ಜಿಎಸ್ಟಿ ಕುರಿತು ಜೇಟ್ಲಿ ತಲೆ ಉಪಯೋಗಿಸಿಲ್ಲ, ಅವರನ್ನು ತೆಗೆದುಹಾಕಲಿ: ಯಶವಂತ್ ಸಿನ್ಹಾ
ಭಾರತೀಯ ಜನತಾಪಕ್ಷ(ಬಿಜೆಪಿ)ದ ಹಿರಿಯ ಮುಖಂಡ ಯಶವಂತ್ ಸಿನ್ಹಾ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಸರಕು ಮತ್ತು ಸೇವಾ...

Published On :
ನವದೆಹಲಿ: ಭಾರತೀಯ ಜನತಾಪಕ್ಷ(ಬಿಜೆಪಿ)ದ ಹಿರಿಯ ಮುಖಂಡ ಯಶವಂತ್ ಸಿನ್ಹಾ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯನ್ನು ಉತ್ತಮವಾಗಿ ಜಾರಿಗೆ ತರುವಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ವಿಫಲರಾಗಿದ್ದು ಅವರನ್ನು ಸಂಪುಟದಿಂದ ಕೈಬಿಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿನ್ಹಾ ಆಗ್ರಹಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದ ಯಶವಂತ್ ಸಿನ್ಹಾ ಅವರು, ನೋಟು ನಿಷೇಧ ಕ್ರಮದಿಂದ ಕಪ್ಪುಹಣವನ್ನು ಹೊರತರುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇನ್ನು ಸರ್ಕಾರ ನೋಟು ನಿಷೇಧ ಮತ್ತು ಹೊಸ ತೆರಿಗೆ ಪ್ರಭುತ್ವದ ಮೇಲೆ ಸುಳ್ಳುಗಳ ಕಂತೆಯನ್ನೇ ಬಿಚ್ಚಿಡುತ್ತಿದೆ ಎಂದು ಆರೋಪಿಸಿದ್ದಾರೆ.
ಜಿಎಸ್ಟಿಯನ್ನು ಸಕ್ರಮವಾಗಿ ಜಾರಿಗೆ ತರುವಲ್ಲಿ ಅರುಣ್ ಜೇಟ್ಲಿ ಅವರು ಸರಿಯಾಗಿ ತಮ್ಮ ತಲೆಯನ್ನು ಉಪಯೋಗಿಸಿಲ್ಲ. ಹೀಗಾಗಿ ಪ್ರತಿ ದಿನ ಒಂದಿಲ್ಲೊಂದು ಬದಲಾವಣೆಗಳನ್ನು ತರುವ ಮೂಲಕ ತೆಪೆ ಹಚ್ಚುತ್ತಿದ್ದಾರೆ ಎಂದು ಬಿಹಾರ ಸ್ಪೀಕರ್ ಉದಯ್ ನಾರಾಯಣ್ ಚೌಧರಿ ಅವರು ಆಯೋಜಿಸಿದ್ದ ಮೀಸಲಾತಿ ಕಾರ್ಯಕ್ರಮದಲ್ಲಿ ಯಶವಂತ್ ಸಿನ್ಹಾ ಅವರು ಕೇಂದ್ರ ಸರ್ಕಾರದ ಕ್ರಮಗಳನ್ನು ವಿರುದ್ಧ ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಅರುಣ್ ಜೇಟ್ಲಿ ಅವರನ್ನು ಸಂಪುಟದಿಂದ ಕೈಬಿಟ್ಟು ನೂತನ ಹಣಕಾಸು ಸಚಿವರನ್ನು ಆಯ್ಕೆ ಮಾಡಬೇಕು. ಇದನ್ನು ನಾನು ಸಂಪೂರ್ಣ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ ಎಂದರು.
ಜಿಎಸ್ ಟಿ ಮಂಡಳಿಯ 23ನೇ ಸಭೆ ಗುವಾಹಟಿಯಲ್ಲಿ ನಡೆದಿದ್ದು, ಈ ಸಭೆಯಲ್ಲಿ 177 ವಸ್ತುಗಳಿಗೆ ವಿಧಿಸಲಾಗಿದ್ದ ತೆರಿಗೆಯನ್ನು ಶೇ.18 ಕ್ಕೆ ಇಳಿಕೆ ಮಾಡಿ, 50 ಸಾಮಗ್ರಿಗಳಿಗೆ ಮಾತ್ರ ಶೇ.28 ರಷ್ಟು ತೆರಿಗೆ ವ್ಯಾಪ್ತಿ ಮುಂದುವರೆಸಲು ನಿರ್ಧರಿಸಲಾಗಿತ್ತು. ಹೀಗೆ ಅರುಣ್ ಜೇಟ್ಲಿ ಅವರು ಜಿಎಸ್ಟಿಯಲ್ಲಿ ದಿನಕ್ಕೊಂದು ಬದಲಾವಣೆ ಮಾಡುತ್ತಿರುವುದರ ವಿರುದ್ಧ ಸಿನ್ಹಾ ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


