ದೇಶ

ದೆಹಲಿಯಲ್ಲಿ ಅನಿಲ ಸೋರಿಕೆ: 310 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ರಾಜಧಾನಿ ದೆಹಲಿಯ ತುಘಲಕಾಬಾದ್ ನಲ್ಲಿರುವ ರಾಣಿ ಝಾನ್ಸಿ ಸರ್ವೋದಯ ಕನ್ಯಾ ವಿದ್ಯಾಲಯದ ಹತ್ತಿರವಿರುವ ಶಾಲೆಯೊಂದರಲ್ಲಿ ಅನಿಲ ಸೋರಿಕೆಯಾಗಿದ್ದು, ಪರಿಣಾಮ 310ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶನಿವಾರ ನಡೆದಿದೆ...

ದೆಹಲಿಯಲ್ಲಿ ಅನಿಲ ಸೋರಿಕೆ: 310 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
ವಿದ್ಯಾರ್ಥಿಗಳು ದಾಖಲಾಗಿರುವ ಆಸ್ಪತ್ರೆಯ ಮುಂದೆ ನಿಂತಿರುವ ಪೊಲೀಸರು
Published On :
ನವದೆಹಲಿ: ರಾಜಧಾನಿ ದೆಹಲಿಯ ತುಘಲಕಾಬಾದ್ ನಲ್ಲಿರುವ ರಾಣಿ ಝಾನ್ಸಿ ಸರ್ವೋದಯ ಕನ್ಯಾ ವಿದ್ಯಾಲಯದ ಹತ್ತಿರವಿರುವ ಶಾಲೆಯೊಂದರಲ್ಲಿ ಅನಿಲ ಸೋರಿಕೆಯಾಗಿದ್ದು, ಪರಿಣಾಮ 310ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶನಿವಾರ ನಡೆದಿದೆ. 
ಆಗ್ನೇಯ ದೆಹಲಿಯ ತುಘಲಕಾಬಾದ್ ನಲ್ಲಿರುವ ಡಿಪೋವೊಂದರಲ್ಲಿ ಅನಿಲ ಸೋರಿಕೆಯಾಗಿದೆ. ಪರಿಣಾಮ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ, ಕೂಡಲೇ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಿಲ ಸೋರಿಕೆ ಉಂಟಾದ ಡಿಪೋ ಶಾಲೆಯ ಸಮೀಪದಲ್ಲಿಯೇ ಇರುವ ತುಘಲಕಾಬಾದ್ ರೈಲ್ವೇ ಕಾಲೋನಿಯಲ್ಲಿದೆ.
ಅನಿಲ ಸೋರಿಕೆ ಕುರಿತಂತೆ ಬೆಳಿಗ್ಗೆ 7.35ಕ ಸುಮಾರಿಗೆ ಮಾಹಿತಿ ತಿಳಿದುಬಂದಿತ್ತು. ಕೂಡಲೇ 7 ಅಗ್ನಿ ಶಾಮಕದಳದ ವಾಹನಗಳು ಹಾಗೂ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಲಾಯಿತು. ಅನಿಲ ಸೋರಿಕೆ ಎಲ್ಲಿಂದ ಉಂಟಾಗುತ್ತಿದೆ ಎಂಬುದು ಈ ವರೆಗೂ ಪತ್ತೆಯಾಗಿಲ್ಲ ಎಂದು ದೆಹಲಿ ಅಗ್ನಿ ಶಾಮಕ ಘಟಕದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. 
ಅನಿಲ ಸೋರಿಕೆಯಾಗುತ್ತಿದ್ದಂಯೇ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇನ್ನಿತರೆ ಸಿಬ್ಬಂದಿಗಳನ್ನು ರಾಣಿ ಝಾನ್ಸಿ ಸರ್ವೋದಯ ಕನ್ಯಾ ವಿದ್ಯಾಲಯದಿಂದ ಹೊರಗೆ ಕಳುಹಿಸಲಾಯಿತು ಅಧಿಕಾರಿಗಳು ಹೇಳಿದ್ದಾರೆ. 
ಅನಿಲ ಸೋರಿಕೆಯಿಂದಾಗಿ 30 ವಿದ್ಯಾರ್ಥಿಗಳು ಪ್ರಜ್ಞೆ ಕಳೆದುಕೊಂಡಿದ್ದರು. ಪ್ರಸ್ತುತ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿಸಿದ್ದಾರೆ. 
ಕೆಲ ವಿದ್ಯಾರ್ಥಿಗಳು ಕಣ್ಣು ಮತ್ತು ಗಂಟಲಿನಲ್ಲಿ ತುರಿಕೆಯ ಅನುಭವವಾಗುತ್ತಿರುವುದಾಗಿ ಹೇಳಿದರು. ಕೂಡಲೇ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವಿದ್ಯಾಲಯದ ಉಪ ಪ್ರಾಂಶುಪಾಲರು ಹೇಳಿದ್ದಾರೆ. 
ತುಘಲಕಾಬಾದ್ ಡಿಪೋದಲ್ಲಿ ರಾಸಾಯನಿಕ ಸೋರಿಕೆಯಾಗಿದೆ.  ಶಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿರುವ ಸಮಯದಲ್ಲಿ ಕೆಲ ಮಕ್ಕಳು ಉಸಿರಾಟ ಸಮಸ್ಯೆ ಹಾಗೂ ಕಣ್ಣು, ಗಂಟಲಿನಲ್ಲಿ ತುರಿಕೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕೂಡಲೇ ಸಿಬ್ಬಂದಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 
ಘಟನಾ ಸ್ಥಳಕ್ಕೆ ಹೋಗುತ್ತಿದ್ದಂತೆಯೇ ತಡ ಮಾಡದೆಯೇ ಮಕ್ಕಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗಳನ್ನು ಹೊರಗೆ ಕಳುಹಿಸಲಾಯಿತು. ನಂತರ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪ್ರಸ್ತುತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿದ್ದಾರೆಂದು ಪ್ರಾಂಶುಪಾಲರು ಹೇಳಿದ್ದಾರೆ. 
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದೆಹಲಿ ಉಪ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ ಅವರು, ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಕಣ್ಣು ಹಾಗೂ ಗಂಟಲಿನಲ್ಲಿ ತುರಿಕೆ ಕಂಡು ಬಂದ ಮಕ್ಕಳು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ದೌಡಾಯಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಅನಿಲ ಸೋರಿಕೆಯಾಗಿರುವ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ಎಂದು ಹೇಳಿದ್ದಾರೆ. 
ಘಟನಾ ಸ್ಥಳಕ್ಕೆ ಈಗಾಗಲೇ 17ಕ್ಕೂ ಹೆಚ್ಚು ಅ್ಯಂಬುಲೆನ್ಸ್ ವಾಹನಗಳು ದೌಡಾಯಿಸಿದ್ದು, ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡುತ್ತಿದೆ ಎಂದು ವರದಿಗಳು ತಿಳಿಸಿವೆ. 
ವಿದ್ಯಾರ್ಥಿಯೊಬ್ಬರ ತಂದೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗಳನ್ನು ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ಶಾಲೆಯಿಂದ ಕರೆ ಬಂದಿತ್ತು. ನನಗೆ ಬಹಳ ಆಘಾತವಾಯಿತು. ನನ್ನ ಮಗಳು ಯಾವ ಆಸ್ಪತ್ರೆಯಲ್ಲಿದ್ದಾಳೆಂಬುದು ನನಗೆ ತಿಳಿಯುತ್ತಿಲ್ಲ. ಆಕೆ ಸುರಕ್ಷಿತವಾಗಿದ್ದರೆ ಸಾಕು ಎಂದು ಹೇಳಿದ್ದಾರೆ. 
ಮತ್ತೊಬ್ಬ ವಿದ್ಯಾರ್ಥಿಯ ತಾಯಿ ಪ್ರತಿಕ್ರಿಯೆ ನೀಡಿ, ಮನೆಗೆ ಶಾಲೆಯಿಂದ ಕರೆ ಬಂದಿತ್ತು. ನನ್ನ ಚಿಕ್ಕ ಮಗ ಕರೆಯನ್ನು ಸ್ವೀಕರಿಸಿದ್ದ. ಈ ವೇಳೆ ಮಾತನಾಡಿದ್ದ ಪೊಲೀಸರು ಮಗಳಿಗೆ ಉಸಿರಾಟ ಸಮಸ್ಯೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು. ಕೂಡಲೇ ಸ್ಥಳಕ್ಕೆ ಬಂದೆ, ಈಗಲೂ ನನ್ನ ಮಗಳನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.