ಮಾಜಿ ಸ್ಪೀಕರ್ ಮೀರಾ ಕುಮಾರ್, ಪ್ರಕಾಶ್ ಅಂಬೇಡ್ಕರ್ ಕಾಂಗ್ರೆಸ್ ರಾಷ್ಟ್ರಪತಿ ಅಭ್ಯರ್ಥಿ?
ಮಾಜಿ ಸ್ಪೀಕರ್ ಮೀರಾ ಕುಮಾರ್ ಅಥವಾ ಸಂವಿಧಾನ ಶಿಲ್ಪಿ ಬಿಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಸಂಬಂಧ ಬಿಜೆಪಿಗೆ ಟಾಂಗ್ ನೀಡಲು ಮುಂದಾಗಿರುವ ಕಾಂಗ್ರೆಸ್, ಮಾಜಿ ಸ್ಪೀಕರ್ ಮೀರಾ ಕುಮಾರ್ ಅಥವಾ ಸಂವಿಧಾನ ಶಿಲ್ಪಿ ಬಿಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನಿನ್ನೆಯಷ್ಟೇ ಆಡಳಿತಾ ರೂಢ ಬಿಜೆಪಿ ಪಕ್ಷ ದಲಿತ ನಾಯಕ ರಾಮ್ ನಾಥ್ ಕೋವಿಂದ್ ಅವರನ್ನು ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿ ಆಯ್ಕೆ ಕಸರತ್ತಿಗೆ ವೇಗ ನೀಡಿದ್ದು, ಅವಿರೋಧ ಯುಪಿಎ ರಾಷ್ಟ್ರಪತಿ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ. ಮೂಲಗಳ ಪ್ರಕಾರ ಕಾಂಗ್ರೆಸ್ ಅಥವಾ ಯುಪಿಎ ಮೈತ್ರೀಕೂಟದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಮಾಜಿ ಸ್ಪೀಕರ್ ಮೀರಾ ಕುಮಾರ್ ಅಥವಾ ಪ್ರಕಾಶ್ ಅಂಬೇಡ್ಕರ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮೀರಾ ಕುಮಾರ್ ಗೆ ಬಿಜೆಡಿ. ಆಪ್ ವಿರೋಧ ಸಾಧ್ಯತೆ
ಇನ್ನು ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಸಂಬಂಧ ಕಾಂಗ್ರೆಸ್ ಕೈಗೊಂಡಿರುವ ಆಯ್ಕೆಗೆ ಬಿಜೆಡಿ ಮತ್ತು ಆಪ್ ಪಕ್ಷ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ರಾಷ್ಟ್ರಪತಿ ಆಯ್ಕೆ ವಿಚಾರ ಚರ್ಚೆ ನಡೆದಾಗಲೆಲ್ಲಾ ಈ ಎರಡೂ ಪಕ್ಷಗಳು ಕಾಂಗ್ರೆಸ್ ಅಭ್ಯರ್ಥಿಯನ್ನು ರಾಷ್ಟ್ರಪತಿ ಆಯ್ಕೆಗೆ ಪರಿಗಣಿಸುವುದನ್ನು ವಿರೋಧಿಸುತ್ತಾ ಬಂದಿದ್ದವು. ಹೀಗಾಗಿ ಮೀರಾ ಕುಮಾರ್ ಅವರಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಇನ್ನು ಪ್ರಕಾಶ್ ಅಂಬೇಡ್ಕರ್ ಅವರ ಪರವಾಗಿ ಬಿಎಸ್ ಪಿ ಬ್ಯಾಟ್ ಮಾಡುವ ಸಾಧ್ಯತೆ ಇದ್ದು, ದಲಿತ ನಾಯಕನ ಆಯ್ಕೆಗೆ ಬಿಎಸ್ ಪಿ ಬೆಂಬಲ ನೀಡಲು ಸಿದ್ಧವಿದೆ ಎಂದು ಹೇಳಲಾಗುತ್ತಿದೆ. ಅಂತೆಯೇ ಶಿವಸೇನೆ ಬೆಂಬಲ ಕೂಡ ಪ್ರಕಾಶ್ ಅಂಬೇಡ್ಕರ್ ಅವರಿಗೇ ಸಿಗುವ ಸಾಧ್ಯತೆ ಇದ್ದು, ಪ್ರಕಾಶ್ ಅಂಬೇಡ್ಕರ್ ಮಹಾರಾಷ್ಟ್ರ ಮೂಲದವರಾಗಿದ್ದು, ಮಹಾರಾಷ್ಟ್ರ ಮೂಲದ ರಾಜಕೀಯ ಪಕ್ಷಗಳು ಅವರಿಗೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚಿದೆ.
ಈ ಬಗ್ಗೆ ಚರ್ಚೆ ನಡೆಸಲು ಇದೇ ಜೂನ್ 22ರಂದು ಕಾಂಗ್ರೆಸ್ ಸಭೆ ಕರೆದಿದ್ದು, ಅಂದೇ ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ. ಇತ್ತ ಸಮಾಜವಾದಿ ಪಕ್ಷ ಕೂಡ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಕುರಿತಂತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.
ರಾಮ್ ನಾಥ್ ಕೋವಿಂದ್ ಅವರ ಪರ ಅಥವಾ ವಿರುದ್ಧ ವಿಶ್ಲೇಷಣೆ ಮಾಡುವುದಿಲ್ಲ
ಇನ್ನು ಬಿಜೆಪಿ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಕುರಿತಂತೆ ಪ್ರತಿಕ್ರಿಯೆಗೆ ಕಾಂಗ್ರೆಸ್ ನಕಾರ ವ್ಯಕ್ತಪಡಿಸಿದ್ದು, ರಾಮನಾಥ್ ಕೋವಿಂದ್ ಅವರ ಪರ ಅಥವಾ ವಿರುದ್ಧ ವಿಶ್ಲೇಷಣೆ ಮಾಡುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಕುರಿತಂತೆ ಚರ್ಚೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


