ಉತ್ತರ ಪ್ರದೇಶದ ಮುಂದಿನ ಸಿಎಂ ಯಾರು?
ಸತತ 15 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಸ್ವಂತ ಬಲದಿಂದ ಅಧಿಕಾರದ ಗದ್ದುಗೆ ಏರುತ್ತಿದ್ದು, ಆಡಳಿತ ವಿರೋಧಿ ಅಲೆಯನ್ನು ಬಿಜೆಪಿ ಪರಿಣಾಮಕಾರಿಯಾಗಿ ಬಳಸಿಕೊಂಡು ಅಭೂತಪೂರ್ವ ಯಶಸ್ಸು ಸಾಧಿಸಿದೆ.

ಲಖನೌ: ಸತತ 15 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಸ್ವಂತ ಬಲದಿಂದ ಅಧಿಕಾರದ ಗದ್ದುಗೆ ಏರುತ್ತಿದ್ದು, ಆಡಳಿತ ವಿರೋಧಿ ಅಲೆಯನ್ನು ಬಿಜೆಪಿ ಪರಿಣಾಮಕಾರಿಯಾಗಿ ಬಳಸಿಕೊಂಡು ಅಭೂತಪೂರ್ವ ಯಶಸ್ಸು ಸಾಧಿಸಿದೆ.
ಒಟ್ಟು 404 ಕ್ಷೇತ್ರಗಳ ಪೈಕಿ ಬಿಜೆಪಿ ಬರೊಬ್ಬರಿ 305 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಎಸ್ಪಿ-ಕಾಂಗ್ರೆಸ್ ಮೈತ್ರೀಕೂಟ 69 ಮತ್ತು ಬಿಎಸ್ ಪಿ19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ ಬಿಜೆಪಿ ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆ ಮಾಡುವುದು ಸ್ಪಷ್ಟವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಹಾಗೂ ಉತ್ತರ ಪ್ರದೇಶ ಬಿಜೆಪಿ ನಾಯಕರ ಸಾಮೂಹಿಕ ನಾಯಕತ್ವಕ್ಕೆ ಜಯ ಸಂದಂತಾಗಿದೆ. ಇನ್ನು ಉತ್ತರ ಪ್ರದೇಶದಲ್ಲಿ ಅಧಿಕಾರದ ಗದ್ದುಗೆ ಏರುತ್ತಿರುವ ಬಿಜೆಪಿಯಲ್ಲಿನ ಸಿಎಂ ಅಭ್ಯರ್ಥಿಗಳ ಕುರಿತು ಒಂದಷ್ಟು ವಿಶ್ಲೇಷಣೆ ಇಲ್ಲಿದೆ.
ಯೋಗಿ ಆದಿತ್ಯನಾಥ್
ಪೂರ್ವಾಂಚಲ ಭಾಗದ ಪ್ರಬಲ ಮುಖಂಡರಾಗಿ ಗುರುತಿಸಿಕೊಂಡಿರುವ ಯೋಗಿ ಆದಿತ್ಯಾನಾಥ್ ಸಿಎಂ ರೇಸ್ ನಲ್ಲಿದ್ದು, ಆರ್ ಎಸ್ ಎಸ್ ಮುಖಂಡರ ಬೆಂಬಲ ಇವರಿಗಿದೆ. ಆದರೆ ವಿವಾದಾತ್ಮಕ ಹೇಳಿಕೆಗಳು ಯೋಗಿ ಆದಿತ್ಯಾನಾಥ್ ಅವರ ಸಿಎಂ ಕನಸಿಗೆ ಭಂಗ ತರುವ ಸಾಧ್ಯತೆಯನ್ನೂ ಅಲ್ಲ ಗಳೆಯುವಂತಿಲ್ಲ.
ರಾಜ್ ನಾಥ್ ಸಿಂಗ್
ಉತ್ತರ ಪ್ರದೇಶ ಚುನಾವಣೆ ಘೋಷಣೆಯಾದ ದಿನದಿಂದಲೂ ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ಅವರ ಹೆಸರು ಸಿಎಂ ಹುದ್ದೆಗೆ ಕೇಳಿಬರುತ್ತಲೇ ಇದೆ. ಈ ಹಿಂದೆ ಒಮ್ಮೆ ಸಿಎಂ ಆಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ರಾಜ್ ನಾಥ್ ಸಿಂಗ್, ಈ ಹಿಂದೆ ತಾವು ಲಖನೌಗೆ ಮರಳು ಸಾಧ್ಯತೆ ಇಲ್ಲ ಎಂದು ಹೇಳುವ ಮೂಲಕ ತಾವು ಸಿಎಂ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಹೇಳಿದ್ದರು.
ಕೇಶವ ಮೌರ್ಯ
ಪೂರ್ವಾಂಚಲ ಭಾಗದ ಮುಖಂಡರಾಗಿರುವ ಕೇಶವ ಮೌರ್ಯ ಅವರ ಹೆಸರ ಕೂಡ ಉತ್ತರ ಪ್ರದೇಶ ಸಿಎಂ ಗಾದಿಗೆ ಪ್ರಬಲವಾಗಿ ಕೇಳಿಬರುತ್ತಿದ್ದು, ಹಿಂದುಳಿದ ವರ್ಗಗಳ ಮುಖಂಡ, ಕುರ್ಮಿ ಜನಾಂಗದ ನಾಯಕರಾಗಿ ಕೇಶವ್ ಮೌರ್ಯ ಗುರುತಿಸಿಕೊಂಡಿದ್ದಾರೆ. ಇದಲ್ಲದೆ ವಿಹೆಚ್ ಪಿ ಹಿನ್ನೆಲೆ ಹೊಂದಿರುವ ಕೇಶವ್ ಮೌರ್ಯ ಕೇಂದ್ರ ಸಚಿವರಾಗಿದ್ದಾರೆ ಮತ್ತು ಉತ್ತರ ಪ್ರದೇಶ ಬಿಜೆಪಿ ಘಟಕದ ಸಾರಥ್ಯವಹಿಸಿದ್ದಾರೆ. ಕೇಶವ್ ಪ್ರಸಾದ್ ಮೌರ್ಯ ಅವರು, ಕುಶ್ವಾಹ್-ಮೌರ್ಯ ಸಮಾಜಕ್ಕೆ ಸೇರಿದವರಾಗಿದ್ದು, ಉತ್ತರ ಪ್ರದೇಶದ ಅತೀ ದೊಡ್ಡ ಹಿಂದುಳಿದ ಸಮಾಜದ ಮುಖಂಡರಾಗಿದ್ದಾರೆ.
ಉಮಾಭಾರತಿ
ಬಿಜೆಪಿಯ ಫೈರ್ ಬ್ರಾಂಡ್ ಎಂದೇ ಖ್ಯಾತರಾಗಿರುವ ಕೇಂದ್ರ ಸಚಿವೆ ಉಮಾಭಾರತಿ ಅವರೂ ಕೂಡ ಉತ್ತರ ಪ್ರದೇಶ ಸಿಎಂ ಆಂಕಾಂಕ್ಷಿಗಳ ಹುದ್ದೆಯಲ್ಲಿದ್ದು, ಆರ್ ಎಸ್ ಎಸ್ ಮತ್ತು ಅಮಿತ್ ಶಾ ಅವರ ಬೆಂಬಲ ಇವರಿಗಿದೆ ಎಂದು ಹೇಳಲಾಗುತ್ತಿದೆ.
ಡಾ.ಮಹೇಶ್ ಶರ್ಮಾ
ಆರ್ ಎಸ್ ಎಸ್ ಹಿನ್ನಲೆಯುಳ್ಳ ಡಾ.ಮಹೇಶ್ ಶರ್ಮಾ ಅವರ ಹೆಸರೂ ಕೂಡ ಸಿಎಂ ರೇಸ್ ನಲ್ಲಿ ಕೇಳಿಬರುತ್ತಿದ್ದು, ಮಹೇಶ್ ಶರ್ಮಾ ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದಾರೆ. ಅಂತೆಯೇ ಹಾಲಿ ಕೇಂದ್ರ ಸಚಿವರಾಗಿದ್ದಾರೆ.
ಕಲ್ರಾಜ್ ಮಿಶ್ರಾ
ಕಲ್ ರಾಜ್ ಮಿಶ್ರಾ ಅವರ ಬಹು ಸಂಖ್ಯಾತ ಬ್ರಾಹ್ಮಣ ಸಮುದಾಯದವರಾಗಿದ್ದು, ಉತ್ತರ ಪ್ರದೇಶದಲ್ಲಿ ಉತ್ತಮ ರಾಜಕರಾಣಿ ಎಂಬ ಖ್ಯಾತಿ ಪಡೆದಿದ್ದಾರೆ. ವಿವಾದಗಳಿಂದ ದೂರವಿರುವ ಕಲ್ರಾಜ್ ಮಿಶ್ರಾ ಅವರು, ಬ್ರಾಹ್ಮಣ ಮುಖಂಡ, ಉತ್ತಮ ರಾಜಕಾರಣಿ. ಇವರಿಗೆ ರಾಷ್ಟ್ರ ರಾಜಕಾರಣದ ಅನುಭವವಿದೆ. ಬ್ರಾಹ್ಮಣ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಭರ್ಜರಿ ಪ್ರಚಾರ ನಡೆಸಿ ಬ್ರಾಹ್ಮಣ ಮತ್ತು ಮೇಲ್ವರ್ಗದ ಜಾತಿಗಳ ಮತಗಳನ್ನು ಗಟ್ಟಿಗೊಳಿಸಿದರು.
ಇವರಷ್ಟೇ ಅಲ್ಲದೇ ಟೆಲಿಕಾಂ ಸಚಿವ ಮನೋಜ್ ಸಿಂಹಾ, ಬರೇಲಿ ಸಂಸದ ಸಂತೋಷ್ ಗಂಗ್ವಾರ್ ಅವರ ಹೆಸರೂ ಕೂಡ ಸಿಎಂ ಹುದ್ದೆ ರೇಸ್ ನಲ್ಲಿ ಕೇಳಿಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


