ದೇಶ

ಪತ್ರಕರ್ತ ಬುಖಾರಿ ಹತ್ಯೆ ಪ್ರಕರಣ: 3 ಶಂಕಿತ ಹಂತಕರಲ್ಲಿ ಓರ್ವ ಪಾಕ್ ಉಗ್ರ ನವೀದ್; ಗುಪ್ತಚರ ಇಲಾಖೆ ಮಾಹಿತಿ

ರೈಸಿಂಗ್ ಕಾಶ್ಮೀರ್ ಪತ್ರಿಕೆ ಮುಖ್ಯ ಸಂಪಾದಕ ಶುಜಾತ್ ಬುಖಾರಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಮೂವರು ಹಂತಕರ ಪೈಕಿ ಓರ್ವ...

ಪತ್ರಕರ್ತ ಬುಖಾರಿ ಹತ್ಯೆ ಪ್ರಕರಣ: 3 ಶಂಕಿತ ಹಂತಕರಲ್ಲಿ ಓರ್ವ ಪಾಕ್ ಉಗ್ರ ನವೀದ್; ಗುಪ್ತಚರ ಇಲಾಖೆ ಮಾಹಿತಿ
ಶುಜಾತ್ ಬುಖಾರಿ
Published On :
ನವದೆಹಲಿ: ರೈಸಿಂಗ್ ಕಾಶ್ಮೀರ್ ಪತ್ರಿಕೆ ಮುಖ್ಯ ಸಂಪಾದಕ ಶುಜಾತ್ ಬುಖಾರಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಮೂವರು ಹಂತಕರ ಪೈಕಿ ಓರ್ವ ಪಾಕಿಸ್ತಾನ ಮೂಲದ ಉಗ್ರ ನವೀದ್ ಜಾಟ್ ಎಂದು ಗುಪ್ತಚರ ಇಲಾಖೆ ಶುಕ್ರವಾರ ಹೇಳಿದೆ. 
ಪಾಕಿಸ್ತಾನ ಮೂಲದ ಉಗ್ರನಾಗಿರುವ ನವೀದ್ ಜಾಟ್ ಕಾಶ್ಮೀರದಲ್ಲಿ ನಡೆದ ಹಲವಾರು ದಾಳಿಗಳಲ್ಲಿ ಭಾಗಿಯಾಗಿದ್ದಾನೆ. ಅಲ್ಲದೆ, ಎನ್ಐಎ ಹುಡುಕಾಟ ನಡೆಸುತ್ತಿರುವ ಉಗ್ರರಲ್ಲಿ ಈತ ಕೂಡ ಒಬ್ಬನಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನವೀದ್ ಶ್ರೀನಗರ ಆಸ್ಪತ್ರೆಯಿಂದ ಪರಾರಿಯಾಗಿದ್ದ. 
ಬುಖಾರಿಯವರ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶಂಕಿತ ಹಂತಕರ ಫೋಟೋಗಳನ್ನು ಬಿಡುಗಡೆ ಮಾಡಿದ್ದರು. 
ಬುಖಾರಿ ಹತ್ಯೆಯಾದ ಸ್ಥಳದಲ್ಲಿ ಕೆಲ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ದೊರಕಿದ್ದು, ಸಿಸಿಟಿವಿ ದೃಶ್ಯಾವಳಿಗಳಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿರುವ ಮೂವರು ಉಗ್ರರಿರುವುದು ಕಂಡು ಬಂದಿದೆ. 
ಬೈಕ್ ನಲ್ಲಿ ಮುಂದೆ ಕುಳಿತಿರುವ ವ್ಯಕ್ತಿ ಕಪ್ಪು ಹೆಲ್ಮೆಟ್ ಧರಿಸಿದ್ದು, ಮಧ್ಯದಲ್ಲಿದ್ದ ವ್ಯಕ್ತಿಯ ಕೈಯಲ್ಲಿ ಬ್ಯಾಗ್ ಇದ್ದು ಆತ ಕೂಡ ಮುಖವನ್ನು ಮುಂಚಿಕೊಂಡಿದ್ದಾನೆ. ಕೈಯಲ್ಲಿದ್ದ ಬ್ಯಾಗ್ ನಲ್ಲಿ ಶಸ್ತ್ರಾಸ್ತ್ರಗಳಿರಬಹುದು ಎಂದು ಶಂಕಿಸಲಾಗಿದೆ. ಇನ್ನು ಈತನ ಹಿಂದೆ ಕುಳಿತಿರುವ ವ್ಯಕ್ತಿ ಕಪ್ಪು ಮುಖವಾಡವನ್ನು ತೊಟ್ಟಿರುವುದು ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ. 
ಪಾಕಿಸ್ತಾನ ಮೂಲದ ಉಗ್ರನಾಗಿರುವ ನವೀಡ್ ಕಳೆದ ಫೆ.6 ರಂದು ಶ್ರೀನಗರದಲ್ಲಿನ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಬಂಧನಕ್ಕೊಳಗಾಗಿದ್ದ ನವೀದ್ ನನ್ನು ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಇಬ್ಬರು ಪೊಲೀಸರನ್ನು ಗುಂಡಿಟ್ಟು ಹತ್ಯೆಗೈದ ಆತನ ಸಂಗಡಿಗರು ನವೀದ್ ಪರಾರಿಯಾಗಲು ಸಹಕರಿಸಿದ್ದರು. 
ಇಫ್ತಾರ್ ಕೂಟವೊಂದರಲ್ಲಿ ಪಾಲ್ಕೊಳ್ಳಲು ಬುಖಾರಿಯವರು ತಮ್ಮ ಪತ್ರಿಕಾ ಕಚೇರಿಯಿಂದ ಹೊರಟ ಸಂದರ್ಭದಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಬುಖಾರಿ ಮತ್ತು ಅವರ ಅಂಗರಕ್ಷಕ ಸಾವಿಗೀಡಾಗಿದ್ದರು. ಘಟನೆಯಲ್ಲಿ ಓರ್ವ ಪೊಲೀಸ್ ಪೇದೆ ಹಾಗೂ ಓರ್ವ ನಾಗರೀಕ ಕೂಡ ಗಾಯಗೊಂಡಿದ್ದರು. ಈಗಲೂ ಈ ಇಬ್ಬರ ಸ್ಥಿತಿ ಗಂಭೀರವಾಗಿದೆ. 
ಬುಖಾರಿ ಈ ಹಿಂದೆ ದ ಹಿಂದು ಪತ್ರಿಕೆಯ ಕಾಶ್ಮೀರ ವರಿದಿಗಾರರಾಗಿದ್ದರು. ಕಾಶ್ಮೀರದಲ್ಲಿ ಹಲವಾರು ಶಾಂತಿ ಸಭೆಗಳನ್ನು ಆಯೋಜಿಸುವಲ್ಲಿ ಬುಖಾರಿ ಪ್ರಮುಖ ಪಾತ್ರವಹಿಸಿದ್ದರು. ಈ ಹಿಂದೆ 2000ರಲ್ಲೂ ಅವರ ಮೇಲೆ ದಾಳಿ ಯತ್ನ ನಡೆದಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.