ನಿತೀಶ್ ಎಂದೂ ರಾಜಿನಾಮೆ ಕೇಳಿರಲಿಲ್ಲ, ಅವರು ಕೇಳಿದಿದ್ದರೆ ಆಗ ಆ ಬಗ್ಗೆ ಚಿಂತಿಸಿರುತ್ತಿದ್ದೆ: ತೇಜಸ್ವಿ
ಸಿಎಂ ನಿತೀಶ್ ಕುಮಾರ್ ಅವರ ವಿಶ್ವಾಸ ಮತ ಯಾಚನೆಗೂ ಬಿಹಾರ ವಿಧಾನಸಭೆಯಲ್ಲಿ ಭಾರಿ ಕೋಲಾಹಲವೇ ಎದ್ದಿದ್ದು, ನಿತೀಶ್ ವಿರುದ್ಧ ಆರ್ ಜೆಡಿ ಮುಖಂಡ ತೇಜಸ್ವೀ ಯಾದಲ್ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ.

ಪಾಟ್ನಾ: ಸಿಎಂ ನಿತೀಶ್ ಕುಮಾರ್ ಅವರ ವಿಶ್ವಾಸ ಮತ ಯಾಚನೆಗೂ ಬಿಹಾರ ವಿಧಾನಸಭೆಯಲ್ಲಿ ಭಾರಿ ಕೋಲಾಹಲವೇ ಎದ್ದಿದ್ದು, ನಿತೀಶ್ ವಿರುದ್ಧ ಆರ್ ಜೆಡಿ ಮುಖಂಡ ತೇಜಸ್ವೀ ಯಾದಲ್ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ.
ವಿಶ್ವಾಸ ಮತ ಯಾಚನೆಗೂ ಮುನ್ನ ವಿಪಕ್ಷ ನಾಯಕರಾಗಿ ಭಾಷಣ ಆರಂಭಿಸಿದ ತೇಜಸ್ವಿ ಯಾದವ್ ನೇರವಾಗಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ನಿತೀಶ್ ಕುಮಾರ್ ಅವರಿಂದ ತಮಗೆ ಮತ್ತು ತಮ್ಮ ಪಕ್ಷಕ್ಕೆ ನಂಬಿಕೆ ದ್ರೋಹವಾಗಿದೆ ಎಂದು ತೇಜಸ್ವಿ ಯಾದವ್ ಆರೋಪಿಸಿದರು. ನಿತೀಶ್ ಕುಮಾರ್ ಅವರ ನಡೆಯಿಂದ ಬಿಹಾರದ ಜನತೆ ತತ್ತರಿಸುತ್ತಿದ್ದಾರೆ. ಪ್ರಮುಖ ವಿಚಾರವೆಂದರೆ ಬಿಹಾರ ವಿಧಾನಸಭೆಯಲ್ಲಿ ಅತೀ ಹೆಚ್ಚು ಸದಸ್ಯ ಬಲವನ್ನು ಹೊಂದಿರುವುದು ಆರ್ ಜೆಡಿ. ಹೀಗಾಗಿ ಸರ್ಕಾರ ರಚನೆ ಮಾಡಲು ನಿತೀಶ್ ಕುಮಾರ್ ಅವರಿಗೆ ಯಾವುದೇ ಹಕ್ಕಿಲ್ಲ. ಅದಾವ ನೈತಿಕತೆಯ ಆಧಾರದ ಮೇಲೆ ಸರ್ಕಾರ ರಚನೆ ಮಾಡಿದ್ದಾರೋ ತಿಳಿಯುತ್ತಿಲ್ಲ. ಆದರೆ ಈ ಬಗ್ಗೆ ನಿತೀಶ್ ಕುಮಾರ್ ಅವರು ಬಿಹಾರ ಜನತೆಗೆ ಖಂಡಿತಾ ಉತ್ತರಿಸಬೇಕು.
ನಿತೀಶ್ ಕುಮಾರ್ ಅವರು ಬೇಕಿದ್ದರೆ ತಮ್ಮ ಸಂಪುಟದಿಂದ ನನ್ನನ್ನು ವಜಾಗೊಳಿಸಬಹುದಿತ್ತು. ಆ ಅಧಿಕಾರ ಅವರಿಗೆ ಇತ್ತು. ಕನಿಷ್ಠ ಪಕ್ಷ ನನ್ನ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಅವರು ಕೇಳಬಹುದಿತ್ತು. ಅವರು ಎಂದಿಗೂ ಈ ಬಗ್ಗೆ ನನ್ನೊಂದಿಗೆ ಚರ್ಚೆಯೇ ನಡೆಸಿಲ್ಲ. ಬಹುಶಃ ಅವರು ನನ್ನ ರಾಜಿನಾಮೆ ಕೇಳಿದ್ದರೆ ನಾನು ಖಂಡಿತಾ ಆ ಬಗ್ಗೆ ಚಿಂತಿಸುತ್ತಿದ್ದೆ. ನನ್ನ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿದ್ದೆ. ಆದರೆ ನಿತೀಶ್ ಕುಮಾರ್ ಅವರು ನಮಗೆ ದ್ರೋಹ ಮಾಡಿದ್ದಾರೆ. ನಾವು ಎಂದಿಗೂ ಸರ್ಕಾರದಿಂದಾಗಲಿ ಅಥವಾ ಹೊರಗಿನಿಂದಾಗಲಿ ಅವರ ಮೇಲೆ ಯಾವುದೇ ರೀತಿಯ ಪ್ರಭಾವ ಅಥವಾ ಒತ್ತಡ ಹೇರಿಲ್ಲ.
ಬಿಜೆಪಿಯ ಯೋಗಿ ಆದಿತ್ಯಾನಾಥ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧವೂ ಸಾಕಷ್ಟು ಗಂಭೀರ ಪ್ರಕರಣಗಳು ದಾಖಲಾಗಿದ್ದು, ಅವರ ರಾಜಿನಾಮೆಯನ್ನೂ ನಿತೀಶ್ ಕುಮಾರ್ ಅವರು ಕೇಳಿದ್ದಾರೆಯೇ..? ನನ್ನ ಪ್ರಕಾರ ನಿತೀಶ್ ಕುಮಾರ್ ರಾಜಿನಾಮೆ ಪ್ರಹಸನವೇ ಸಂಪೂರ್ಣ ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಎಲ್ಲವನ್ನು ಯೋಜಿಸಿಯೇ ನಿತೀಶ್ ತಮ್ಮ ಸ್ಥಾನಕ್ಕ ರಾಜಿನಾಮೆ ನೀಡಿ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ. ನಿತೀಶ್ ರಾಜಿನಾಮೆ ನೀಡಿದ ಬೆನ್ನಲ್ಲೇ ಪ್ರಧಾನಿ ಮೋದಿ ಸರಣಿ ಟ್ವೀಟ್ ಮಾಡಿ ನಿತೀಶ್ ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಇವೆಲ್ಲವನ್ನೂ ನೋಡಿದರೆ ಖಂಡಿತಾ ಇದು ಪೂರ್ವ ನಿಯೋಜಿತ ಕೃತ್ಯ ಎಂದು ಸಾಬೀತಾಗುತ್ತದೆ. ನಿತೀಶ್ ಕುಮಾರ್ ಅವರೇ ಅಂದು ಯಾರ ಸಖ್ಯ ಬೇಡ ಎಂದು ತೊರೆದು ನಮ್ಮೊಂದಿಗೆ ಕೈ ಜೋಡಿಸಿದ್ದಿರೋ ಇದೀಗ ಮತ್ತದೇ ವ್ಯಕ್ತಿಗಳ ಜೊತೆ ಕುಳಿತುಕೊಳ್ಳಲು ನಿಮಗೆ ನಾಚಿಕೆಯಾಗುವುದಿಲ್ಲವೇ... ಎಂದು ತೇಜಸ್ವಿ ಯಾದವ್ ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


