ದೇಶ

ಉಗ್ರರಿಂದ ಕಾರು ಹೈಜಾಕ್; ಜಮ್ಮು ಮತ್ತು ಕಾಶ್ಮೀರದಲ್ಲಿ ಹೈಅಲರ್ಟ್!

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಶಂಕಿತ ಉಗ್ರರು ಕಾರೊಂದನ್ನು ಹೈಜಾಕ್ ಮಾಡಿದ್ದು, ಈ ಹಿನ್ನಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಬುಧವಾರ ತಿಳಿದುಬಂದಿದೆ...

ಉಗ್ರರಿಂದ ಕಾರು ಹೈಜಾಕ್; ಜಮ್ಮು ಮತ್ತು ಕಾಶ್ಮೀರದಲ್ಲಿ ಹೈಅಲರ್ಟ್!
ಸಂಗ್ರಹ ಚಿತ್ರ
Published On :
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಶಂಕಿತ ಉಗ್ರರು ಕಾರೊಂದನ್ನು ಹೈಜಾಕ್ ಮಾಡಿದ್ದು, ಈ ಹಿನ್ನಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಬುಧವಾರ ತಿಳಿದುಬಂದಿದೆ. 
ಪುಲ್ವಾಮ ಜಿಲ್ಲೆಯ ಸಂಬೂರ ಎಂಬ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ತಮ್ಮ ಕಾರನ್ನು ನಿಲ್ಲಿಸಿದ್ದರು. ಈ ವೇಳೆ ಸ್ಥಳಕ್ಕೆ ಬಂದಿರುವ ಶಸ್ತ್ರಾಸ್ತ್ರಧಾರಿಗಳ ಗುಂಪು ವ್ಯಕ್ತಿಯನ್ನು ಬೆದರಿಸಿ ಕಾರನ್ನು ಕಿತ್ತುಕೊಂಡು ಹೋಗಿದ್ದಾರೆ. 
ಕೂಡಲೇ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೆಲ ದಿನಗಳ ಹಿಂದಷ್ಟೇ ಹೊಸದಾಗಿ ಬಿಳಿ ಕಾರೊಂದನ್ನು ಖರೀದಿ ಮಾಡಲಾಗಿತ್ತು. ಕಾರಿಗೆ ಶಾಶ್ವತ ನೋಂದಣಿ ಸಂಖ್ಯೆ ಇರಲಿಲ್ಲ. ಸಂಬೂರ ಪ್ರದೇಶದಲ್ಲಿ ಶಸ್ತ್ರಾಸ್ತ್ರಧಾರಿಗಳ ಗುಂಪೊಂದು ಬಂದು ಬೆದರಿಸಿ ಕಾರನ್ನು ಕಿತ್ತುಕೊಂಡು ಹೋಗಿದ್ದಾರೆಂದು ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾರೆ. 
ವ್ಯಕ್ತಿ ನೀಡಿದ ಮಾಹಿತಿ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 
ಶಂಕಿತ ಉಗ್ರರು ಕಾರನ್ನು ಹೈಜಾಕ್ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈಗಾಗಲೇ ಎಲ್ಲಾ ಪೊಲೀಸ್ ಠಾಣೆಗಳು, ನಿಯಂತ್ರಣ ಕೊಠಡಿ ಮತ್ತು ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಕಳ್ಳತನ ಮಾಡಿರುವ ಕಾರನ್ನು ಉಗ್ರರು ತಮ್ಮ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳಿದ್ದು, ಅನುಮಾನ ಬಂದ ವಾಹನಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 
ಕಾರು ಹೈಜಾಕ್ ಮಾಡಿದ ಸುದ್ದಿ ಕೇಳಿ ಬಂದ ಕೆಲವೇ ಗಂಟೆಗಳಲ್ಲಿ ಬುದ್ಗಾಮ್ ಜಿಲ್ಲೆಯ ಛದೂರ್'ನ ಕ್ರಾಲ್ಚೆಕ್ ಎಂಬ ಗ್ರಾಮದಲ್ಲಿ ಗುಂಡಿನ ಮೊರೆತದ ಶಬ್ಧ ಕೇಳಿಬಂದಿದ್ದು, ಇದು ಸ್ಥಳೀಯರಲ್ಲಿನ ಆತಂಕವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಕ್ರಾಲ್ಕೆಚ್ ಗ್ರಾಮದಲ್ಲಿ 20-40 ಗುಂಡುಗಳು ಹಾರಿರುವ ಶಬ್ಧ ಕೇಳಿಬಂದಿದೆ ಎಂದು ತಿಳಿದುಬಂದಿದೆ. ಸಾವು, ನೋವು ಸಂಭವಿಸಿರುವುದಾಗಿ ಎಲ್ಲಿಯೂ ತಿಳಿದುಬಂದಿಲ್ಲ. ಗ್ರಾಮದಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಬುದ್ಗಾಮ್ ಜಿಲ್ಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.