ಮೋದಿಯನ್ನು ರಾವಣ ಮಾಡಿದ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್ ಐಆರ್!
ಉತ್ತರ ಪ್ರದೇಶದ ರಾಹುಲ್ ಸ್ವಕ್ಷೇತ್ರ ಅಮೇಥಿಯಲ್ಲಿ ಪ್ರಧಾನಿ ಮೋದಿ ಅವರನ್ನು ರಾವಣನನ್ನಾಗಿ ಬಿಂಬಿಸಿ ಬ್ಯಾನರ್ ಕಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಮಾಶಂಕರ್ ಶುಕ್ಲಾ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ.

Published On :
ಪಾಟ್ನಾ: ಉತ್ತರ ಪ್ರದೇಶದ ರಾಹುಲ್ ಸ್ವಕ್ಷೇತ್ರ ಅಮೇಥಿಯಲ್ಲಿ ಪ್ರಧಾನಿ ಮೋದಿ ಅವರನ್ನು ರಾವಣನನ್ನಾಗಿ ಬಿಂಬಿಸಿ ಬ್ಯಾನರ್ ಕಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಮಾಶಂಕರ್ ಶುಕ್ಲಾ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ರಾಮನಾಗಿ ಪ್ರಧಾನಿ ಮೋದಿ ಅವರನ್ನು ರಾವಣನಾಗಿ ಬಿಂಬಿಸುವ ಮೂಲಕ ದೇಶದ ಪ್ರಧಾನಿಗಳ ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿ ಉತ್ತರ ಪ್ರದೇಶ ಬಿಜೆಪಿ ಮುಖಂಡ ಸೂರ್ಯ ಪ್ರಕಾಶ್ ತಿವಾರಿ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಇದೀಗ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಜನವರಿ 14 ಭಾನುವಾರ ಉತ್ತರ ಪ್ರದೇಶದ ಗೌರಿ ಗಂಜ್ ರೈಲ್ವೇ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಅವರ ಬೃಹತ್ ಬ್ಯಾನರ್ ಕಟ್ಟಲಾಗಿತ್ತು. ಅದರಲ್ಲಿ ರಾಹುಲ್ ಗಾಂಧಿ ಅವರನ್ನು ಕೃಷ್ಣ ಮತ್ತು ರಾಮನಾಗಿ ಬಿಂಬಿಸಿ ಅದೇ ಚಿತ್ರದಲ್ಲಿ ಪ್ರಧಾನಿ ಮೋದಿ ಅವರನ್ನು ರಾವಣನಾಗಿ ಬಿಂಬಿಸಲಾಗಿತ್ತು. ಅಂತೆಯೇ ಪ್ರಧಾನಿ ಮೋದಿಯಲ್ಲ ರಾಹುಲ್ ಗಾಂಧಿ ಅವರು ರಾಹುಲ್ ರಾಜ್ಯ (ರಾಮರಾಜ್ಯ)ವನ್ನು ತರಲಿದ್ದಾರೆ ಎಂದು ಬರೆದಿತ್ತು. ಈ ಪೋಸ್ಟರ್ ಕುರಿತ ಸುದ್ದಿ ರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ದೇಶವ್ಯಾಪಿ ಸುದ್ದಿಗೆ ಗ್ರಾಸವಾಗಿತ್ತು. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಈ ಬಗ್ಗೆ ಬಿಜೆಪಿ ಪಕ್ಷ ಆಕ್ರೋಶ ವ್ಯಕ್ತಪಡಿಸಿತ್ತು.
ಕಾಂಗ್ರೆಸ್ ಪಕ್ಷಕ್ಕೂ ನನಗೂ ಸಂಬಂಧವೇ ಇಲ್ಲ: ಅಭಯ್ ಶುಕ್ಲಾ
ಇನ್ನು ವಿವಾದಿತ ಪೋಸ್ಟರ್ ಅನ್ನು ತಾವೇ ಹಾಕಿದ್ದು ಎಂದು ಅಭಯ್ ಶುಕ್ಲಾ ಎಂಬುವವರು ಹೇಳಿದ್ದು, ಪೋಸ್ಟರ್ ಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಕಪ್ಪು ಹಣವನ್ನು ಭಾರತಕ್ಕೆ ತರುವುದಾಗಿ ಭರವಸೆ ನೀಡಿದ್ದರು. ಅದರೆ ಅದು ಸುಳ್ಳಾಗಿದ್ದು, ಮೋದಿ ತಾವು ನೀಡಿದ್ದ ಯಾವುದೇ ಭರವಸೆಯನ್ನೂ ಈಡೇರಿಸಿಲ್ಲ.. 2019ರ ಲೋಕಸಭಾ ಚುನಾವಣೆ ಮೇಲೆ ನಮಗೆ ಭರವಸೆ ಇದ್ದು, ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರಿಕ್ಕೆ ಬಂದು ಜನರ ಭರವಸೆಯನ್ನು ಉಳಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


