ದಾರೆ.
ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ, ಪಿಜಿಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡಿಲ್ಲ. ದೇಶದ ಹಿಸಾಸಕ್ತಿ ಹಾಗೂ ಜಮ್ಮು ಮತ್ತು ಕಾಶ್ಮೀರ ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರವನ್ನು ಕೈಗೊಳ್ಳಲಾಗಿತ್ತು.
3 ವರ್ಷಗಳ ಹಿಂದೆ ಬಿಜೆಪಿಯು ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗ ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪನೆಗೊಂಡಿತ್ತು. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೂ ಕೂಡ ಕಂಡಿತ್ತು. ಹಲವು ಸಂಕಷ್ಟ ಹಾಗೂ ಸಮಸ್ಯೆಗಳು ಎದುರಾದರೂ ಭಯೋತ್ಪಾದನೆಯನ್ನು ಮಟ್ಟ ಹಾಕಲು ಬಿಜೆಪಿ-ಪಿಡಿಪಿ ಮೈತ್ರಿ ಕೆಲಸ ಮಾಡಿತ್ತು. ಪ್ರತ್ಯೇಕತಾವಾದಿಗಳ ಮನವೊಲಿಸಲು ಸಾಕಷ್ಟು ಯತ್ನ ನಡೆಸಿದ್ದೆವು. ಇನ್ನು ಅಭಿವೃದ್ಧಿಯತ್ತ ನೋಡಿದರೆ, ಕೇಂದ್ರ ಸರ್ಕಾರ ರೂ.80,000 ಕೋಟಿ ಪ್ಯಾಕೇಜ್'ನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಘೋಷಣೆ ಮಾಡಿತ್ತು ಎಂದು ಹೇಳಿದ್ದಾರೆ.
ಬಳಿಕ ಜಮ್ಮು ಮತ್ತು ಕಾಶಅೀರದಲ್ಲಿ ಸರ್ಕಾರ ರಚನೆ ಸಾಧ್ಯತೆ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ಪ್ರಜಾಪ್ರಭುತ್ವಕ್ಕೆ ಒಂದು ಅವಕಾಶ ನೀಡೋಣ. ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷ ಮುಂದಕ್ಕೆ ಬಾರದೇ ಹೋದರೆ, ಚುನಾವಣೆ ನಡೆಸೋಣ. ಆದರೆ, ಈಗಲೂ ಎರಡೂವರೆ ವರ್ಷಗಳಿವೆ ಎಂದಿದ್ದಾರೆ.
ಯಾವುದೇ ಪಕ್ಷ ಸರ್ಕಾರ ರಚನೆ ಮಾಡುವುದರ ವಿರುದ್ಧ ನಾವಿಲ್ಲ. ಒಂದು ವೇಳೆ ಸರ್ಕಾರ ರಚನೆ ಮಾಡಲು ಬಂದರೆ ಮಾಡಲಿ. ಪ್ರಸ್ತುತ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಮುಂದುವರೆಯಲಿ ಎಂದು ನಾವು ಬಯಸಿದ್ದೇವೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿಜಮ್ಮು ಮತ್ತು ಕಾಶ್ಮೀರJammu and KashmirRam madhavರಾಮ್ ಮಾಧವ್Omar Abdullahಒಮರ್ ಅಬ್ದುಲ್ಲಾHorse tradingಕುದುರೆ ವ್ಯಾಪಾರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


