ದೇಶ

ಖಾಸಗಿತನದ ಹಕ್ಕು ಮೂಲಭೂತ ಹಕ್ಕಾಗಿಸಿ: ಕರ್ನಾಟಕ ಸೇರಿ 4 ರಾಜ್ಯಗಳು ಸುಪ್ರೀಂಗೆ ಮನವಿ

ಖಾಸಗಿತನದ ಹಕ್ಕನ್ನು ಸಂವಿಧಾನದಡಿ ಮೂಲಭೂತ ಹಕ್ಕಾಗಿ ಘೋಷಿಸುವಂತೆ ಕರ್ನಾಟಕ ಹಾಗೂ ಪಶ್ಚಿಮ ಬಂಗಾಳ....

ಖಾಸಗಿತನದ ಹಕ್ಕು ಮೂಲಭೂತ ಹಕ್ಕಾಗಿಸಿ: ಕರ್ನಾಟಕ ಸೇರಿ 4 ರಾಜ್ಯಗಳು ಸುಪ್ರೀಂಗೆ ಮನವಿ
ಸುಪ್ರೀಂ ಕೋರ್ಟ್
Published On :
ನವದೆಹಲಿ: ಖಾಸಗಿತನದ ಹಕ್ಕನ್ನು ಸಂವಿಧಾನದಡಿ ಮೂಲಭೂತ ಹಕ್ಕಾಗಿ ಘೋಷಿಸುವಂತೆ ಕರ್ನಾಟಕ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಬಿಜೆಪಿಯೇತರ ನಾಲ್ಕು ರಾಜ್ಯಗಳು ಬುಧವಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿವೆ.
ಖಾಸಗಿತನದ ಹಕ್ಕು ಮೂಲಭೂತ ಹಕ್ಕೆ ಎಂಬುದರ ಕುರಿತು ಮುಖ್ಯನ್ಯಾಯಮೂರ್ತಿ ಜೆ.ಎಸ್.ಖೆಹರ್‌ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠ ವಿಚಾರಣೆ ನಡೆಸುತ್ತಿದ್ದು, ಖಾಸಗಿತನ ಮೂಲಭೂತ ಹಕ್ಕಾಗಿ ಘೋಷಿಸುವಂತೆ ಕರ್ನಾಟಕ, ಪಶ್ಚಿಮ ಬಂಗಾಳ, ಪಂಜಾಬ್‌ ಹಾಗೂ ಪುದುಚೇರಿ ರಾಜ್ಯಗಳ ಪರವಾಗಿ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಇಂದು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. 
ತಂತ್ರಜ್ಞಾನ ಆಧುನೀಕರಣಗೊಂಡಿರುವ ಕಾಲಘಟ್ಟದಲ್ಲಿ ‘ಖಾಸಗಿ ಹಕ್ಕು’ ಕುರಿತಾಗಿ ಕೋರ್ಟ್‌ ಮತ್ತೊಮ್ಮೆ ಪರಾಮರ್ಶಿಸಬೇಕೆಂದು ನಾಲ್ಕು ರಾಜ್ಯಗಳು ಮನವಿ ಮಾಡಿವೆ. ಅಲ್ಲದೆ ಆಧಾರ್‌ ಗುರುತು ಚೀಟಿ ಮೂಲಕ ವ್ಯಕ್ತಿಯ ಬಯೋಮೆಟ್ರಿಕ್‌ ಮಾಹಿತಿ ಸೇರಿದಂತೆ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವುದು ಹಾಗೂ ಹಂಚುವುದು ಖಾಸಗಿತನದ ’ಮೂಲಭೂತ’ ಹಕ್ಕು ಉಲ್ಲಂಘಿಸಿದಂತೆ ಆಗಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕಾಗಿಸಲು ಸಾಧ್ಯವಿಲ್ಲ ಎಂಬ ವಾದವನ್ನು ಕೇಂದ್ರ ಸರ್ಕಾರ ಮುಂದುವರಿಸಿದೆ. ಸಂವಿಧಾನದಲ್ಲಿ ಖಾಸಗಿತನ ಮೂಲಭೂತ ಹಕ್ಕಾಗಿದೆಯೇ ಎಂಬುದರ ಕುರಿತು ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠ, ‘ಖಾಸಗಿತನದ ಹಕ್ಕು ಪರಿಪೂರ್ಣ ಅಲ್ಲ, ಈ ಹಕ್ಕಿನ ಮೇಲೆ ಸರ್ಕಾರ ನ್ಯಾಯಯುತ ನಿರ್ಬಂಧ ಹೇರುವುದನ್ನು ತಡೆಯಲು ಸಾಧ್ಯವಿಲ್ಲ’ ಎಂದಿತ್ತು.
ಆಧಾರ್‌ ನೋಂದಣಿಗಾಗಿ ದೇಹಕ್ಕೆ ಸಂಬಂಧಿಸಿದ ಮಾಹಿತಿಗಳನ್ನೂ ನೀಡಬೇಕಾಗುತ್ತದೆ. ಇದು ವ್ಯಕ್ತಿಯ ಖಾಸಗಿತನದ ಉಲ್ಲಂಘನೆ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿಯ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.