ಬಿಜೆಪಿ ವಿಜಯ್ ಮಲ್ಯರನ್ನು ಅದರ ರಾಯಭಾರಿ ಮಾಡಿಕೊಳ್ಳಲಿ: ಶಿವಸೇನೆ ಟೀಕೆ
ಸಾವಿರಾರು ಕೋಟಿ ರೂಪಾಯಿ ಸಾಲ ಪಾವತಿಸದೆ ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ...

ಮುಂಬೈ: ಸಾವಿರಾರು ಕೋಟಿ ರೂಪಾಯಿ ಸಾಲ ಪಾವತಿಸದೆ ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು 'ಸ್ಮಾರ್ಟ್' ಎಂದು ಕರೆದಿರುವ ಭಾರತೀಯ ಜನತಾ ಪಾರ್ಟಿಯ ನಾಯಕ ಜುವಾಲ್ ಒರಾಮ್ ವಿರುದ್ಧ ಹರಿಹಾಯ್ದಿರುವ ಶಿವಸೇನೆ, ಬಿಜೆಪಿಯು ತನ್ನ ಮೇಕ್ ಇನ್ ಇಂಡಿಯಾ ಮತ್ತು ಸ್ಟಾರ್ಟ್ಅಪ್ ಇಂಡಿಯಾ ಅಭಿಯಾನಕ್ಕೆ ವಿಜಯ್ ಮಲ್ಯರನ್ನು ರಾಯಭಾರಿಯನ್ನಾಗಿ ನೇಮಿಸಿಕೊಳ್ಳಬೇಕೆಂದು ವ್ಯಂಗವಾಡಿದೆ.
ಶಿವಸೇನೆಯ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಈ ರೀತಿ ಬರೆದುಕೊಂಡಿದ್ದು, ಒಂದು ಕಡೆ ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದರ ಬಗ್ಗೆ ಮಾತನಾಡುತ್ತಾರೆ, ಇನ್ನೊಂದು ಕಡೆ ಅಕ್ರಮ ಹಣ ಸಂಗ್ರಹಣೆ, ವರ್ಗಾವಣೆ ವಿಚಾರದಲ್ಲಿ ತಲೆಮರೆಸಿಕೊಂಡವರನ್ನು ಬಿಜೆಪಿಯ ನಾಯಕರು ತಮ್ಮ ಆದರ್ಶವೆಂಬಂತೆ ಮಾತನಾಡುತ್ತಾರೆ ಎಂದು ಟೀಕಿಸಿದೆ.
ಸಾರ್ವಜನಿಕವಾಗಿ ಮಾತನಾಡುವಾಗ ಪಕ್ಷದ ನಾಯಕರು ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಿ ಎಂದು ಪ್ರಧಾನಿಯವರು ಆದೇಶ ನೀಡಿದ್ದರು. ಆದರೂ ಕೂಡ ಕೆಲವು ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಶಿವಸೇನೆ ಹೇಳಿದೆ.
ಜುವಾಲ್ ಒರಾಮ್ ಅವರ ಭಾಷಣಗಳನ್ನು ಮತ್ತಷ್ಟು ಟೀಕಿಸಿರುವ ಶಿವಸೇನೆ, ತಾವು ಭ್ರಷ್ಟಾಚಾರವನ್ನು ಮತ್ತು ಭ್ರಷ್ಟಾಚಾರಿಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಹೇಳುವ ಮೋದಿಯವರ ಪಕ್ಷದಲ್ಲಿ ಒರಾಮ್ ನಂತವರು ವಿಜಯ್ ಮಲ್ಯರಂತವರನ್ನು ಆದರ್ಶವಾದಿಗಳೆನ್ನುತ್ತಾರೆ. ಇದು ಬಿಜೆಪಿಯ ತಂತ್ರವಾಗಿದ್ದರೆ ವಿಜಯ್ ಮಲ್ಯ ಅವರನ್ನೇ ಅದರ ಕಾರ್ಯಕ್ರಮಗಳ ಬ್ರಾಂಡ್ ಅಂಬಾಸಿಡರನ್ನಾಗಿ ಮಾಡಲಿ. ಒರಾಮ್ ರಂತವರ ಮಾತುಗಳಿಂದಲೇ ಬಿಜೆಪಿಯ ಮುಖವಾಡ ಬಯಲಾಗುತ್ತದೆ. ರಾಹುಲ್ ಗಾಂಧಿ, ಶಶಿ ತರೂರ್ ಅವರ ಮುಸ್ಲಿಂಮರ ಬಗೆಗಿನ ನಿಲುವಿನ ಬಗ್ಗೆ ಮಾತನಾಡುವ ಬಿಜೆಪಿಯವರು ಈಗ ವಿಜಯ್ ಮಲ್ಯರಂತಹ ಹೊಸ ರಾಯಭಾರಿ ಬಗ್ಗೆ ಹೇಳಲಿ ಎಂದು ಖಾರವಾಗಿ ಟೀಕಿಸಿದೆ.
ಡಿಎಸ್ ಕೆ ಗ್ರೂಪ್ ವಂಚನೆ ಕೇಸು ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂರಂತವರನ್ನು ಕೂಡ ಬಿಜೆಪಿ ಮುಂದೊಂದು ದಿನ ಹೊಗಳಿದರೆ ಅಚ್ಚರಿಪಡಬೇಕಾಗಿಲ್ಲ ಎಂದಿದೆ.
ಕಳೆದ ಶುಕ್ರವಾರ ಹೈದರಾಬಾದಿನಲ್ಲಿ ಮಾತನಾಡಿದ್ದ ಬಿಜೆಪಿ ನಾಯಕ ಒರಾಮ್, ವಿಜಯ್ ಮಲ್ಯ ಅವರನ್ನು ಸ್ಮಾರ್ಟ್, ಬುದ್ಧಿವಂತ ಎಂದು ಹೇಳಿದ್ದರು. ಯಶಸ್ವಿ ಉದ್ಯಮಿಗಳಾಗಬೇಕಾದರೆ ವಿಜಯ್ ಮಲ್ಯರ ಹಾದಿಯನ್ನು ಅನುಸರಿಸಿ ಬ್ಯಾಂಕುಗಳಿಂದ ಸಾಲ ಪಡೆದುಕೊಳ್ಳಿ ಎಂದು ರಾಷ್ಟ್ರೀಯ ಬುಡಕಟ್ಟು ಉದ್ಯಮಿಗಳ ಸಮ್ಮೇಳನದಲ್ಲಿ ಹೇಳಿದ್ದರು.
ನೀವೆಲ್ಲಾ ವಿಜಯ್ ಮಲ್ಯ ಅವರನ್ನು ಬೈಯುತ್ತೀರಿ, ಆದರೆ ವಿಜಯ್ ಮಲ್ಯ ಯಾರು? ಅವರು ತುಂಬಾ ಬುದ್ದಿವಂತ. ಅವರು ಬುದ್ದಿವಂತರಿಗೆ ಉದ್ಯೋಗ ನೀಡಿದ್ದಾರೆ. ಬ್ಯಾಂಕು, ರಾಜಕಾರಣಿಗಳು ಮತ್ತು ಸರ್ಕಾರಗಳನ್ನೆಲ್ಲಾ ತನಗೆ ಬೇಕಾದಂತೆ ನಡೆಸಿಕೊಂಡು ಬೇಕಾದ್ದನ್ನು ಅವರು ಪಡೆದುಕೊಂಡಿದ್ದಾರೆ. ನಿಮ್ಮನ್ನು ತಡೆದವರು ಯಾರು? ಆದಿವಾಸಿಗಳು ಕೂಡ ಈ ಸಮಾಜದ ಮೇಲೆ ಪ್ರಭಾವ ಬೀರಬಹುದು ಅಲ್ಲವೇ? ಬ್ಯಾಂಕಲ್ಲಿ ಸಾಲ ಪಡೆದುಕೊಳ್ಳಬೇಡಿ ಎಂದು ನಿಮಗೆ ಯಾರು ಹೇಳಿದ್ದಾರೆ ಎಂದು ಜುಯಲ್ ಒರಾಮ್ ಕೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


