ನೀತಿ ಆಯೋಗ ಮಂಡಳಿಯಿಂದ ಐತಿಹಾಸಿಕ ಬದಲಾವಣೆ ಸಾಧ್ಯ: ಪ್ರಧಾನಿ ನರೇಂದ್ರ ಮೋದಿ
ನೀತಿ ಆಯೋಗದ ಆಡಳಿತ ಮಂಡಳಿ ಒಂದು ಉತ್ತಮ ವೇದಿಕೆಯಾಗಿದ್ದು ಅದು ದೇಶದಲ್ಲಿ ಐತಿಹಾಸಿಕ ಬದಲಾವಣೆಯನ್ನು ತರಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ....

ನವದೆಹಲಿ: ನೀತಿ ಆಯೋಗದ ಆಡಳಿತ ಮಂಡಳಿ ಒಂದು ಉತ್ತಮ ವೇದಿಕೆಯಾಗಿದ್ದು ಅದು ದೇಶದಲ್ಲಿ ಐತಿಹಾಸಿಕ ಬದಲಾವಣೆಯನ್ನು ತರಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಇಂದು ರಾಷ್ಟ್ರಪತಿ ಭವನದಲ್ಲಿ ನೀತಿ ಆಯೋಗದ ಆಡಳಿತ ಮಂಡಳಿಯ ನಾಲ್ಕನೇ ಸಭೆಯನ್ನುದ್ದೇಶಿ ಮಾತನಾಡಿದರು.
ಸಭೆಯಲ್ಲಿ ನೆರೆ ಪೀಡಿತ ರಾಜ್ಯಗಳಿಗೆ ಪ್ರಧಾನ್ಯತೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈ ರಾಜ್ಯಗಳಿಗೆ ಎಲ್ಲಾ ರೀತಿಯ ನೆರವನ್ನು ನೀಡಲಿದೆ. ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯಗಳಿಗೆ ನೆರವು ನೀಡಲಾಗುವುದು ಎಂದರು. ಈಶಾನ್ಯ ರಾಜ್ಯಗಳಾದ ತ್ರಿಪುರಾ, ಅಸ್ಸಾಂ, ಮಿಜೋರಂ ಮತ್ತು ಮಣಿಪುರಗಳು ಕಳೆದ ಕೆಲ ದಿನಗಳಿಂದ ಪ್ರವಾಹಕ್ಕೆ ತೀವ್ರ ತೊಂದರೆಗೊಳಗಾಗಿವೆ.
ಇದಕ್ಕೂ ಮುನ್ನ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಮತ್ತು ಇತರ ನಿಯೋಗಗಳ ಅಧಿಕಾರಿಗಳನ್ನು ಸ್ವಾಗತಿಸಿದರು.
ಸಭೆಯಲ್ಲಿ ಕೇಂದ್ರ ಸಚಿವರುಗಳು, ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ ಗಳು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ. ಆಡಳಿತದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಟೀಮ್ ಇಂಡಿಯಾ ಎಂಬ ಪರಿಕಲ್ಪನೆ ಮೂಲಕ ಸಹಕಾರಿ ಮತ್ತು ಸ್ಪರ್ಧಾತ್ಮಕ ಮಟ್ಟ ಬೆಳೆಸಬೇಕಾಗುತ್ತದೆ. ಇದಕ್ಕೆ ಸರಕು ಮತ್ತು ಸೇವಾ ತೆರಿಗೆಯ ಸುಗಮ ಜಾರಿ ಒಂದು ಉದಾಹರಣೆ ಎಂದು ಪ್ರಧಾನಿ ಹೇಳಿದರು.
ರಾಜ್ಯಗಳ ಮುಖ್ಯಮಂತ್ರಿಗಳು ನೀತಿ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ಉಪ ಗುಂಪುಗಳು ಮತ್ತು ಸಮಿತಿಗಳ ಮೂಲಕ ಸ್ವಚ್ಛ ಭಾರತ್ ಅಭಿಯಾನ, ಡಿಜಿಟಲ್ ಇಂಡಿಯಾ ಮತ್ತು ಕೌಶಲ್ಯಾಭಿವೃದ್ಧಿಯಂತಹ ವಿಷಯಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಭಾರತದ ಆರ್ಥಿಕತೆಯ ಬೆಳವಣಿಗೆ 2017-18ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 7.7ರಷ್ಟಿದ್ದು ಅದನ್ನೀಗ ಎರಡು ಅಂಕೆಗಳಿಗೆ ಹೆಚ್ಚಿಸುವುದು ಸವಾಲಾಗಿದೆ. ಅದಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ನವಭಾರತ 2022ರ ದೃಷ್ಟಿಕೋನಕ್ಕೆ ವೇದಿಕೆ ಸಿದ್ದವಾಗಿದ್ದು, ಈ ನಿಟ್ಟಿನಲ್ಲಿ ರೈತರ ಆದಾಯ ಹೆಚ್ಚಳ, ಮಹಾತ್ವಾಕಾಂಕ್ಷಿ ಜಿಲ್ಲೆಗಳ ಬೆಳವಣಿಗೆ, ಆಯುಷ್ಮಾನ್ ಭಾರತ್, ಮಿಷನ್ ಇಂದ್ರಧನುಷ್, ಪೌಷ್ಟಿಕಾಂಶ ಅಭಿಯಾನ ಮತ್ತು ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನಾಚರಣೆಗಳು ಸೇರಿವೆ ಎಂದು ಪ್ರಧಾನಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


