24 ವರ್ಷದ ಮಗಳನ್ನು ತಂದೆಗೆ ನಿಯಂತ್ರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
24 ವರ್ಷದ ಮಗಳ ಖಾಸಗಿ ಜೀವನದ ಬಗ್ಗೆ ತಂದೆಗೆ ಅಧಿಕಾರ ಚಲಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ...

Published On :
ನವದೆಹಲಿ: 24 ವರ್ಷದ ಮಗಳ ಖಾಸಗಿ ಜೀವನದ ಬಗ್ಗೆ ತಂದೆಗೆ ಅಧಿಕಾರ ಚಲಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಂದು ಕೇರಳದ ಶಫಿನ್ ಜಹಾನ್ ಎಂಬ ವ್ಯಕ್ತಿ ಸಲ್ಲಿಸಿದ ಕೇಸಿನ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ ಪ್ರಾಥಮಿಕ ಅಭಿಪ್ರಾಯವಾಗಿ ಹೀಗೆ ಹೇಳಿದೆ.
ಹಿಂದೂ ಯುವತಿಯೊಂದಿಗೆ ಮುಸ್ಲಿಂ ಯುವಕನ ಮದುವೆಯನ್ನು ಲವ್ ಜಿಹಾದ್ ಎಂದು ಪರಿಗಣಿಸಿ ಕೇರಳ ಹೈಕೋರ್ಟ್ ಅನೂರ್ಜಿತಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಹೀಗೆ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠ, ಜಹನ್ ಸಲ್ಲಿಸಿರುವ ಹೊಸ ಅರ್ಜಿ ವಿಚಾರಣೆಯನ್ನು ಇದೇ 9ರಂದು ನಡೆಸಲಾಗುವುದು ಎಂದು ಹೇಳಿದರು. ಈ ಕೇಸಿನಲ್ಲಿ ಅಕ್ರಮವಾಗಿ ಲವ್ ಜಿಹಾದ್ ನಡೆದಿದೆಯೇ ಎಂದು ತನಿಖೆ ನಡೆಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ನೀಡಲಾಗಿತ್ತು.
ಮತಾಂತರ ಯಾವುದೇ ವಿಧಾನ ಆಗಿರಲಿ, ಸಂವಿಧಾನದ 226ನೇ ಅನುಚ್ಛೇದದಡಿಯಲ್ಲಿ ಈ ಮದುವೆಯನ್ನು ರದ್ದು ಮಾಡುವ ಹಕ್ಕು ಹೈಕೋರ್ಟ್ ಗೆ ಇದೆಯೇ ಎಂದು ನ್ಯಾಯಮೂರ್ತಿಗಳಾದ ಎಎಮ್ ಖನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಯುವತಿಯ ತಂದೆಯ ಕಡೆ ತಿರುಗಿ ಹೇಳಿದ ನ್ಯಾಯಮೂರ್ತಿಗಳಾದ ಮಿಶ್ರಾ, ಆಕೆ 24 ವರ್ಷದ ಯುವತಿ. ತಂದೆಗೆ ಮಗಳ ಮೇಲೆ ನಿಯಂತ್ರಣ ಹೇರಲು ಸಾಧ್ಯವಿಲ್ಲ ಎಂದರು. ಸ್ಥಳೀಯ ಪೋಷಕರನ್ನು ನೇಮಿಸಬೇಕು ಇಲ್ಲವೇ ಬೇರೆಡೆ ಸುರಕ್ಷಿತ ಸ್ಥಳಕ್ಕೆ ಕಳುಹಿಸಬೇಕು. ತಂದೆ 24 ಗಂಟೆ ಮಗಳನ್ನು ಕಾದು ಕುಳಿತಿರಲು ಸಾಧ್ಯವಿಲ್ಲ ಎಂದು ಹೇಳಿದರು.
ಏನು ಪ್ರಕರಣ: ಕೇರಳದ ಜಹನ್ ಎಂಬ ಮುಸ್ಲಿಂ ಯುವಕ ಕಳೆದ ವರ್ಷ ಡಿಸೆಂಬರ್ ನಲ್ಲಿ ಹಿಂದೂ ಧರ್ಮದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಲವ್ ಜಿಹಾದ್ ಎಂದು ಪರಿಗಣಿಸಿ ಕೇರಳ ಹೈಕೋರ್ಟ್ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನ ಮದುವೆಯನ್ನು ರದ್ದು ಮಾಡಿತ್ತು. ಅದನ್ನು ಪ್ರಶ್ನಿಸಿ ಇದು ಮಹಿಳೆಯ ಸ್ವಾತಂತ್ರ್ಯಕ್ಕೆ ಮಾಡಿದ ಅವಮಾನ ಎಂದು ಯುವಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದನು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ನೇತೃತ್ವದಲ್ಲಿ ತನಿಖೆ ನಡೆಸಲು ಕಳೆದ ಆಗಸ್ಟ್ 16ರಂದು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಸೂಚಿಸಲಾಗಿತ್ತು. ಯುವತಿಯನ್ನು ತನ್ನ ತಂದೆ ಮನೆಯಲ್ಲಿ ಬಂಧಿಸಿಡಲಾಗಿದೆ ಎಂದು ಆರೋಪಿಸಿ ಕೇರಳ ಮಾನವ ಹಕ್ಕು ಆಯೋಗಕ್ಕೆ ಹಲವು ದೂರುಗಳು ಬಂದಿವೆ ಎಂದು ಯುವಕ ಜಹನ್ ಅರ್ಜಿಯಲ್ಲಿ ದೂರು ನೀಡಿದ್ದನು.
ತನ್ನ ಇಚ್ಛೆಯ ಪ್ರಕಾರ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಮದುವೆಯಾಗಿದ್ದು ಎಂದು ಮಹಿಳೆ ಹೇಳಿದರೂ ಕೂಡ ಮೇ 24ರಂದು ಹೈಕೋರ್ಟ್ ನ ಆದೇಶ ಬಂದ ನಂತರ ಆಕೆಯ ಇಚ್ಛೆಗೆ ವಿರುದ್ಧವಾಗಿ ಮಾನವ ಹಕ್ಕು ಉಲ್ಲಂಘಿಸಿ ಗೃಹ ಬಂಧನದಲ್ಲಿಡಲಾಗಿದೆ ಎಂದು ಜಹನ್ ಆರೋಪಿಸಿದ್ದನು.
ಯುವತಿ ಮದುವೆಗೆ ಮುನ್ನ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಳು. ಮಹಿಳೆಯನ್ನು ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಮಿಷನ್ ನೇಮಕ ಮಾಡಿದೆ. ಜಹಾನ್ ಅವರಿಗೆ ಸಹಾಯ ಮಾಡುವ ಕೆಲಸವಷ್ಟೇ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿತ್ತು.
ತಮ್ಮ ಮಗಳನ್ನು ಪೂರ್ವ ನಿಯೋಜಿತ ಸಂಚಿನೊಂದಿಗೆ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಯುವತಿಯ ತಂದೆ ಅಶೋಕನ್ ಕೆಎಂ ಆರೋಪಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿ ತೀರ್ಪು ಕೊಟ್ಟಿದ್ದ ಹೈಕೋರ್ಟ್ ಈ ಮದುವೆ ಅಸಿಂಧು ಮತ್ತು ನಿರರ್ಥಕ ಎಂದು ಹೇಳಿತ್ತು. ಇದೊಂದು ಲವ್ ಜಿಹಾದ್ ಗೆ ಉದಾಹರಣೆಯಾಗಿದ್ದು ರಾಜ್ಯ ಪೊಲೀಸರು ತನಿಖೆ ನಡೆಸುವಂತೆ ಆದೇಶಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


