ಜೆಎನ್ ಯು ವಿದ್ಯಾರ್ಥಿ ನಜೀಬ್ ನಾಪತ್ತೆ; ಪೊಲೀಸ್ ತನಿಖೆ ಕುರಿತಂತೆ ದೆಹಲಿ ಹೈಕೋರ್ಟ್ ಅಸಮಾಧಾನ!
ತೀವ್ರ ಕುತೂಹಲಕ್ಕೆ ಕಾರಣವಾಗಿರುವ ದೆಹಲಿ ಜೆಎನ್ ಯು ವಿದ್ಯಾರ್ಥಿ ನಜೀಬ್ ನಾಪತ್ತೆ ಪ್ರಕರಣ ಸಂಬಂಧ ಪೊಲೀಸರ ತನಿಖೆ ಸರಿಯಾದ ಮಾರ್ಗದಲ್ಲಿ ನಡೆದಿಲ್ಲ ಎಂದು ದೆಹಲಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ನವದೆಹಲಿ: ತೀವ್ರ ಕುತೂಹಲಕ್ಕೆ ಕಾರಣವಾಗಿರುವ ದೆಹಲಿ ಜೆಎನ್ ಯು ವಿದ್ಯಾರ್ಥಿ ನಜೀಬ್ ನಾಪತ್ತೆ ಪ್ರಕರಣ ಸಂಬಂಧ ಪೊಲೀಸರ ತನಿಖೆ ಸರಿಯಾದ ಮಾರ್ಗದಲ್ಲಿ ನಡೆದಿಲ್ಲ ಎಂದು ದೆಹಲಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಇಂದು ನಡೆದ ವಿಚಾರಣೆಯಲ್ಲಿ ದೆಹಲಿ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಪೊಲೀಸರು ಪ್ರಕರಣದ ಮುಜುಗರದಿಂದ ತಪ್ಪಿಸಿಕೊಳ್ಳುವ ದಾರಿ ಹುಡುಕುತ್ತಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು ನಿಭಾಯಿಸಿದ ರೀತಿ ಸರಿಯಾಗಿಲ್ಲ. ಅಸಲಿಗೆ ತನಿಖೆ ಸರಿಯಾಗಿ ನಡೆದಿಲ್ಲ ಎಂದು ಹೇಳಿದೆ. "ದೆಹಲಿ ಪೊಲೀಸರು ತನಿಖೆ ನಡೆಸುತ್ತಿರುವ ರೀತಿಯನ್ನು ನೋಡಿದರೆ ಅವರು ಪ್ರಕರಣವನ್ನು ದೊಡ್ಡ ಸೆನ್ಸೇಶನ್ ಮಾಡಲು ಹೊರಟಿದ್ದಾರೆಂದು ಅನಿಸುತ್ತಿದೆ". ನಾಪತ್ತೆಯಾದ ವಿದ್ಯಾರ್ಥಿಯ ಲ್ಯಾಪ್ ಟಾಪ್ ಮತ್ತು ಕರೆ ವಿವರಗಳ ಫೊರೆನ್ಸಿಕ್ ವರದಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಸೀಲ್ ಮಾಡಲ್ಪಟ್ಟ ಕವರಿನಲ್ಲಿ ಸಲ್ಲಿಸಿದ್ದರೂ ಆರಂಭದಲ್ಲಿ ಸ್ವತ: ತಮ್ಮ ವಕೀಲರ ಬಳಿ ಪೊಲೀಸರು ಇದರ ವಿವರಗಳನ್ನು ನೀಡದೇ ಇರುವ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಪೊಲೀಸರು ವಿಶೇಷ ತನಿಖಾ ತಂಡಗಳನ್ನು ರಚಿಸಿ ದೇಶಾದ್ಯಂತ ನಾಪತ್ತೆಯಾದ ವಿದ್ಯಾರ್ಥಿಯ ಪತ್ತೆಗಾಗಿ ಶ್ರಮಿಸುತ್ತಿದ್ದಾರೆ. ಆದರೆ ಆತನ ನಾಪತ್ತೆಗೆ ಕಾರಣರಾಗಿದ್ದಾರೆಂದು ಶಂಕಿಸಲಾದ ಒಂಬತ್ತು ಮಂದಿ ವಿದ್ಯಾರ್ಥಿಗಳನ್ನು ಆರಂಭದಲ್ಲಿಯೇ ಪೊಲೀಸರು ಪ್ರಶ್ನಿಸಿಲ್ಲ. ಕನಿಷ್ಠ ಫಕ್ಷ ಅವರನ್ನು ವಶಕ್ಕೆ ತೆಗೆದುಕೊಳ್ಳದೇ ಇರುವುದಕ್ಕೂ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ಇನ್ನು ವಿಚಾರಣೆ ವೇಳೆ ಡಿಸಿಪಿ ರಾಮಗೋಪಾಲ್ ನಾಯ್ಕಿ ತಾವು ಈ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾಗಿಯೂ ಶಂಕಿತ ವಿದ್ಯಾರ್ಥಿಗಳ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿಲ್ಲದೇ ಇರುವುದರಿಂದ ಅವರ ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲವೆಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ ಶಂಕಿತ ವಿದ್ಯಾರ್ಥಿಗಳು ನಜೀಬ್ ನಾಪತ್ತೆಯಾಗುವ ಮುನ್ನಾ ದಿನ ಆತನ ಮೇಲೆ ಹಲ್ಲೆ ನಡೆಸಿದ್ದರೆಂದು ಆಪಾದಿಸಲಾಗಿರುವಾಗ ಅವರ ಮೊಬೈಲ್ ಫೋನುಗಳ ತಪಾಸಣೆ ಸರಿಯಾದ ಕ್ರಮವಾಗಿರುತ್ತಿತ್ತು. ಆದರೆ ಇದನ್ನು ಪೊಲೀಸರು ಮಾಡಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಇದಲ್ಲದೆ ಪೊಲೀಸರು ತಮ್ಮ ಪರವಾಗಿ ವಾದಿಸುತ್ತಿರುವ ವಕೀಲರಿಗೇ ಸಾಕಷ್ಟು ವಿಚಾರಗಳನ್ನು ಹೇಳಿಲ್ಲ. ಅಂದ ಮೇಲೆ ಪ್ರಕರಣದಲ್ಲಿ ಸಾಕಷ್ಟು ಗಂಭೀರ ವಿಚಾರಗಳನ್ನು ಮರೆಮಾಚಿರುವ ಸಾಧ್ಯತೆಗಳಿರುವ ಕುರಿತು ಶಂಕೆ ಮೂಡುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಕಳೆದ 2016 ಅಕ್ಟೋಬರ್ 14ರಂದು ಜೆಎನ್ ಯು ವಿದ್ಯಾರ್ಥಿ ನಜೀಬ್ ಹಾಗೂ ಎಬಿವಿಪಿ ಕಾರ್ಯಕರ್ತರೊಂದಿಗೆ ಜಗಳವಾಗಿತ್ತು, ಆ ಜಗಳ ಬಳಿಕ ನಜೀಬ್ ನಾಪತ್ತೆಯಾಗಿದ್ದ. ಹೀಗಾಗಿ ಆರ್ ಎಸ್ ಎಸ್ ಬೆಂಬಲದ ಎಬಿವಿಪಿ ಸಂಘಟನೆ ಕಾರ್ಯಕರ್ತರ ಮೇಲೆ ಪೊಲೀಸರು ಅನುಮಾನದ ಆಧಾರದ ಮೇರೆಗೆ ಪ್ರಕರಣ ದಾಖಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


