ಹಿಜ್ಬುಲ್ ಕಮಾಂಡರ್ ಸಬ್ಜಾರ್ ಭಟ್ ಹತ್ಯೆ ಬಳಿಕ ಕಣಿವೆ ರಾಜ್ಯದಲ್ಲಿ ಆಘೋಷಿತ ಬಂದ್!
ಪುಲ್ವಾಮಾ ಜಿಲ್ಲೆಯ ಟ್ರಾಲ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ನೂತನ ಕಮಾಂಡರ್ ಸಬ್ಜಾರ್ ಭಟ್ ಹತ್ಯೆ ಬಳಿಕ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.

ಶ್ರೀನಗರ: ಪುಲ್ವಾಮಾ ಜಿಲ್ಲೆಯ ಟ್ರಾಲ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ನೂತನ ಕಮಾಂಡರ್ ಸಬ್ಜಾರ್ ಭಟ್ ಹತ್ಯೆ ಬಳಿಕ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.
ಜಮ್ಮು ಮತ್ತು ಕಾಶ್ಮೀರಲ್ಲಿ ಪ್ರಭಾವಿ ಉಗ್ರ ನಾಯಕನಾಗಿದ್ದ ಬುರ್ಹಾನ್ ವಾನಿ ಹತ್ಯೆಯಾದಾಗಲೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ವಾನಿ ಆಪ್ತ ಮತ್ತು ನೂತನ ಹಿಜ್ಬುಲ್ ಕಮಾಂಡರ್ ಸಬ್ಜಾರ್ ಭಟ್ ಹತ್ಯೆ ಬಳಿಕ ಮತ್ತದೇ ಪರಿಸ್ಥಿತಿ ಪುನಾರವರ್ತನೆಯಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಭಟ್ ಹತ್ಯೆ ಬಳಿಕ ಅನಂತನಾಗ್ ಜಿಲ್ಲೆಯಲ್ಲಿ ಭುಗಿಲೆದ್ದ ಹಿಂಸಾಚಾರದಿಂದಾಗಿ ಓರ್ವ ನಾಗರಿಕ ಗಾಯಗೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಟ್ರಾಲ್, ಪುಲ್ವಾಮಾ, ಕಂದಬಾಲ್, ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಸೇರಿದಂತೆ ಕಾಶ್ಮೀರದಾದ್ಯಂತ ಸುಮಾರು 50 ಪ್ರದೇಶಗಳಲ್ಲಿ ಕಲ್ಲು ತೂರಾಟದಂತಹ ಪ್ರಕರಣಗಳು ವರದಿಯಾಗಿವೆ.
ಕಾಶ್ಮೀರ ಕಣಿವೆಯ ಹಲವೆಡೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹಿಂಸಾಚಾರ ಭೀತಿಯಿಂದಾಗಿ ಜನ ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮನೆಗಳತ್ತ ದೌಡಾಯಿಸುತ್ತಿದ್ದಾರೆ. ಅಂತೆಯೇ 3 ಗಂಟೆಗಳಿಗೂ ಮುಂಚಿತವಾಗಿಯೇ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ಕುರಿತು ಮಾಹಿತಿ ಲಭ್ಯವಾಗಿವೆ.
ಇಂದು ಬೆಳಗ್ಗೆ ಪುಲ್ವಾಮಾ ಜಿಲ್ಲೆಯ ಟ್ರಾಲ್ ನ ಸೊಮಹ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಸಬ್ಜಾರ್ ಭಟ್ ನನ್ನು ಹೊಡೆದುರುಳಿಸಲಾಗಿತ್ತು. ಇದೇ ಎನ್ ಕೌಂಟರ್ ನಲ್ಲಿ ಮತ್ತಿಬ್ಬರು ಉಗ್ರರು ಕೂಡ ಹತರಾಗಿದ್ದರು. ಇನ್ನು ರಾಂಪುರ ಸೆಕ್ಟರ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ನಾಲ್ಕು ಮಂದಿ ಉಗ್ರರು ಸಾವನ್ನಪ್ಪಿದ್ದರು. ಇದರೊಂದಿಗೆ ಇಂದು ಕಣಿವೆ ರಾಜ್ಯದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಒಟ್ಟು 8 ಮಂದಿ ಉಗ್ರರನ್ನು ಸೇನೆ ಸದೆಬಡಿದಿದೆ.
ಅನಂತ್ ನಾಗ್ ಜಿಲ್ಲೆಯಲ್ಲಿ 2016ರ ಜುಲೈ 8ರಂದು ಉಗ್ರ ಬುರ್ಹಾನ್ ವಾನಿಯನ್ನು ಸೇನೆ ಕೊಂದು ಹಾಕಿತ್ತು. ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ ಉಲ್ಬಣಗೊಂಡಿತ್ತು. ಇದೇ ಸಂದರ್ಭದಲ್ಲೇ ವಾನಿ ಆಪ್ತ ಸಬ್ಜಾರ್ ಭಟ್ ಗೆ ಹಿಜ್ಬುಲ್ ಕಮಾಂಡರ್ ಹುದ್ದೆ ನೀಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


