ಸಂಸತ್ ನನ್ನ ದೇಗುಲ, ಜನರ ಸೇವೆಯೇ ನನ್ನ ಅಭಿರುಚಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿ
ಬಹುಸಾಂಸ್ಕೃತಿಕತೆಯೇ ದೇಶದ ಆತ್ಮವಾಗಿದ್ದು, ಸಂಸತ್ ನನ್ನ ದೇಗುಲ, ಜನರ ಸೇವೆಯೇ ನನ್ನ ಅಭಿರುಚಿ ಎಂದು ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೋಮವಾರ ಹೇಳಿದ್ದಾರೆ.

ನವದೆಹಲಿ: ಬಹುಸಾಂಸ್ಕೃತಿಕತೆಯೇ ದೇಶದ ಆತ್ಮವಾಗಿದ್ದು, ಸಂಸತ್ ನನ್ನ ದೇಗುಲ, ಜನರ ಸೇವೆಯೇ ನನ್ನ ಅಭಿರುಚಿ ಎಂದು ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೋಮವಾರ ಹೇಳಿದ್ದಾರೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರಾವಧಿ ಇಂದು ಕೊನೆಗೊಂಡಿದ್ದು, ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ಭವನದಲ್ಲಿ ಅವರು ಇಂದು ತಮ್ಮ ವಿದಾಯದ ಭಾಷಣ ಮಾಡಿದರು. ಈ ವೇಳೆ "ದೇಶದ ಸಂಸತ್ ನನ್ನ ಪಾಲಿನ ದೇಗುಲವಾಗಿದ್ದು, ಜನರ ಸೇವೆಯೇ ನನ್ನ ಅಭಿರುಚಿಯಾಗಿತ್ತು ಎಂದು ಹೇಳಿದರು. ಇದೇ ವೇಳೆ ತಮ್ಮನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದ ಶಾಸಕರು, ಸಂಸದರಿಗೆ ಧನ್ಯವಾದ ಅರ್ಪಿಸಿದ ಪ್ರಣಬ್ ಮುಖರ್ಜಿ ಅವರು, ನಾನು ಈ ದೇಶಕ್ಕೆ ನೀಡಿದ್ದಕ್ಕಿಂತ ಹೆಚ್ಚಿನದ್ದನ್ನು ನಾನು ಪಡೆದುಕೊಂಡಿದ್ದೇನೆ. ಅದಕ್ಕಾಗಿ ನಾನು ದೇಶದ ಜನತೆಗೆ ಸದಾ ಋಣಿಯಾಗಿರುತ್ತೇನೆ ಎಂದು ಹೇಳಿದರು.
"ನಾನು ನಾಳೆ ನಿಮ್ಮೊಂದಿಗೆ ಮಾತನಾಡುವಾಗ ಒಬ್ಬ ಸಾಮಾನ್ಯ ಪ್ರಜೆಯಾಗಿಯೇ ಮಾತನಾಡಲಿದ್ದೇನೆ. ನಿಮ್ಮಂತೆಯೇ ನಾನು ಒಬ್ಬ ಜನ ಸಾಮಾನ್ಯ. ಈ ಅತ್ಯುನ್ನತ ಗೌರವ ನೀಡಿರುವುದಕ್ಕೆ ಜನರಿಗೆ ಕೃತಜ್ಞತೆ ಅರ್ಪಿಸುವುದಕ್ಕೆ ನನಗೆ ಪದಗಳೇ ಸಿಗುತ್ತಿಲ್ಲ. ಆದಾಗ್ಯೂ, ಒಬ್ಬ ಉತ್ತಮ ಪ್ರಜೆಯಾಗಿರುವುದೇ ಅತ್ಯುನ್ನತ ಗೌರವ ಎಂದು ನಾನು ಭಾವಿಸಿದ್ದೇನೆ. ನಾನು ಈ ದೇಶಕ್ಕೆ ನೀಡಿದ್ದಕ್ಕಿಂತ ಹೆಚ್ಚಿನದ್ದನ್ನು ನಾನು ಪಡೆದುಕೊಂಡಿದ್ದೇನೆ. ಅದಕ್ಕಾಗಿ ನಾನು ದೇಶದ ಜನತೆಗೆ ಸದಾ ಋಣಿಯಾಗಿರುತ್ತೇನೆ. ನಾನು ನನ್ನ ಕರ್ತವ್ಯವನ್ನು ಹೇಗೆ ನಿರ್ವಹಿಸಿದೆ ಎಂಬುದರ ಬಗ್ಗೆ ಜನರೇ ತೀರ್ಮಾನಿಸಲಿದ್ದಾರೆ. ನಂಬಿಕೆ ಮತ್ತು ಸಂಸ್ಕೃತಿ ಅದೇ ನಮ್ಮ ದೇಶವನ್ನು ಶ್ರೇಷ್ಠವಾಗಿರಿಸಿದೆ".
"ಸಂಸತ್ನಲ್ಲಿ ನನ್ನ ಅಧಿಕಾರಾವಧಿಯಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಭಾರತದ ಸಂಸತ್ ನನ್ನ ದೇಗುಲ, ಜನರ ಸೇವೆಯೇ ನನ್ನ ಅಭಿರುಚಿಯಾಗಿದೆ. ನಮ್ಮ ದೇಶದ ನೀತಿಗಳು ದೇಶದಲ್ಲಿರುವ ಕಡು ಬಡವರಿಗೂ ತಲುಪಿ ಅವರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಂತಿರಬೇಕು. ಆರ್ಥಿಕ ಸುದೃಢತೆಯೂ ಪ್ರಧಾನವಾದುದು. ದೇಶದ ಅಭಿವೃದ್ಧಿಗಾಗಿ ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ನಾನೂ ಈ ದೇಶದ ಅಂಗ ಎಂಬ ಅರಿವು ಇರಬೇಕು. ಬಡತನ ನಿರ್ಮೂಲನೆಯಿಂದ ಸಂತಸ ಹೆಚ್ಚಾಗುತ್ತದೆ, ಎಲ್ಲರ ಅಭಿವೃದ್ಧಿಯೇ ಮುಖ್ಯ ಉದ್ದೇಶವಾಗಬೇಕು" ಎಂದು ಪ್ರಣಬ್ ಮುಖರ್ಜಿ ಹೇಳಿದರು.
ಅಂತೆಯೇ "ಇಂದು ನಾವು ದೇಶದಲ್ಲಿ ಅತೀ ಹೆಚ್ಚು ಹಿಂಸಾಚಾರಗಳನ್ನು ಕಾಣುತ್ತಿದ್ದೇವೆ. ನಮ್ಮ ಸಮಾಜ ಶಾರೀರಿಕ ಮತ್ತು ಮೌಖಿಕ ಹಿಂಸಾಚಾರಗಳಲ್ಲಿ ತೊಡಗದಂತೆ ನಾವು ನೋಡಿಕೊಳ್ಳಬೇಕು. ನಾವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಉನ್ನತ ಮಟ್ಟಕ್ಕೇರಿಸಬೇಕು. ನಮ್ಮ ಶೈಕ್ಷಣಿಕ ವ್ಯವಸ್ಥೆ ನಮ್ಮನ್ನು ಸುವರ್ಣ ಯುಗಕ್ಕೆ ಕೊಂಡೊಯ್ಯುತ್ತದೆ. ಸೃಜನಾತ್ಮಕ ಆಲೋಚನೆ, ಹೊಸ ಕಲ್ಪನೆ, ವೈಜ್ಞಾನಿಕ ಶೋಧನೆಗಳಿಗೆ ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಉತ್ತೇಜನ ನೀಡಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದರು.
ನೂತನ ರಾಷ್ಟ್ರಪತಿಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಣಬ್ ಮುಖರ್ಜಿ
ಇದೇ ವೇಳೆ ನೂತನ ರಾಷ್ಟ್ರಪತಿಗಳಾಗಿ ಆಯ್ಕೆಯಾಗಿರುವ ರಾಮನಾಥ ಕೋವಿಂದ್ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಭಿನಂದನೆಗಳನ್ನು ಸಲ್ಲಿಸಿದರು.
ಇನ್ನು ರಾಷ್ಟ್ರಪತಿ ಸ್ಥಾನದಿಂದ ನಿರ್ಗಮಿಸಿದ ಪ್ರಣಬ್ ಮುಖರ್ಜಿ ಅವರು ಇನ್ನು ಮುಂದೆ ರೈಸಿನಾ ಹಿಲ್ನಿಂದ ಲುಟೇನಿಯಸ್ ರಸ್ತೆಯ 10ನೇ ರಾಜಾಜಿ ಮಾರ್ಗ ಬಂಗಲೆಗೆ ಶಿಫ್ಟ್ ಆಗಲಿದ್ದಾರೆ. ಈ ನಡುವೆ ನಾಳೆ ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಪ್ರಮಾಣವಚನ ಸ್ವೀಕರಿಸಲಿದ್ದು, ದೆಹಲಿಯ ರೈಸಿನಾ ಹಿಲ್ನಲ್ಲಿ ಅದಕ್ಕಾಗಿ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


