ಕೇರಳ: ತಗ್ಗಿದ ಮಳೆ ಅಬ್ಬರ, ಮುಂದುವರೆದ ರಕ್ಷಣಾ ಕಾರ್ಯಾಚರಣೆ
ಶತಮಾನದ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಕೇರಳದಲ್ಲಿ ಅಂತೂ ಮಳೆರಾಯ ತನ್ನ ಆರ್ಭಟ ತಗ್ಗಿಸಿದ್ದು, ಮಳೆ ಪ್ರಮಾಣ ಕೊಂಚ ಕಡಿಮೆಯಾಗಿದೆ. ಆದರೂ ಈಗಲೂ ಸಾವಿರಾರು ಮಂದಿ ಸಂತ್ರಸ್ಥರು ರಕ್ಷಣೆಗಾಗಿ ಕಾಯುತ್ತಿದ್ದಾರೆ.

Published On :
ತಿರುವನಂತಪುರಂ: ಶತಮಾನದ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಕೇರಳದಲ್ಲಿ ಅಂತೂ ಮಳೆರಾಯ ತನ್ನ ಆರ್ಭಟ ತಗ್ಗಿಸಿದ್ದು, ಮಳೆ ಪ್ರಮಾಣ ಕೊಂಚ ಕಡಿಮೆಯಾಗಿದೆ. ಆದರೂ ಈಗಲೂ ಸಾವಿರಾರು ಮಂದಿ ಸಂತ್ರಸ್ಥರು ರಕ್ಷಣೆಗಾಗಿ ಕಾಯುತ್ತಿದ್ದಾರೆ.
ಶನಿವಾರ ಅಬ್ಬರಿಸಿದ್ದ ಮಳೆರಾಯ ಭಾನುವಾರ ತನ್ನ ಆರ್ಭಟವನ್ನು ಕೊಂಚ ತಗ್ಗಿಸಿದ್ದ. ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ ಇಂದು ಮತ್ತು ನಾಳೆ ಮಳೆಯ ಅಬ್ಬರ ಕಡಿಮೆ ಇರಲಿದೆ ಎಂದು ಮುನ್ಸೂಚನೆ ನೀಡಿದೆ. ಕಳೆದ ಮೂರು ದಿನಗಳಿಂದ ಕೇರಳದಲ್ಲಿ ಮಳೆಯ ಅಬ್ಬರ ಗಣನೀಯವಾಗಿ ಇಳಿಕೆಯಾಗಿದ್ದು, ನಾಳೆ ಕೂಡ ಕಡಿಮೆ ಮಳೆ ಸುರಿಯಲಿದೆ ಎಂದು ಹೇಳಿದೆ.
ಏತನ್ಮಧ್ಯೆ ಪ್ರವಾಹ ಪೀಡಿತ ಕೇರಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ನಿನ್ನೆಯಿಂದ ಕಾರ್ಯಾಚರಣೆ ಚರುಕು ಪಡೆದಿದೆ. ಮಳೆ ತಗ್ಗಿರುವ ಹಿನ್ನಲೆಯಲ್ಲಿ ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಕಾರ್ಯ ಭರದಿಂದ ಸಾಗಿದ್ದು. ಇನ್ನೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾವಿರಾರು ಮಂದಿ ಸಂತ್ರಸ್ಥರು ರಕ್ಷಣೆಗಾಗಿ ಜೀವವನ್ನು ಕೈಯಲ್ಲಿಟ್ಟುಕೊಂಡು ಕಾಯುತ್ತಿದ್ದಾರೆ. ಈಗಾಗಲೇ ಕೇರಳದಲ್ಲಿ ಸುಮಾರು 1500ಕ್ಕೂ ಅಧಿಕ ನಿರಾಶ್ರಿತ ಶಿಬಿರಗಳು ಹಾಗೂ 3700 ವೈದ್ಯಕೀಯ ಶಿಬಿರಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇದಲ್ಲದೆ ಸ್ಥಳೀಯ ಸ್ವಸಹಾಯ ಸಂಸ್ಥೆಗಳೂ ಕೂಡ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿವೆ.
ಇನ್ನು ದೇಶದ ವಿವಿಧ ಮೂಲಗಳಿಂದ ಕೇರಳಕ್ಕೆ ಭಾರಿ ಪ್ರಮಾಣದ ಪರಿಹಾರ ಸಾಮಗ್ರಿಗಳು ರವಾನೆಯಾಗುತ್ತಿದ್ದು, ರಾಜ್ಯದ ಹಲವೆಡೆ ಆರಂಭಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಶನಿವಾರ ಸಂಜೆ ವೇಳೆಗೆ 3.14 ಲಕ್ಷ ಜನರು ಆಶ್ರಯ ಪಡೆದಿದ್ದರು. ಭಾನುವಾರ ಸಂಜೆಯ ವೇಳೆಗೆ ಆ ಜನರ ಸಂಖ್ಯೆ 6.33 ಲಕ್ಷದಷ್ಟಾಗಿದೆ.
ಪ್ರವಾಹಪೀಡಿತ ಕೇರಳದಲ್ಲಿ ಶನಿವಾರ ಸಂಜೆಯಿಂದ ಭಾನುವಾರ ಸಂಜೆಯವರೆಗೆ ಸುಮಾರು 3.2 ಲಕ್ಷ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ಹೇಳಿವೆ. ಎನ್‌ಡಿಆರ್‌ಎಫ್, ಐಟಿಬಿಪಿ, ಭಾರತೀಯ ಸೇನೆಯ ಮೂರೂ ಪಡೆಗಳು, ಕರಾವಳಿ ಕಾವಲು ಪಡೆ ಮತ್ತು ರಾಜ್ಯ ಅಗ್ನಿಶಾಮಕ ದಳ ಸಿಬ್ಬಂದಿ ಭಾನುವಾರ ಒಂದೇ ದಿನ 33 ಸಾವಿರ ಜನರನ್ನು ಸ್ಥಳಾಂತರಿಸಿದ್ದಾರೆ. ಉಳಿದ 2.9 ಲಕ್ಷ ಜನರಲ್ಲಿ ಬಹುತೇಕರನ್ನು ಸ್ವಯಂಸೇವಕರು, ಸ್ವಯಂಸೇವಾ ಸಂಸ್ಥೆಗಳು ಮತ್ತು ಮೀನುಗಾರರೇ ಪರಿಹಾರ ಕೇಂದ್ರಗಳಿಗೆ ತಲುಪಿಸಿದ್ದಾರೆ. ಸಾವಿರಾರು ಜನರು ತಾವೇ ಪರಿಹಾರ ಕೇಂದ್ರಗಳನ್ನು ತಲುಪಿದ್ದಾರೆ ಎಂದು ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


