ದೇಶ

ಸಂಸತ್ ಕಲಾಪದಂತೆ, ಸುಪ್ರೀಂ ಕೋರ್ಟ್ ವಿಚಾರಣೆ ಕೂಡ ಟಿವಿಯಲ್ಲಿ ನೇರ ಪ್ರಸಾರ?

ಸಂಸತ್ ನ ರಾಜ್ಯಸಭೆ ಮತ್ತು ಲೋಕಸಭಾ ಕಲಾಪಗಳಂತೆಯೇ ಸುಪ್ರೀಂ ಕೋರ್ಟ್ ನಲ್ಲಿ ನಡೆಯುವ ಪ್ರಮುಖ ಪ್ರಕರಣ ವಿಚಾರಣೆ ಕೂಡ ಶೀಘ್ರ ಟಿವಿಯಲ್ಲಿ ನೇರ ಪ್ರಸಾರವಾಗುವ ಸಾಧ್ಯತೆ ಇದೆ.

ಸಂಸತ್ ಕಲಾಪದಂತೆ, ಸುಪ್ರೀಂ ಕೋರ್ಟ್ ವಿಚಾರಣೆ ಕೂಡ ಟಿವಿಯಲ್ಲಿ ನೇರ ಪ್ರಸಾರ?
ಸಂಗ್ರಹ ಚಿತ್ರ
Published On :
ನವದೆಹಲಿ: ಸಂಸತ್ ನ ರಾಜ್ಯಸಭೆ ಮತ್ತು ಲೋಕಸಭಾ ಕಲಾಪಗಳಂತೆಯೇ ಸುಪ್ರೀಂ ಕೋರ್ಟ್ ನಲ್ಲಿ ನಡೆಯುವ ಪ್ರಮುಖ ಪ್ರಕರಣ ವಿಚಾರಣೆ ಕೂಡ ಶೀಘ್ರ ಟಿವಿಯಲ್ಲಿ ನೇರ ಪ್ರಸಾರವಾಗುವ ಸಾಧ್ಯತೆ ಇದೆ.
ಹೌದು.. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಅವರು ಇಂತಹುದೊಂದು ಆಲೋಚನೆಗೆ ಮುಂದಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ಸಲಹೆ  ಕೇಳಿದ್ದಾರೆ. 
ಸುಪ್ರೀಂ ಕೋರ್ಟ್ ಕಲಾಪವನ್ನು ನೇರ ಪ್ರಸಾರ ಮಾಡಬೇಕು ಎಂದು ಕೋರಿ ಮಾಜಿ ಸಾಲಿಸಿಟರ್ ಜನರಲ್ ಮತ್ತು ಸುಪ್ರೀಂಕೋರ್ಟ್ ನ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಅವರು ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ  ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ರಾಷ್ಟ್ಕದ ಪ್ರಮುಖ ಪ್ರಕರಣಗಳ ನೇರ ಪ್ರಸಾರ ಮತ್ತು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವ ಸಂಬಂಧ  ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆಕೆ  ವೇಣುಗೋಪಾಲ್ ಅವರ ಸಲಹೆ ಕೇಳಿದ್ದಾರೆ. 
ವಕೀಲರಾದ ಇಂದಿರಾ ಜೈಸಿಂಗ್ ಅವರು ತಮ್ಮ ಅರ್ಜಿಯಲ್ಲಿ ಈ ಬಗ್ಗೆ ಮನವಿ ಮಾಡಿದ್ದು, ತಾವು ಎಲ್ಲ ಪ್ರಕರಣಗಳ ನೇರ ಪ್ರಸಾರ ಮಾಡುವಂತೆ ಕೇಳುತ್ತಿಲ್ಲ. ಆದರೆ ದೇಶದ ಪ್ರಮುಖ ಪ್ರಕರಣಗಳ ಅಥವಾ ಮಾದರಿಯಾಗಬಲ್ಲ  ಸಾಂವಿಧಾನಿಕ ಪೀಠ ವಿಚಾರಣೆ ನಡೆಸುವ ಪ್ರಕರಣಗಳ ವಿಚಾರಣೆಯನ್ನು ನೇರ ಪ್ರಸಾರ ಅಥವಾ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ. 
ಬಹುತೇಕ ಭಾರತೀಯರಿಗೆ ಸುಪ್ರೀಂ ಕೋರ್ಟ್ ನ ಕಲಾಪಗಳು ಕುರಿತು ಮಾಹಿತಿಯೇ ಇಲ್ಲ. ಸಿನಿಮಾಗಳ ದೃಶ್ಯಗಳಲ್ಲಿರುವಂತೆ ಇರುತ್ತದೆ ಎಂದು ಭಾವಿಸಿರುತ್ತಾರೆ. ಆದರೆ ಒಂದು ಪ್ರಮುಖ ಪ್ರಕರಣದ ಪ್ರಮುಖ ತೀರ್ಪನ್ನು ದೇಶದ  ಸರ್ವೋಚ್ಛ ನ್ಯಾಯಾಲಯ ಹೇಗೆ ನೀಡುತ್ತದೆ ಎಂಬ ಮಾಹಿತಿ ದೇಶದ ಪ್ರತೀಯೊಬ್ಬ ಪ್ರಜೆಗೂ ಇರಬೇಕು. ಸುಪ್ರೀಂ ಕೋರ್ಟ್ ಆದೇಶ ಹೇಗೆ ತನ್ನ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಬೇಕು. ಆದರೆ  ಬಹುತೇಕರಿಗೆ ಇಂತಹ ಅವಕಾಶ ಲಭಿಸುವುದಿಲ್ಲ. ಹೀಗಾಗಿ ನೇರ ಪ್ರಸಾರ ಅಥವಾ ವಿಡಿಯೋ ರೆಕಾರ್ಡಿಂಗ್ ಅವಕಾಶದ ಮೂಲಕ ದೇಶದ ಪ್ರಜೆಗಳಿಗೆ ಈ ಅವಕಾಶ ನೀಡಬೇಕು ಎಂದು ಇಂದಿರಾ ಜೈಸಿಂಗ್ ತಮ್ಮ ಅರ್ಜಿಯಲ್ಲಿ  ಕೋರಿದ್ದಾರೆ.
ಕೇವಲ ಸುಪ್ರೀಂ ಕೋರ್ಟ್ ನಲ್ಲಿ ಮಾತ್ರವಲ್ಲದೇ ಆನ್ ಲೈನ್ ನಲ್ಲೂ ಈ ಬಗ್ಗೆ ಇಂದಿರಾ ಜೈಸಿಂಗ್ ಅವರು ಸಹಿ ಸಂಗ್ರಹಕ್ಕೆ ಮುಂದಾಗಿದ್ದು, ದೇಶದ ಪ್ರಜೆಗಳ ಬೆಂಬಲ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.