ದೇಶ

ಪ್ರಧಾನಿ ಕಾರ್ಯಕ್ರಮದಲ್ಲಿ ಮಹಿಳೆಯ ಹಿಜಾಬ್ ತೆಗೆಯಲು ಭದ್ರತಾ ಸಿಬ್ಬಂದಿ ಸೂಚನೆ; ಕೆಲಕಾಲ ಗೊಂದಲ!

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಮಹಿಳೆಯೊಬ್ಬರ ಹಿಜಾಬ್ ನ್ನು ಒತ್ತಾಯದಿಂದ ತೆಗೆಸಿರುವ ಘಟನೆಯೊಂದು ನಡೆದಿದೆ...

ಪ್ರಧಾನಿ ಕಾರ್ಯಕ್ರಮದಲ್ಲಿ ಮಹಿಳೆಯ ಹಿಜಾಬ್ ತೆಗೆಯಲು ಭದ್ರತಾ ಸಿಬ್ಬಂದಿ ಸೂಚನೆ; ಕೆಲಕಾಲ ಗೊಂದಲ!
ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಗಾಂಧಿನಗರದಲ್ಲಿ ನಿನ್ನೆ ನಡೆದ ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ.
Published On :
ಗಾಂಧಿನಗರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಮಹಿಳೆಯೊಬ್ಬರ ಹಿಜಾಬ್ ನ್ನು ಒತ್ತಾಯದಿಂದ ತೆಗೆಸಿರುವ ಘಟನೆಯೊಂದು ನಡೆದಿದೆ. 
ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಗಾಂಧಿನಗರದಲ್ಲಿ ನಿನ್ನೆ ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿಯವರು ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಆಹ್ವಾನ ಪಡೆದಿದ್ದ ಮುಸ್ಲಿಂ ಮಹಿಳೆಯೊಬ್ಬರು ಬಂದಿದ್ದರು. ಈ ವೇಳೆ ಅವರನ್ನು ತೆಡಿದ್ದ ಭದ್ರತಾ ಸಿಬ್ಬಂದಿಗಳು ಒತ್ತಾಯಪೂರ್ವಕವಾಗಿ ಹಿಜಾಬ್ ತೆಗೆಸಿದ್ದಾರೆಂದು ಹೇಳಲಾಗುತ್ತಿದೆ. 
ಕಾರ್ಯಕ್ರಮಕ್ಕೆ ಹಾಜರಾಗಲು ಬಂದಿದ್ದ ಇಬ್ಬರು ಕೇರಳ ಮೂಲದ ಮುಸ್ಲಿಂ ಮಹಿಳೆಯರನ್ನು ಭದ್ರತಾ ಸಿಬ್ಬಂದಿಗಳು ತಡೆಹಿಡಿದ್ದಾರೆ. ಕಾರ್ಯಕ್ರಮಕ್ಕೆ ಹಿಜಾಬ್ ಧರಿಸಿ ಬಂದಿದ್ದ ಇಬ್ಬರು ಮುಸ್ಲಿಂ ಮಹಿಳೆಯರನ್ನು ತಡೆದ ಭದ್ರತಾ ಸಿಬ್ಬಂದಿಗಳು ಹಿಜಾಬ್ ತೆಗೆದು ನಂತರಷ್ಟೇ ಕಾರ್ಯಕ್ರಮಕ್ಕೆ ಹಾಜರಾಗಲು ಸೂಚನೆ ನೀಡಿದ್ದರು. ಈ ವೇಳೆ ಮಹಿಳೆಯರು ತಿರಸ್ಕರಿಸಿದಾಗ ಒತ್ತಾಯಪೂರ್ವಕವಾಗಿ ಭದ್ರತಾ ಸಿಬ್ಬಂದಿಗಳು ಹಿಜಾಬ್ ತೆಗೆಸಿದ್ದರೆಂಬ ಆರೋಪಗಳು ಕೇಳಿಬಂದಿವೆ. 
ಈ ಆರೋಪಗಳನ್ನು ತಿರಸ್ಕರಿಸುವ ಅಧಿಕಾರಿಗಳು, ನಾವು ಯಾರನ್ನೂ ಒತ್ತಾಯ ಮಾಡಿಲ್ಲ. ಹಿಜಾಬ್ ತೆಗೆಯುವಂತೆ ಯಾರಿಗೂ ಒತ್ತಡ ಹೇರಿಲ್ಲ. ನಿಯಮಕ್ಕೆ ವಿರುದ್ಧವಾಗಿ ಭದ್ರತಾ ಸಿಬ್ಬಂದಿಗಳು ನಡೆಸಿಲ್ಲ. ನಿಯಮದಂತೆಯೇ ಅಧಿಕಾರಿಗಳು ನಡೆದುಕೊಂಡಿದ್ದಾರೆಂದು ಹೇಳಿದ್ದಾರೆ. 
ಭದ್ರತೆಯ ಉದ್ದೇಶದಿಂದ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಅತಿಥಿಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಇಬ್ಬರು ಮಹಿಳೆಯರನ್ನು ಮಹಿಳಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಹಿಜಾಬ್ ಒಳಗೆ ಏನಾದರೂ ಅವಿತಿಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಹಿಜಾಬ್ ತೆಗೆಯುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. 
ಮಹಿಳೆಯರು ಸಂಪೂರ್ಣವಾಗಿ ಬುರ್ಖಾ ಧರಿಸಿದ್ದರು. ಪರಿಶೀಲನೆ ವೇಳೆ ಮಹಿಳಾ ಅಧಿಕಾರಿಗಳು ಮಾತ್ರ ಇದ್ದರು. ಪರಿಶೀಲನೆಗಾಗಿ ಮಾತ್ರ ಆ ಕ್ಷಣಕ್ಕೆ ಹಿಜಾಬ್ ತೆಗೆಯಲು ಸೂಚಿಸಿದ್ದರು. ಆದರೆ ಹಿಜಾಬ್ ತೆಗೆಯಲು ಮಹಿಳೆಯಲು ತಿರಸ್ಕರಿಸಿದರು. ನಾವು ಯಾರ ಮೇಲೂ ಒತ್ತಡ ಹೇರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಬ್ರಹ್ಮ್ ಭಟ್ ಅವರು ಹೇಳಿದ್ದಾರೆ. 
ಇನ್ನು ಕೆಲ ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಸ್ಲಿಂ ಮಹಿಳೆಯರು, ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಂತೆಯೇ ಹಿಜಾಬ್ ಧರಿಸಿದ್ದ ಕಾರಣಕ್ಕೆ ಅಧಿಕಾರಿಗಳು ನಮ್ಮನ್ನು ತಡೆಹಿಡಿದರು. ಹಿಜಾಬ್ ತೆಗೆದ ನಂತರವಷ್ಟೇ ಕಾರ್ಯಕ್ರಮಕ್ಕೆ ಹಾಜರಾಗಲು ನಮಗೆ ಅನುಮತಿ ನೀಡಲಾಯಿತು ಎಂದು ಹೇಳಿಕೊಂಡಿದ್ದಾರೆ. 
ಇದೇ ಕಾರ್ಯಕ್ರಮದಲ್ಲಿ ಮತ್ತೊಂದು ಘಟನೆ ಕೂಡ ನಡೆದಿದೆ. ಉತ್ತರಪ್ರದೇಶದ ಪಂಚಾಯತೊಂದರ ಅಧ್ಯಕ್ಷೆ ಪ್ರಧಾನಿ ಮೋದಿಯವರಿಗೆ ಮನವಿ ಪತ್ರವನ್ನು ಸಲ್ಲಿಸಲು ಬಂದಿದ್ದರು, ಉತ್ತರಪ್ರದೇಶ ರಾಜ್ಯದಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರ ತಮ್ಮ ಗ್ರಾಮವನ್ನು ನಿರ್ಲಕ್ಷಿಸುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಕೋರಿ ಮಹಿಳೆ ಮನವಿ ಪತ್ರ ಸಲ್ಲಿಸಲು ಕಾರ್ಯಕ್ರಮಕ್ಕೆ ಬಂದಿದ್ದರು. 
ಮಹಿಳೆಯನ್ನು ಶಾಲಿನಿ ಸಿಂಗ್ ಎಂದು ಗುರ್ತಿಸಲಾಗಿದೆ. ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಶಾಲಿನಿಯವರು ಭದ್ರತಾ ಸಿಬ್ಬಂದಿಗಳನ್ನು ತಳ್ಳಿ ಮನವಿ ಪತ್ರ ಸಲ್ಲಿಸಲು ಮುಖ್ಯ ವೇದಿಕೆ ಬಳಿ ಬಂದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿಗಳು ಮಹಿಳೆಯನ್ನು ತಡೆದು ಬಲವಂತದಿಂದ ಹೊರಗೆ ಎಳೆದುಕೊಂಡು ಹೋಗಿದ್ದಾರೆ. 
ಅಖಿಲೇಶ್ ಯಾವದ್ ಅವರ ವಿರುದ್ಧ ಮೋದಿಯವರ ಬಳಿ ಮನವಿ ಪತ್ರ ಸಲ್ಲಿಸಲು ಮಹಿಳೆ ಬಂದಿದ್ದರು. ಆದರೆ, ಅವರಿಗೆ ಭದ್ರತೆ ನಿಯಮಾವಳಿಯ ಬಗ್ಗೆ ಅರಿವಿರಲಿಲ್ಲ. ಮೋದಿಯವರನ್ನು ಭೇಟಿಯಾಗಲುವ ತರಾತುರಿಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ತಳ್ಳಿ ವೇದಿಕೆ ಬಂದಿದ್ದರು ಎಂದು ಗಾಂಧೀನಗರ ಪೊಲೀಸ್ ವರಿಷ್ಠಾಧಿಕಾರಿ ವಿರೇಂದ್ರ ಸಿಂಗ್ ಯಾದವ್ ಅವರು ಹೇಳಿದ್ದಾರೆ. 
ಗ್ರಾಮದಲ್ಲಿ 12 ಸಾವಿನ ಜನಸಂಖ್ಯೆಯಿದ್ದರೂ ನಮಗೆ ಕುಡಿಯಲು ನೀರು, ಶಾಲೆ ಇತ್ಯಾದಿ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಮೋದಿಯವನ್ನು ಭೇಟಿಯಾಗುವ ಉದ್ದೇಶವಷ್ಟೇ ಮಹಿಳೆಗಿತ್ತು. ಹೀಗಾಗಿ ಮಹಿಳೆ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.