ಅಗಲಿದ 'ಅಜಾತ ಶತ್ರು'; ಸರ್ಕಾರದಿಂದ ವಿಶೇಷ ಸ್ಮಾರಕ ನಿರ್ಮಾಣಕ್ಕೆ ಚಿಂತನೆ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಗೌರವಾರ್ಥ ಅವರ ಸ್ಮಾರಕವನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Published On :
ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಗೌರವಾರ್ಥ ಅವರ ಸ್ಮಾರಕವನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ನಿನ್ನೆ ನಿಧನರಾದ ದೇಶದ ಅಗ್ರಗಣ್ಯ ರಾಜಕಾರಣಿ, ಮಾನವತಾವಾದಿ ವಾಜಪೇಯಿ ಅವರ ನೆನಪಿನಾರ್ಥ ಕೇಂದ್ರ ಸರ್ಕಾರ ವಿಶೇಷ ಸ್ಮಾರಕ ನಿರ್ಮಾಣ ಮಾಡಲು ನಿರ್ಧರಿಸಿದೆ. ಹಾಲಿ ಹಾಗೂ ಮಾಜಿ ರಾಷ್ಟ್ರಪತಿಗಳು, ಉಪ ರಾಷ್ಟ್ರಪತಿಗಳು, ಪ್ರಧಾನಿ ಹಾಗೂ ಇತರ ರಾಷ್ಟ್ರನಾಯಕರ ಅಂತ್ಯಸಂಸ್ಕಾರಕ್ಕೆ ಮೀಸಲಿರಿಸಲಾದ ಸ್ಮೃತಿ ಸ್ಥಳದಲ್ಲಿ ಮಾಜಿ ಪ್ರಧಾನಿಯ ಅಂತ್ಯ ಸಂಸ್ಕಾರ ನಡೆಸಿದರೂ, ದೇಶಕ್ಕೆ ವಾಜಪೇಯಿಯವರು ನೀಡಿದ ಗಣನೀಯ ಕೊಡುಗೆಯನ್ನು ಪರಿಗಣಿಸಿ, ವಾಜಪೇಯಿ ಸ್ಮಾರಕವನ್ನು ಪ್ರತ್ಯೇಕವಾಗಿ ನಿರ್ಮಿಸಲು ಮೋದಿ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವರೊಬ್ಬರು ಬಹಿರಂಗಪಡಿಸಿದ್ದಾರೆ.
'ಅವರೊಬ್ಬ ಅದ್ಭುತ ವ್ಯಕ್ತಿ. ಅವರು ದೇಶಕ್ಕೆ ನೀಡಿದ ಸೇವೆಯನ್ನು ಗೌರವಿಸುವ ಸಲುವಾಗಿ ವಿಶಿಷ್ಟವಾದ್ದನ್ನು ಮಾಡಲೇಬೇಕು ಎಂದು ಅವರು ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಮಾಜಿ ಪ್ರಧಾನಿಗೆ ಸಂತಾಪ ಸೂಚಿಸುವ ಕೇಂದ್ರ ಸಂಪುಟ ಸಭೆಯಲ್ಲಿ ಈ ಬಗ್ಗೆ ಗುರುವಾರ ಯಾವುದೇ ಅಧಿಕೃತ ನಿರ್ಣಯ ಕೈಗೊಂಡಿಲ್ಲವಾದರೂ, ವಿಶೇಷ ಸ್ಮಾರಕ ನಿರ್ಮಾಣ ಮಾಡುವ ಕುರಿತು ಒಕ್ಕೋರಲಿನ ಧನಿ ಎದ್ದಿದೆ ಎಂದು ಹೇಳಲಾಗಿದೆ.
ಸ್ಮೃತಿ ಸ್ಥಳದಿಂದಲೇ ಒಂದು ಭಾಗವನ್ನು ಪ್ರತ್ಯೇಕಿಸಿ, ವಾಜಪೇಯಿ ಸ್ಮಾರಕ ನಿರ್ಮಿಸುವ ಪ್ರಸ್ತಾವವೂ ಇದೆ. ಆದರೆ ಅದು ದೃಢಪಟ್ಟಿಲ್ಲ ಎಂದು ಮೂಲಗಳು ಹೇಳಿವೆ.
ರಾಜ್‌ಘಾಟ್, ಸ್ಮೃತಿ ವನ, ಶಕ್ತಿಸ್ಥಳ, ವೀರಭೂಮಿ, ಏಕತಾ ಸ್ಥಳ, ಸಮತಾ ಸ್ಥಳ ಹಾಗೂ ಕಿಶನ್ ಘಾಟ್‌ಗಳನ್ನು ಒಳಗೊಂಡ ದೆಹಲಿಯ ಪ್ರಮುಖ 245 ಎಕರೆ ಪ್ರದೇಶವನ್ನು ಒಳಗೊಂಡ ಜಾಗವನ್ನು ಸ್ಮೃತಿ ಸ್ಥಳವಾಗಿ ಅಭಿವೃದ್ಧಿಪಡಿಸಲು 2013ರಲ್ಲಿ ಯುಪಿಎ ಸರ್ಕಾರ ನಿರ್ಧರಿಸಿತ್ತು. ಈ ಯೋಜನೆ 2015ರಲ್ಲಿ ಪೂರ್ಣಗೊಂಡಿತ್ತು. 2000ನೇ ಇಸವಿಯಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿತ್ತಾದರೂ, ಅತಿಗಣ್ಯರ ಸಮಾಧಿಸ್ಥಳವನ್ನು ನಿರ್ಧರಿಸಲು 13 ವರ್ಷ ಬೇಕಾಯಿತು. 2015ರಲ್ಲಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಸಮಾಧಿ ಸ್ಮೃತಿ ಸ್ಥಳದಲ್ಲಿ ನಿರ್ಮಾಣವಾಗಿತ್ತು. ಇದಕ್ಕಾಗಿ ಅವರ ಕುಟುಂಬ 10 ವರ್ಷ ಕಾಯಬೇಕಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


