ಬಿಹಾರ ಮಾಜಿ ಸಿಎಂ ಮೊಮ್ಮಗಳೊಂದಿಗೆ ಲಾಲು ಪುತ್ರ ತೇಜ್ ಪ್ರತಾಪ್ ಮದುವೆ
ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ, ಬಿಹಾರ ಮಾಜಿ ಆರೋಗ್ಯ....

Published On :
ಪಾಟ್ನಾ: ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ, ಬಿಹಾರ ಮಾಜಿ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಅವರು ಬಿಹಾರ ಮಾಜಿ ಮುಖ್ಯಮಂತ್ರಿ ಮೊಮ್ಮಗಳು, ಎಂಬಿಎ ಪದವೀಧರೆ ಐಶ್ವರ್ಯ ರೈ ಅವರನ್ನು ಮದುವೆ ಆಗಲಿದ್ದಾರೆ.
ಬಿಹಾರ ಮಾಜಿ ಸಚಿವ ಚಂದ್ರಿಕಾ ಪ್ರಸಾದ್ ರೇ ಅವರ ಹಿರಿಯ ಮಗಳು ಐಶ್ವರ್ಯ ರೈ ಮತ್ತು ತೇಜ್ ಪ್ರತಾಪ್ ಯಾದವ್ ಅವರ ನಿಶ್ಚಿತಾರ್ಥ ಏಪ್ರಿಲ್ 18 ರಂದು ಪಾಟ್ನಾದ ಮೌರ್ಯ ಹೋಟೆಲ್ ನಲ್ಲಿ ನಡೆಯಲಿದ್ದು, ಮೇ 12 ರಂದು ಪಾಟ್ನಾದ ಪಶು ವೈದ್ಯಕೀಯ ಕಾಲೇಜಿನ ಮೈದಾನದಲ್ಲಿ ಇಬ್ಬರ ವಿವಾಹ ಮಹೋತ್ಸವ ನಡೆಯಲಿದೆ ಎಂದು ಆರ್ ಜೆಡಿ ಮೂಲಗಳು ತಿಳಿಸಿವೆ.
ಸದ್ಯ ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಪ್ರಸಾದ್ ಯಾದವ್ ಅವರು ಪೆರೋಲ್ ಪಡೆದು ಮಗನ ಮದುವೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರು ತಮ್ಮ ಪುತ್ರ ತೇಜ್ ಪ್ರತಾಪ್ ಗೆ ಐಶ್ವರ್ಯ ರೈ ಅವರನ್ನು ಆಯ್ಕೆ ಮಾಡಿರುವುದು ಎಂದು ತಿಳಿದು ಬಂದಿದೆ. ತೇಜ್ ಪ್ರತಾಪ್ ಯಾದವ್ ತಮ್ಮ ಕುಟುಂಬದ ಪರಂಪರೆ ರಾಜಕಾರಣವನ್ನು ಮುಂದುವರೆಸಲಿದ್ದಾರೆ.
29 ವರ್ಷದ, 12ನೇ ತರಗತಿ ಪಾಸಾಗಿರುವ ತೇಜ್ ಪ್ರತಾಪ್ ಯಾದವ್ ನವೆಂಬರ್ 20, 2015 ರಿಂದ ಜುಲೈ 26, 2017 ರ ತನಕ ಸಚಿವರಾಗಿದ್ದರು. ತೇಜ್ ಪ್ರತಾಪ್ ಯಾದವ್ ತನ್ನ ಕಿರಿಯ ತಮ್ಮ ಬಿಹಾರದ ಮಾಜಿ ಉಪ ಮುಖ್ಯ ಮಂತ್ರಿ ತೇಜಾಶ್ವಿ ಯಾದವ್ ಅವರ ಜೊತೆ ಪಕ್ಷವನ್ನು ಮುನ್ನೆಡುಸುತ್ತಿದ್ದಾರೆ.
25 ವರ್ಷದ ಐಶ್ವರ್ಯ ರೈ ನೊಟ್ರೆ ಡೇಮ್ ಅಕಾಡೆಮಿ ಪಟ್ನಾದಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್ ನಿಂದ ಇತಿಹಾಸ ಪದವಿಯನ್ನು ಪಡೆದಿದ್ದಾರೆ. ಅಮೇಟಿ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿಯನ್ನು ಪಡೆದಿದ್ದಾರೆ.
ಐಶ್ವರ್ಯ ಅವರ ತಂದೆ ಅನುಭವಿ ರಾಜಕಾರಣಿ ಚಂದ್ರಿಕಾ ಪ್ರಸಾದ್ ರೈ. ಸಚಿವರಾಗಿ ಹಲವು ಸರ್ಕಾರದ ಜೊತೆ ಕೆಲಸ ಮಾಡಿದ್ದಾರೆ. ಇವರ ತಂದೆ ದರೋಗ ಪ್ರಸಾದ್ ರೈ ಫೆಬ್ರುವರಿ 16, 1970 ರಿಂದ ಡಿಸೆಂಬರ್ 22, 1970 ರ ತನಕ ಬಿಹಾರದ ಮುಖ್ಯ ಮಂತ್ರಿಯಾದ್ದರು.
ಲಾಲು ಪ್ರಸಾದ್ ಯಾದವ್ ಅವರು ಮದುವೆಯಲ್ಲಿ ಭಾಗವಹಿಸಲು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಇತರೆ ರಾಜ್ಯದ ಕೇಂದ್ರದ ರಾಜಕಾರಣಿಗಳು, ಮುಖಂಡರುಗಳು ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


