ದೇಶ

ಕೇಂದ್ರ ಬಜೆಟ್ ಗೆ ಆಂಧ್ರ ಸಿಎಂ ನಾಯ್ಡು ಅತೃಪ್ತಿ, ಟಿಡಿಪಿ ಸಂಸದರಿಂದ ರಾಜಿನಾಮೆ ಬೆದರಿಕೆ

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಗುರುವಾರ ಮಂಡಿಸಿದ 2018-19ನೇ ಸಾಲಿನ ಬಜೆಟ್‌ ನಲ್ಲಿ ಆಂಧ್ರ ಪ್ರದೇಶಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂಬ....

ಕೇಂದ್ರ ಬಜೆಟ್ ಗೆ ಆಂಧ್ರ ಸಿಎಂ ನಾಯ್ಡು ಅತೃಪ್ತಿ, ಟಿಡಿಪಿ ಸಂಸದರಿಂದ ರಾಜಿನಾಮೆ ಬೆದರಿಕೆ
ಚಂದ್ರಬಾಬು ನಾಯ್ಡು
Published On :
ಹೈದರಾಬಾದ್‌: ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಗುರುವಾರ ಮಂಡಿಸಿದ 2018-19ನೇ ಸಾಲಿನ ಬಜೆಟ್‌ ನಲ್ಲಿ ಆಂಧ್ರ ಪ್ರದೇಶಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂಬ ಕಾರಣಕ್ಕೆ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಹೊರಬರುವ ಸುಳಿವು ನೀಡಿದೆ.
ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಬೇಡಿಕೆಗಳಿಗೆ ಸ್ಪಂದಿಸದಿರುವುದು ‘ಅತ್ಯಂತ ನಿರಾಸೆ’ ತರಿಸಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ. ಅಲ್ಲದೆ ಜೇಟ್ಲಿ ಬಜೆಟ್ ಮಂಡಿಸಿದ ಕೆಲವೇ ಕ್ಷಣಗಳಲ್ಲಿ ಚಂದ್ರಬಾಬು ನಾಯ್ಡು ಅವರು ತಮ್ಮ ಸಂಪುಟ ಸಹದ್ಯೋಗಿಗಳೊಂದಿಗೆ ಹಾಗೂ ಸಂಸದರೊಂದಿಗೆ ಟೆಲಿಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ್ದರು. ಈ ವೇಳೆ ಬಜೆಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕೆಲ ಸಂಸದರು ತಾವು ರಾಜಿನಾಮೆ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಕೆಲವು ಸಂಸದರು ರಾಜಿನಾಮೆ ನೀಡಲು ಮುಂದಾಗಿದ್ದು ನಿಜ. ಆದರೆ ಮುಖ್ಯಮಂತ್ರಿಗಳು ಆತುರದ ನಿರ್ಧಾರ ಬೇಡ ಎಂದು ಅವರನ್ನು ತಡೆದಿದ್ದಾರೆ ಎಂದು ಟಿಡಿಪಿ ಸಂಸದ ಕೆ ರಾಮ್ ಮೋಹನ್‌ ನಾಯ್ಡು ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಇದೇ ಭಾನುವಾರ ಪಕ್ಷದ ಸಂಸದೀಯ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಎನ್‌ಡಿಎ ಕೂಟದಲ್ಲಿನ್ನು ತಮ್ಮ ಪಕ್ಷ ಮುಂದುವರಿಯಬೇಕೇ ಬೇಡವೇ ಎಂಬುದರ ಕುರಿತು ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ.
2014ರಲ್ಲಿ ನೂತನ ತೆಲಂಗಾಣ ರಾಜ್ಯದ ರಚನೆಗಾಗಿ ವಿಭಜನೆಯಾದ ಬಳಿಕ ಆಂಧ್ರ ಪ್ರದೇಶದ ಆದಾಯ ಮೂಲಗಳು ಬತ್ತಿ ಹೋಗಿದ್ದು ಅದು ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಸೇರಿ ಟಿಡಿಪಿ ಸ್ಪರ್ಧಿಸಿತ್ತು. ಕೇಂದ್ರದಿಂದ ಆಂಧ್ರಪ್ರದೇಶಕ್ಕೆ ಗಮನಾರ್ಹ ನೆರವು, ಸಹಾಯ ದೊರಕೀತೆಂಬ ಭಾವನೆ ಟಿಡಿಪಿ ಯದ್ದಾಗಿತ್ತು. ಆದರೆ ವ್ಯತಿರಿಕ್ತವಾಗಿ ಕೇಂದ್ರ ಸರ್ಕಾರ ಆಂಧ್ರ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಟಿಡಿಪಿ ನಾಯಕರು ಆರೋಪಿಸಿದ್ದಾರೆ.
ಆಂಧ್ರದ ರಾಜಧಾನಿ ಅಮರಾವತಿಗೆ ಮೆಟ್ರೊ ಯೋಜನೆಗೆ ವಿಶೇಷ ಪ್ಯಾಕೇಜ್‌ ಘೋಷಿಸುವ ಭರವಸೆ ಇತ್ತು. ಆದರೆ, ಅದು ಹುಸಿಯಾಗಿದೆ ಎಂದು ಟಿಡಿಪಿ ಪಕ್ಷದ ಮುಖಂಡ ವೈ.ಎಸ್ ಚೌಧರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.