ದೇಶ

ಜಿಎಸ್'ಟಿ, ನೋಟು ನಿಷೇಧವಷ್ಟೇ ನಮ್ಮ ಸರ್ಕಾರದ ಸಾಧನೆಯಲ್ಲ; ಪ್ರಧಾನಿ ಮೋದಿ

ಸರಕು ಮತ್ತು ಸೇವಾ ತೆರಿಗೆ, ನೋಟು ನಿಷೇಧವಷ್ಟೇ ನಮ್ಮ ಸರ್ಕಾರದ ಸಾಧನೆಯಲ್ಲ, ಆರ್ಥಿಕ ಸೇರ್ಪಡೆ, ಶೌಚಾಲಯ ನಿರ್ಮಾಣ ಮತ್ತು ವಿದ್ಯುದೀಕರಣದಂತಹ ಸಾಕಷ್ಟು ವಿಚಾರಗಳ ಬಗ್ಗೆಯೂ ಹಲವು ದಿನಗಳ ಕಾಲ ಮಾತನಾಡಬಹುದು ಎಂದು ಪ್ರಧಾನಮಂತ್ರಿ...

ಜಿಎಸ್'ಟಿ, ನೋಟು ನಿಷೇಧವಷ್ಟೇ ನಮ್ಮ ಸರ್ಕಾರದ ಸಾಧನೆಯಲ್ಲ; ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Published On :
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ, ನೋಟು ನಿಷೇಧವಷ್ಟೇ ನಮ್ಮ ಸರ್ಕಾರದ ಸಾಧನೆಯಲ್ಲ, ಆರ್ಥಿಕ ಸೇರ್ಪಡೆ, ಶೌಚಾಲಯ ನಿರ್ಮಾಣ ಮತ್ತು ವಿದ್ಯುದೀಕರಣದಂತಹ ಸಾಕಷ್ಟು ವಿಚಾರಗಳ ಬಗ್ಗೆಯೂ ಹಲವು ದಿನಗಳ ಕಾಲ ಮಾತನಾಡಬಹುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ. 
ಖಾಸಗಿ ಸುದ್ದಿವಾಹಿನಿ ಝೀ ನ್ಯೂಸ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಚುನಾವಣೆ ಹಿನ್ನಲೆಯಲ್ಲಿ ಬಜೆಟ್ ಕುರಿತ ಪ್ರಶ್ನೆಗೆ ಉತ್ತರಿಸಿ, ನಮ್ಮ ಸರ್ಕಾರದ ಗುರಿ ಕೇವಲ ಅಭಿವೃದ್ಧಿಯಾಗಿದೆ. ಮೊದಲನೆಯದಾಗಲೀ ಅಥವಾ ಕೊನೆಯ ಬಜೆಟ್ ಆಗಲಿ, ಚುನಾವಣೆ ಇರಲಿ, ಇಲ್ಲದೇ ಇರಲಿ ನಮ್ಮ ಗುರಿ ಏನಿದ್ದರೂ ಅಭಿವೃದ್ಧಿಯಾಗಿದೆ ಎಂದು ಹೇಳಿದ್ದಾರೆ. 
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನನ್ನ ಮಂತ್ರ. ಇದಕ್ಕಾಗಿ ಅಗತ್ಯವಿರುವ ಯಾವುದೇ ಕೆಲಸವಾದರೂ ಅದನ್ನು ನಮ್ಮ ಸರ್ಕಾರ ಮಾಡಿಯೇ ಮಾಡುತ್ತದೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ ಇದ್ದಾಗಲೇ ಜಿಎಸ್'ಟಿ ಕುರಿತ ಚರ್ಚೆಗಳು ಆರಂಭವಾಗಿದ್ದವು. ಆದರೆ, ವಿವಿಧ ರಾಜ್ಯಗಳಿಂದ ವ್ಯಕ್ತವಾಗುವ ಹಿಸಾಸಕ್ತಿಗಳನ್ನು ಯುಪಿಎ ಸರ್ಕಾರ ಗುರ್ತಿಸಲೇ ಇಲ್ಲ. ಗುಜರಾತ್ ರಾಜ್ಯ ಮುಖ್ಯಮಂತ್ರಿಯಾಗಿ ನಾನು ಈ ವಿಚಾರದ ಬಗ್ಗೆ ದನಿಯೆತ್ತಿದ್ದೆ. ಆದರೆ, ಕೇಂದ್ರ ಸರ್ಕಾರ ನನ್ನ ಮಾತಿಗೆ ಕಿವಿಕೊಟ್ಟಿರಲಿಲ್ಲ. ಇದೇ ರೀತಿ ತಮಿಳುನಾಡು ಸರ್ಕಾರ ಕೂಡ ದನಿಯೆತ್ತಿತ್ತು, ಕಾಂಗ್ರೆಸ್ ಅಧಿಕಾರದಲ್ಲಿದ್ದ ಮಹಾರಾಷ್ಟ್ರ ಕೂಡ ದನಿಯೆತ್ತಿತ್ತು ಎಂದು ತಿಳಿಸಿದ್ದಾರೆ. 
ಜಿಎಸ್'ಟಿ, ನೋಟು ನಿಷೇಧವಷ್ಟೇ ನಮ್ಮ ಸರ್ಕಾರ ಸಾಧನೆಯಲ್ಲ. ದೇಶದ ವಿವಿಧ ಭಾಗಗಳಲ್ಲಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಜಿಎಸ್'ಟಿ, ನೋಟು ನಿಷೇಧವಷ್ಟೇ ನಮ್ಮ ಸರ್ಕಾರದ ಸಾಧನೆಯೆಂದು ಪರಿಗಣಿಸಿದರೆ, ಇದು ನನಗೆ ಅತೀದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ. ಬ್ಯಾಂಕ್ ಗಳ ಬಗ್ಗೆ ತಿಳಿಯದ ಜನರಿಗೆ ಬ್ಯಾಂಕಿಂಗ್ ಕಾರ್ಯಗಳು ತಿಳಿಯುವಂತೆ ಮಾಡಿದ್ದೇನೆ. ನಾಲ್ಕು ಲಕ್ಷಕ್ಕೂ ಅಧಿಕ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದೇವೆ. ಮೂರು ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕವನ್ನು ನೀಡಿದ್ದೇವೆ. ಗ್ರಾಮಗಳಲ್ಲಿ ವಿದ್ಯುತ್ ವ್ಯವಸ್ಥೆಗಳನ್ನು ಕಲ್ಪಿಸಿದ್ದೇವೆ. ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ವಿಮೆ, ವಿದ್ಯುತ್ ಬಳಕೆ ಮಿತಗೊಳಿಸಲು ಎಲ್ಇಡಿ ಬಲ್ಬ್ ಗಳನ್ನು ನೀಡಿದ್ದೇವೆ. ಆರ್ಥಿಕತೆಯನ್ನು ಮುಂದಿಟ್ಟುಕೊಂಡು ನಾವು ಮಾಡಿದ ಕೆಲಸ ಬಗ್ಗೆ ಇದೀಗ ನಾನು ಮಾತನಾಡುತ್ತಿದ್ದೇನೆ. 
ನಮ್ಮ ಸರ್ಕಾರ ಮಾಡಿದ ಎಲ್ಲಾ ಕಾರ್ಯಗಳನ್ನು ನಾನು ಪಟ್ಟಿ ಮಾಡಿ ಹೇಳಬಲ್ಲೆ. ಇದಕ್ಕೆ ಸುದ್ದಿವಾಹಿನಿ ನನ್ನ ಸಂದರ್ಶನವನ್ನು ಒಂದು ವಾರಗಳ ಕಾಲ ಪ್ರಸಾರ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಉದ್ಯೋಗ ಸೃಷ್ಟಿ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ಔಪಚಾರಿಕ ಆರ್ಥಿಕತೆಯಲ್ಲಿ 70 ಲಕ್ಷ ಜನರು ಭವಿಷ್ಯ ನಿಧಿ ಯೋಜನೆಯಡಿಯಲ್ಲಿ ತಮ್ಮ ಹೆಸರುಗಳನ್ನು ನಮೂದಿಸಿದ್ದಾರೆ, ಉಚಿತ ಮುದ್ರಾ ಯೋಜನೆಯಡಿಯಲ್ಲಿ 10 ಕೋಟಿ ಜನರು ಸಾಲವನ್ನು ಪಡೆದುಕೊಂಡಿದ್ದಾರೆ. ಹಲವು ವಲಯಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸಲಾಗುತ್ತಿದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.