ದೇಶ

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಮೊದಲ ಭಾಷಣಕ್ಕೆ ಕಾಂಗ್ರೆಸ್ ಆಕ್ಷೇಪ, ಬಿಜೆಪಿ ವಿರುದ್ಧ ವಾಗ್ದಾಳಿ

ರಾಜ್ಯಸಭೆಯಲ್ಲಿ ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬುಧವಾರ ರಾಜ್ಯಸಭೆಯಲ್ಲಿ ಮಾಡಿದ ಮೊದಲ ಭಾಷಣಕ್ಕೆ ಪ್ರಮುಖ....

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಮೊದಲ ಭಾಷಣಕ್ಕೆ ಕಾಂಗ್ರೆಸ್ ಆಕ್ಷೇಪ, ಬಿಜೆಪಿ ವಿರುದ್ಧ ವಾಗ್ದಾಳಿ
ಸಂಸತ್ ಭವನ
Published On :
ನವದೆಹಲಿ: ರಾಜ್ಯಸಭೆಯಲ್ಲಿ ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬುಧವಾರ ರಾಜ್ಯಸಭೆಯಲ್ಲಿ ಮಾಡಿದ ಮೊದಲ ಭಾಷಣಕ್ಕೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಆಡಳಿತರೂಢ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ರಾಮನಾಥ್ ಕೋವಿಂದ್ ಅವರು ದೀನ್ ದಯಾಳ್ ಉಪಾಧ್ಯಾಯ ಅವರನ್ನು ಮಹಾತ್ಮ ಗಾಂಧೀಜಿ ಅವರಿಗೆ ಹೋಲಿಕೆ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಗಾಂಧೀಜಿಯವರು ದೇಶಕ್ಕಾಗಿ ಬಹಳಷ್ಟು ಶ್ರಮಿಸಿದ್ದಾರೆ. ದೀನ್ ದಯಾಳ್ ಉಪಾಧ್ಯಾಯ ಅವರನ್ನು ಅವರಿಗೆ ಹೋಲಿಕೆ ಮಾಡುವುದು ಅಗೌರವ ತೋರಿದಂತಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ನೂತನ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಮಾಜಿ ಪ್ರಧಾನಿಗಳಾದ ದಿ.ಜವಾಹರ್ ಲಾಲ್ ನೆಹರೂ ಹಾಗೂ ದಿ. ಇಂದಿರಾ ಗಾಂಧಿ ಅವರ ಹೆಸರು ಪ್ರಸ್ತಾಪಿಸಿಲ್ಲ ಎಂದಿದ್ದಾರೆ.
ಆರ್ ಎಸ್ಎಸ್ ಚಿಂತಕರಾದ ದೀನ್ ದಯಾಳ್ ಅವರನ್ನು ಬಿಜೆಪಿ ನೆನೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ರಾಷ್ಟ್ರಪತಿಗಳು ದೀನ್ ದಯಾಳ್ ಉಪಾಧ್ಯಾಯ ಅವರನ್ನು ಮಹಾತ್ಮ ಗಾಂಧಿ ಹೋಲಿಕೆ ಮಾಡುವುದು ಒಂದು ಪಕ್ಷದ ನಿಷ್ಠೆಯನ್ನು ತೋರಿಸುತ್ತದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಶರ್ಮಾ ಹೇಳಿದ್ದಾರೆ.
ಈ ವೇಳೆ ಆನಂದ್ ಶರ್ಮಾ ಅವರ ಬೆಂಬಲಕ್ಕೆ ಬಂದ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು, ಕೇಂದ್ರ ಸರ್ಕಾರ ನೆಹರೂ ಕುಟುಂಬವನ್ನು ನಿರಂತರವಾಗಿ ಅವಮಾನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಯಮ 267ರಡಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಆನಂದ್ ಶರ್ಮಾ ಅವರು, ಎನ್ ಡಿಎ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರೂ, ಇಂಧಿರಾ ಗಾಂಧಿ ಅವರ ಕೊಡುಗೆಯನ್ನು ಮರೆಮಾಚಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಪ್ರತಿಪಕ್ಷಗಳ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಈ ವಿಷಯ ಅಪ್ರಸ್ತುತವಾಗಿದ್ದು ಚರ್ಚೆಗೆ ಅವಕಾಶ ನೀಡಬಾರದು ಎಂದು ಎಂದು ರಾಜ್ಯಸಭೆ ಉಪ ಸಭಾಪತಿ ಪೆ.ಜೆ.ಕುರಿಯನ್ ಅವರಿಗೆ ಮನವಿ ಮಾಡಿದರು.
ಪ್ರಚಾರಕ್ಕಾಗಿ ಕಾಂಗ್ರೆಸ್ ಈ ವಿಷಯ ಪ್ರಸ್ತಾಪ ಮಾಡಿದೆ. ಸುದ್ದಿ ವಾಹಿನಿಗಳ ಲಾಭ ಪಡೆಯುವುದಕ್ಕಾಗಿ ಶೂನ್ಯ ವೇಳೆ ಬಳಕೆಯಾಗಬಾರದು. ನಿಲುವಳಿ ಸೂಚನೆಯನ್ನು ಕಾಂಗ್ರೆಸ್ ದುರುಪಯೋಗಪಡಿಸಿಕೊಂಡಿದೆ ಎಂದು ಜೇಟ್ಲಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸದಸ್ಯರು ನೆಹರೂ ಅವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಘೋಷಣೆ ಕೂಗಿದರೆ, ಬಿಜೆಪಿ ಸದಸ್ಯರು ಕಾಂಗ್ರೆಸ್ ರಾಷ್ಟ್ರಪತಿಗಳನ್ನು ಅವಮಾನಿಸಿದೆ ಎಂದು ತಿರುಗೇಟು ನೀಡಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.