ದೇಶ

ಉದ್ಯೋಗ ಸೃಷ್ಟಿಸುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು; ಆದ್ದರಿಂದಲೇ ಮೋದಿಗೆ ಅಧಿಕಾರ: ರಾಹುಲ್ ಗಾಂಧಿ

ಉದ್ಯೋಗ ಸೃಷ್ಟಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದರಿಂದ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರ ಅಧಿಕಾರಕ್ಕೆ ಬರುವಂತಾಯಿತು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ...

ಉದ್ಯೋಗ ಸೃಷ್ಟಿಸುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು; ಆದ್ದರಿಂದಲೇ ಮೋದಿಗೆ ಅಧಿಕಾರ: ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Published On :
ನ್ಯೂಜೆರ್ಸಿ: ಉದ್ಯೋಗ ಸೃಷ್ಟಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದರಿಂದ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರ ಅಧಿಕಾರಕ್ಕೆ ಬರುವಂತಾಯಿತು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬುಧವಾರ ಹೇಳಿದ್ದಾರೆ. 
ಪ್ರಿನ್ಸ್'ಟನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಭಾರತದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು. ಹೀಗಾಗಿ ಕಾಂಗ್ರೆಸ್ ಮೇಲೆ ಜನರು ತೀವ್ರವಾಗಿ ಕೋಪಗೊಂಡಿದ್ದರು. ಈ ಮಧ್ಯೆ ಮೋದಿ ಸರ್ಕಾರ ಜನರಿಗೆ ಉದ್ಯೋಗ ಸೃಷ್ಟಿ ಭರವಸೆ ನೀಡುವ ಮೂಲಕ ಅಧಿಕಾರ ಹಿಡಿಯಿತು ಎಂದು ಹೇಳಿದ್ದಾರೆ. 
ಭಾರತದಲ್ಲಿ ಯುವ ಪೀಳಿಗೆಗೆ ಅಗತ್ಯವಿರುವಷ್ಟು ಉದ್ಯೋಗ ಸೃಷ್ಟಿಸುವುದು ಸವಾಲಾಗಿ ಪರಿಣಮಿಸಿದೆ. ಈ ಹಿಂದೆ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿತ್ತು. ಇದೀಗ ಮೋದಿ ನೇತೃತ್ವದ ಹಾಲಿ ಸರ್ಕಾರ ಕೂಡ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. 
ಭಾರತದಲ್ಲಿ ಪ್ರಧಾನಿ ಮೋದಿ ಹಾಗೂ ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದಿದ್ದು ಯುವ ಪೀಳಿಗೆಗೆ ಉದ್ಯೋಗಾವಕಾಶ ಕಲ್ಪಿಸುವ ಭರವಸೆಯಿಂದಾಗಿ. ಈ ಹಿಂದಿನ ಕಾಂಗ್ರೆಸ್ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ನಿರುದ್ಯೋಗಿ ಯುವ ಪೀಳಿಗೆ ಕಳೆದ ಚುನಾವಣೆಯಲ್ಲಿ ಮೋದಿಯವರಿಗೆ ಬೆಂಬಲ ನೀಡಿತು. ಆದರೆ, ಮೋದಿ ಕೂಡ ಉದ್ಯೋಗ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆಂದು ಅಭಿಪ್ರಾಯಪಟ್ಟಿದ್ದಾರೆ. 
ಪ್ರಸ್ತುತ ನಾವು ಯಾವುದೇ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿಲ್ಲ. ಪ್ರತೀನಿತ್ಯ 30,000 ಯುವಕರು ಉದ್ಯೋಗ ಮಾರುಕಟ್ಟೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಸರ್ಕಾರ ಪ್ರತೀನಿತ್ಯ 500 ಉದ್ಯೋಗಾವಕಾಶಗಳನ್ನಷ್ಟೇ ಕಲ್ಪಿಸುತ್ತಿದೆ. ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಯುವಕರು ಈಗಾಗಲೇ ನಿರುದ್ಯೋಗಿಗಳಾಗಿದ್ದಾರೆ. 
ಕಾಂಗ್ರೆಸ್ ಸರ್ಕಾರ ಪ್ರತೀನಿತ್ಯ 30,000 ಉದ್ಯೋಗಾವಕಾಶಗಳನ್ನು ಕಲ್ಪಿಸದೆ ಇದ್ದಿದ್ದಕ್ಕೆ ಜನರು ಕೋಪಗೊಂಡಿದ್ದಾರೆ. ಇದೀಗ ಮೋದಿ ಸರ್ಕಾರ ಕೂಡ ಉದ್ಯೋಗಾವಕಾಶ ಕಲ್ಪಿಸುವಲ್ಲಿ ವಿಫಲವಾಗಿದೆ. ಜನರೂ ಮೋದಿಯವರ ಮೇಲೂ ಕೋಪಗೊಳ್ಳುತ್ತಾರೆಯೇ. ಯಾವುದೇ ವಿಚಾರದ ಬಗ್ಗೆ ಚರ್ಚೆ ನಡೆದಾಗ ಮೋದಿಯವರು ವಿಷಯದ ದಿಕ್ಕು ಬದಲಿಸಲು ಯತ್ನಿಸುತ್ತಾರೆ. ಸಮಸ್ಯೆಗೆ ಉತ್ತರಿಸುವ ಬದಲು ಮತ್ತೊಂದು ವಿಷಯವನ್ನು ಪ್ರಸ್ತಾಪಿಸುತ್ತಾರೆ. ಭಾರತದಲ್ಲಿಂದು ಜನರು ಆಕ್ರೋಶಭರಿತರಾಗುತ್ತಿದ್ದಾರೆ. ಇದರ ಅರಿವು ನಮಗಾಗುತ್ತಿದೆ. ಪ್ರಜಾಪ್ರಭುತ್ವದ ವಾತಾವರಣದಲ್ಲಿ ಉದ್ಯೋಗ ಸೃಷ್ಟಿಯೆಂಬ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕೆಂಬುದು ನನ್ನ ಸವಾಲಾಗಿದೆ. 
ಮೊದಲು ನಾವು ಇರುವ ಸಮಸ್ಯೆಯನ್ನು ಒಪ್ಪಿಕೊಳ್ಳಬೇಕಿದೆ. ಬಳಿಕ ಒಗ್ಗೂಡಿ ಸಮಸ್ಯೆಯನ್ನು ಬಗೆಹರಿಸಬೇಕು. ಪ್ರಸ್ತುತ ಭಾರತದಲ್ಲಿ ಸಮಸ್ಯೆಯಿರುವುದನ್ನೇ ಯಾರೂ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದಿದ್ದಾರೆ. 
ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ ಮತ್ತು ಚೀನಾ ರಾಷ್ಟ್ರಗಳ ನಡುವೆ ಸಹಕಾರ ಹಾಗೂ ಸ್ಪರ್ಧೆಯಿದೆ. ಚೀನಾದೊಂದಿಗೆ ನಾವು ಸ್ಪರ್ಧಿಸುವ ಅಗತ್ಯವಾಗಿದೆ. ಆದರೆ, ನಮ್ಮ ಸ್ಪರ್ಧೆ ಅಷ್ಟು ಸಮರ್ಥವಾಗಿಲ್ಲ. ಒಂದು ವಲಯ, ಒಂದು ರಸ್ತೆ ಯೋಜನೆಯಂತಹ ದೂರದೃಷ್ಟಿಯೊಂದಿಗೆ ಚೀನಾ ಮುನ್ನಡೆಯುತ್ತಿದೆ. ಭಾರತವೂ ಅಂಥ ದೂರದೃಷ್ಟಿಯನ್ನು ಒಳಗೊಂಡಿದೆಯೇ? ಹೇಗಿದೆ ಆ ಯೋಜನೆ? ನಮ್ಮ ಮತ್ತು ಚೀನಾ ನಡುವಿನ ಸಹಕಾರ ಯಾವ ನಿಟ್ಟಿನಲ್ಲಿ ಸಾಗಲಿದೆ?  ಈ ಮೂಲಭೂತ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಭಾರತ ಸಾಗಬೇಕಿದೆ ಎಂದು ವಿವರಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.