ದೇಶ

ರಸ್ತೆಗುಂಡಿಯಿಂದ ಮಹಿಳಾ ಬೈಕರ್ ಸಾವು ಸಂಭವಿಸಿಲ್ಲ: ಮಹಾರಾಷ್ಟ್ರ ಸರ್ಕಾರ ಸ್ಪಷ್ಟನೆ

ಭಾನುವಾರ ಬೆಳಿಗ್ಗೆ ಬುಲೆಟ್‌ ಬೈಕ್‌ನಲ್ಲಿ ದೂರದ ಪ್ರಯಾಣ ಹೊರಟಿದ್ದ ಮಹಿಳೆ ರಸ್ತೆ ಗುಂಡಿಯಿಂದ ಸಾವನ್ನಪ್ಪಿಲ್ಲ ಎಂದು ಮಹರಾಷ್ಟ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ರಸ್ತೆಗುಂಡಿಯಿಂದ ಮಹಿಳಾ ಬೈಕರ್ ಸಾವು ಸಂಭವಿಸಿಲ್ಲ: ಮಹಾರಾಷ್ಟ್ರ ಸರ್ಕಾರ ಸ್ಪಷ್ಟನೆ
ಸಂಗ್ರಹ ಚಿತ್ರ
Published On :

ಮುಂಬೈ: ಭಾನುವಾರ ಬೆಳಿಗ್ಗೆ ಬುಲೆಟ್‌ ಬೈಕ್‌ನಲ್ಲಿ ದೂರದ ಪ್ರಯಾಣ ಹೊರಟಿದ್ದ ಮಹಿಳೆ ರಸ್ತೆ ಗುಂಡಿಯಿಂದ ಸಾವನ್ನಪ್ಪಿಲ್ಲ ಎಂದು ಮಹರಾಷ್ಟ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಬಾಂದ್ರಾ ನಿವಾಸಿಯಾದ ಗೃಹಿಣಿ ಜಾಗೃತಿ ಹೊಗಳೆ ಮಹಾರಾಷ್ಟ್ರದ ಜವ್ಹಾರ್‌–ದಹಣು ಹೆದ್ದಾರಿಯಲ್ಲಿ ಚಲಾಯಿಸುತ್ತಿದ್ದಾಗ ಅವರ ಬೈಕ್‌ ಗುಂಡಿಗೆ ಇಳಿದು ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿತು. ಜಾಗೃತಿ ಅವರು ರಸ್ತೆ ಮೇಲೆ  ಬೀಳುತ್ತಿದ್ದಂತೆಯೇ ಹಿಂದೆ ಬರುತ್ತಿದ್ದ ಟ್ರಕ್ ಅವರ ಮೇಲೆ ಹರಿದಿತ್ತು. ಪರಿಣಾಮ ಜಾಗೃತಿ ಸ್ಥಳದಲ್ಲೇ ಮೃತಪಟ್ಟಿದ್ದರು.

ಇದೀಗ ಅವರ ಸಾವಿಗೆ ರಸ್ತೆಗುಂಡಿಯೇ ಕಾರಣ ಎಂದು ಹಲವರು ಆರೋಪಿಸುತ್ತಿದ್ದು, ಈ ಬಗ್ಗೆ ತೀವ್ರ ಮುಜುಗರಕ್ಕೀಡಾಗಿರುವ ಮಹಾರಾಷ್ಟ್ರ ಸರ್ಕಾರ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ. ಮಹಿಳಾ ಬೈಕರ್ ಸಾವಿಗೆ ರಸ್ತೆ  ಗುಂಡಿ ಕಾರಣವಲ್ಲ ಎಂದು ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.

ಆಕೆ ಚಲಿಸುತ್ತಿದ್ದ ರಸ್ತೆ ಮಳೆಯಿಂದಾಗಿ ನೀರು ತುಂಬಿಕೊಂಡಿತ್ತು. ಅಲ್ಲದೆ ಮಣ್ಣಿನಿಂದ ಆವೃತ್ತವಾಗಿತ್ತು. ಹೀಗಾಗಿ ಜಾಗೃತಿ ಬೈಕ್ ಸ್ಕಿಡ್ ಆಗಿ ಕೆಳಗ ಬಿದ್ದಿದೆ. ಈ ವೇಳೆ ಹಿಂಬದಿಯಿಂದ ಬಂದ ಟ್ರಕ್ ಅವರ ಮೇಲೆ ಹರಿದು ಆಕೆ  ಸಾವನ್ನಪ್ಪಿದ್ದಾರೆ. ಹೀಗಾಗಿ ಆಕೆಯ ಸಾವಿಗೆ ರಸ್ತೆ ಗುಂಡಿ ಕಾರಣವಲ್ಲ. ಈ ಬಗ್ಗೆ ಸರ್ಕಾರವನ್ನು ಟೀಕಿಸುವ ಅಗತ್ಯವಿಲ್ಲ ಎಂದು ಪಾಟೀಲ್ ಹೇಳಿದರು.

ಇನ್ನು ಭಾನುವಾರ ಮಹಿಳಾ ಬೈಕರ್‌ಗಳನ್ನು ಒಳಗೊಂಡ ಬೈಕರ್ನಿ ಬೈಕರ್‌ ಕ್ಲಬ್‌ ಸದಸ್ಯರು ಮುಂಬೈನಿಂದ 115 ಕಿ.ಮೀ. ದೂರದ ದಹಣುಗೆ ಪ್ರಯಾಣ ಬೆಳೆಸಿದ್ದರು. ಜಾಗೃತಿ ಜತೆಗೆ ಇನ್ನೂ ಇಬ್ಬರು ಮಹಿಳಾ ಬೈಕರ್‌ಗಳಿದ್ದರು.  ಎಲ್ಲರೂ ಹೆಲ್ಮೆಟ್‌ ಸೇರಿದಂತೆ ಅಗತ್ಯ ಸುರಕ್ಷತಾ ಉಡುಪು ಧರಿಸಿದ್ದರು ಎನ್ನಲಾಗಿದೆ. ರಾಯಲ್‌ ಎನ್‌ಫೀಲ್ಡ್‌ನ ಥಂಡರ್‌ಬರ್ಡ್‌ 350 ಬೈಕ್‌ ಚಲಾಯಿಸುತ್ತಿದ್ದ ಜಾಗೃತಿ ರಸ್ತೆ ಗುಂಡಿಗೆ ಬೈಕ್‌ ಇಳಿಯುತ್ತಿದ್ದಂತೆ ಕೆಳಗೆ ಬಿದ್ದಿದ್ದಾರೆ.  ರಸ್ತೆಯಿಂದ ಮೇಲೇಳುವ ಮುನ್ನವೇ ಟ್ರಕ್‌ ಹರಿಯಿತು ಎಂದು ಜತೆಯಲ್ಲಿದ್ದ ಬೈಕರ್‌ಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೂರು ವರ್ಷಗಳಿಂದ ಬೈಕ್‌ ರೈಡ್‌ ಮಾಡುತ್ತಿದ್ದ ಅವರು ಕಳೆದ ವರ್ಷ ಲಡಾಕ್‌ನ ಖರ್ದುಂಗ್‌ ಲಾ ವರೆಗೂ ಪ್ರಯಾಣ ಬೆಳೆಸಿದ್ದರು. ಬೈಕ್‌ ರೈಡ್‌ನೊಂದಿಗೆ ಟ್ರೆಕ್ಕಿಂಗ್‌ ಹಾಗೂ ಮ್ಯಾರಥಾನ್‌ ಓಟದಲ್ಲಿಯೂ ಆಸಕ್ತಿ ಹೊಂದಿದ್ದ  ಜಾಗೃತಿ ಪತಿ ಹಾಗೂ ಮಗನನ್ನು ಅಗಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.