ದೇಶ

ಮಗುವಿನ ಪ್ರಾಣ ಉಳಿಸಲು ಕೇವಲ 6 ಗಂಟೆಯಲ್ಲಿ 508 ಕಿ.ಮೀ ಕ್ರಮಿಸಿದ ಆ್ಯಂಬುಲೆನ್ಸ್ ಡ್ರೈವರ್!

ಇತ್ತ ಕರ್ನಾಟಕದಲ್ಲಿ ರೋಗಿಗಳ ಪರದಾಟದ ಹೊರತಾಗಿಯೂ ಖಾಸಗಿ ವೈದ್ಯರು ಹಠಮಾರಿತನ ಮುಂದುವರೆಸಿದ್ದರೆ, ಅತ್ತ ಕೇರಳದಲ್ಲಿ ಆ್ಯಂಬುಲೆನ್ಸ್ ಚಾಲಕನೋರ್ವ ಪ್ರಾಣಾಪಾಯದಲ್ಲಿದ್ದ ಮಗುವಿನ ಪ್ರಾಣ ಉಳಿಸುವ ಸಲುವಾಗಿ ಕೇವಲ 6 ಗಂಟೆಯಲ್ಲಿ 508 ಕಿ.ಮೀ ಕ್ರಮಿಸಿ ಸುದ್ದಿಯಾಗಿದ್ದಾನೆ.

ಮಗುವಿನ ಪ್ರಾಣ ಉಳಿಸಲು ಕೇವಲ 6 ಗಂಟೆಯಲ್ಲಿ 508 ಕಿ.ಮೀ ಕ್ರಮಿಸಿದ ಆ್ಯಂಬುಲೆನ್ಸ್ ಡ್ರೈವರ್!
ಆ್ಯಂಬುಲೆನ್ಸ್ ಚಾಲಕ ತಮೀಮ್
Published On :
ತಿರುವನಂತಪುರಂ: ಇತ್ತ ಕರ್ನಾಟಕದಲ್ಲಿ ರೋಗಿಗಳ ಪರದಾಟದ ಹೊರತಾಗಿಯೂ ಖಾಸಗಿ ವೈದ್ಯರು ಹಠಮಾರಿತನ ಮುಂದುವರೆಸಿದ್ದರೆ, ಅತ್ತ ಕೇರಳದಲ್ಲಿ ಆ್ಯಂಬುಲೆನ್ಸ್ ಚಾಲಕನೋರ್ವ ಪ್ರಾಣಾಪಾಯದಲ್ಲಿದ್ದ ಮಗುವಿನ ಪ್ರಾಣ  ಉಳಿಸುವ ಸಲುವಾಗಿ ಕೇವಲ 6 ಗಂಟೆಯಲ್ಲಿ 508 ಕಿ.ಮೀ ಕ್ರಮಿಸಿ ಸುದ್ದಿಯಾಗಿದ್ದಾನೆ.
ಕೇರಳದ ಕಾಸರಗೋಡು ಮೂಲದ ತಮೀಮ್ ಎಂಬಾತ ಪುಟ್ಟಮಗುವಿನ ಪ್ರಾಣ ಉಳಿಸುವುದಕ್ಕಾಗಿ ತನ್ನ ಪ್ರಾಣವನ್ನೂ ಲೆಕ್ಕಿಸದೆ ರಾತ್ರೋರಾತ್ರಿ ಕೇವಲ 6 ಗಂಟೆಯಲ್ಲಿ ಬರೊಬ್ಬರಿ 508 ಕಿ.ಮೀ ದೂರಕ್ಕೆ ಆ್ಯಂಬುಲೆನ್ಸ್  ಚಲಾಯಿಸಿಕೊಂಡು ಬಂದು ಮಗುವನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಹೀರೋ ಆಗಿ ಮಿಂಚುತ್ತಿದ್ದಾನೆ.
ಮೂಲಗಳ ಪ್ರಕಾರ ಫಾತಿಮಾ ಲೈಬಾ ಎಂಬ 31 ದಿನದ ಮಗುವನ್ನು ಕಣ್ಣೂರಿನ ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಗುವನ್ನು ಪರೀಕ್ಷಿಸಿದ್ದ ವೈದ್ಯರು ಮಗುವಿಗೆ ತುರ್ತು ಹೃದಯ ಶಸ್ತ್ರಚಿಕಿತ್ಸೆ  ಅನಿವಾರ್ಯ ಎಂದು ಹೇಳಿದ್ದರು. ಅಂತೆಯೇ ಕೂಡಲೇ ಮಗುವನ್ನು ತಿರುವನಂತಪುರಂಗೆ ಸಾಗಿಸುವಂತೆ ಸೂಚಿಸಿದರು. ಮಗುವಿನ ಪೋಷಕರು ಮರುದಿನ ಮುಂಜಾನೆ ತಿರುವನಂತಪುರದ ಶ್ರೀ ಚಿತ್ರ ತಿರುನಲ್ ವೈದ್ಯಕೀಯ  ಮಹಾವಿಜ್ಞಾನ ಸಂಸ್ಥೆಯಲ್ಲಿ ವೈದ್ಯರ ಭೇಟಿಗೆ ಅವಕಾಶ ಪಡೆದರು. 500 ಕಿಲೋಮೀಟರ್‌ಗೂ ಅಧಿಕ ದೂರವನ್ನು ಕಡಿಮೆ ಅವಧಿಯಲ್ಲಿ ಕ್ರಮಿಸುವುದು ಸವಾಲಾಗಿತ್ತು. 
ಅದರಂತೆ ಕಾಸರಗೋಡಿನಿಂದ ಆಂಬ್ಯುಲೆನ್ಸ್ ಕರೆಸಲಾಗಿತ್ತು. ಕಾಸರಗೋಡು ಮೂಲದ ಆ್ಯಂಬುಲೆನ್ಸ್ ಚಾಲಕ ತಮೀಮ್ ರಿಗೆ ಈ ವಿಚಾರವನ್ನು ಕೂಡ ತಿಳಿಸಲಾಗಿತ್ತು. ಮಗುವಿನ ಪರಿಸ್ಥಿತಿ ತಿಳಿದ ತಮೀಮ್ ಆ್ಯಂಬುಲೆನ್ಸ್  ಚಾಲನೆಗೆ ಒಪ್ಪಿಕೊಂಡ. ಅದರಂತೆ ರಾತ್ರಿ  8.23ಕ್ಕೆ ಪ್ರಯಾಣ ಆರಂಭಿಸಲಾಯಿತು. ಇನ್ನು ಈ ಸೂಕ್ಷ್ಮ ಕಾರ್ಯಾಚರಣೆಗೆ ಕೇರಳ ಪೊಲೀಸರು ಹಾಗು ಸಾರ್ವಜನಿಕರ ಬೆಂಬಲವೂ ಸಿಕ್ಕಿತು. ಅದರಂತೆ ಆ್ಯಂಬುಲೆನ್ಸ್ ಸಾಗುವ  ಮಾರ್ಗದಲ್ಲಿ ಗ್ರೀನ್ ಕಾರಿಡಾರ್ ಘೋಷಿಸಿ ಆ್ಯಂಬುಲೆನ್ಸ್ ವೇಗವಾಗಿ ಚಲಿಸಲು ಅನುವು ಮಾಡಿಕೊಡಲಾಯಿತು. 
ಚೈಲ್ಡ್‌ ಪ್ರೊಟೆಕ್ಷನ್ ಟೀಮ್ ಎಂಬ ತಂಡವೂ ಇದಕ್ಕೆ ಸಹಾಯಹಸ್ತ ಚಾಚಿತು. ಅಗಲ ಕಿರಿದಾದ ರಸ್ತೆಯನ್ನು ಈ ಮಗುವಿನ ಪ್ರಾಣ ಉಳಿಸುವ ಸಲುವಾಗಿ ತೆರವುಗೊಳಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿಗಳನ್ನು  ಪಸರಿಸಿತು. ಪೊಲೀಸ್ ಪೈಲಟ್ ವಾಹನ, ಐಸಿಯು ಆಂಬ್ಯುಲೆನ್ಸ್ ಹಾಗೂ ಎರಡು ಕಾರುಗಳು ಇದಕ್ಕೆ ಬೆಂಗಾವಲಾಗಿ ಸಂಚರಿಸಿದವು. ಕೋಝಿಕೋಡ್‌ನಲ್ಲಿ ಆಹಾರ ಮತ್ತು ಇಂಧನಕ್ಕಾಗಿ ಕೇವಲ 20 ನಿಮಿಷ ನಿಲುಗಡೆ  ನೀಡಲಾಯಿತು. ಅಂತಿಮವಾಗಿ ಆ್ಯಂಬುಲೆನ್ಸ್ ಚಾಲಕ ತಮೀಮ್ 6 ಗಂಟೆ 45 ನಿಮಿಷದಲ್ಲಿ 508 ಕಿ.ಮೀ ದೂರವನ್ನು ಯಶಸ್ವಿಯಾಗಿ ಕ್ರಮಿಸಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಿದನು.
ಯಾವುದೇ ತೊಂದರೆ ಇಲ್ಲದೆ ಮುಂಜಾನೆ 3.23ಕ್ಕೆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮಗು ಇನ್ನೂ ಜೀವನ್ಮರಣ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಮುಂದುವರೆದಿದೆ. ಆ್ಯಂಬುಲೆನ್ಸ್ ಚಾಲಕನ ಸಾಹಸಕ್ಕೆ ಇದೀಗ ವ್ಯಾಪಕ ಶ್ಲಾಘನೆ  ವ್ಯಕ್ತವಾಗುತ್ತಿದ್ದು, ಮಗುವಿನ ಜೀವ ಉಳಿಸುವಂತೆ ಕೇರಳ ಜನತೆ ದೇವರ ಮೊರೆ ಹೋಗಿದ್ದಾರೆ. 
ಇನ್ನು ಸಾಮಾನ್ಯ ದಿನಗಳಲ್ಲಿ ಸಂಚಾರ ದಟ್ಟಣೆಯನ್ನು ಹೊಂದಿಕೊಂಡು ಇದೇ ದೂರ ಕ್ರಮಿಸಲು 10 ರಿಂದ 14 ಗಂಟೆ ಬೇಕಾಗುತ್ತದೆ. ಆದರೆ ತುರ್ತು ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದ್ದ ಮಗುವಿನ ಜೀವ ಉಳಿಸಲು ಈ ಚಾಲಕ ತನ್ನ  ಜೀವವನ್ನು ಪಣಕ್ಕಿಟ್ಟು ಆಂಬ್ಯುಲೆನ್ಸ್ ಚಾಲನೆ ಮಾಡಿದ್ದು, ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರವಾಗಿದೆ. ಈತನ ಸಮಯ ಪ್ರಜ್ಞೆ ಹಾಗೂ ಚಾಲನಾ ಕೌಶಲಕ್ಕೆ ಪೊಲೀಸರೂ ಬೆರಗಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.