ಟಿಬೆಟಿಯನ್ ಧರ್ಮಗುರು ದಲೈಲಾಮ ಭಾರತ ಭೇಟಿಯೇ ಚೀನಾ ಕ್ಯಾತೆಗೆ ಕಾರಣ?
ಪ್ರಸ್ತುತ ಭಾರತ ಮತ್ತು ಚೀನಾ ದೇಶಗಳ ನಡುವೆ ಎದುರಾಗಿರುವ ಗಡಿ ಕ್ಯಾತೆಗೆ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರ ಭಾರತ ಭೇಟಿಯೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ನವದೆಹಲಿ: ಪ್ರಸ್ತುತ ಭಾರತ ಮತ್ತು ಚೀನಾ ದೇಶಗಳ ನಡುವೆ ಎದುರಾಗಿರುವ ಗಡಿ ಕ್ಯಾತೆಗೆ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರ ಭಾರತ ಭೇಟಿಯೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಈ ಹಿಂದೆ ದಲೈಲಾಮಾ ಅವರ ಭಾರತ ಭೇಟಿ ವಿಚಾರವಾಗಿ ಭಾರತದ ವಿರುದ್ಧ ಕೋಪಗೊಂಡಿದ್ದ ಚೀನಾ ಡೊಕ್ಲಾಮ್ ಸೆಕ್ಟರ್ ನಲ್ಲಿ ಅಕ್ರಮ ಪ್ರವೇಶ ಮಾಡುವ ಮೂಲಕ ಭಾರತವನ್ನು ಪ್ರಚೋದಿಸುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಭಾರತ–ಚೀನಾ ಎಲ್‌ಎಸಿ ಸಮೀಪದ ತವಾಂಗ್‌ಗೆ ಭೇಟಿ ನೀಡಲು ದಲೈಲಾಮಾ ಅವರಿಗೆ ಭಾರತ ಸರ್ಕಾರ ಅವಕಾಶ ಮಾಡಿ ಕೊಟ್ಟಿತ್ತು. ಇದು ಚೀನಾದ ಆಕ್ರೋಶಕ್ಕೆ ಕಾರಣವಾಗಿತ್ತು. ಅಂತೆಯೇ ಪ್ರಸ್ತುತ ಹ್ಯಾಮ್ ಬರ್ಗ್ ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ಪ್ರಧಾನಿ ಮೋದಿ ಭೇಟಿ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಭಾರತದ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದೆ.
ಆದರೆ ಚೀನಾದ ಒತ್ತಡಕ್ಕೆ ಅದರದೇ ಧಾಟಿಯಲ್ಲಿ ತಿರುಗೇಟು ನೀಡಿರುವ ಭಾರತ, ಚೀನಾದ ವಿರೋಧದ ಹೊರತಾಗಿಯೂ ಇಂಡೋ-ಚೀನಾ ಗಡಿ ನಿಯಂತ್ರಣ ರೇಖೆ ಎಲ್ಎಸಿ ಲಡಾಖ್ ನಲ್ಲಿ ಟಿಬೆಟಿಯನ್ನರ ಪ್ರಾರ್ಥನೆಗೆ ಅವಕಾಶ ನೀಡಿದೆ. ಗುರುವಾರ ಟಿಬೆಟ್ ಧರ್ಮಗುರು ದಲೈಲಾಮಾ ಅವರ ಜನುಮ ದಿನವಾಗಿದ್ದು, ಟಿಬೆಟಿಯನ್ನರು ಈ ದಿನವನ್ನು ಅತ್ಯಂತ ಪವಿತ್ರ ದಿನವೆಂದು ಆಚರಣೆ ಮಾಡುತ್ತಾರೆ. ಹೀಗಾಗಿ ಟಿಬೆಟ್ ಸ್ವತಂತ್ರ್ಯ ಅಧ್ಯಕ್ಷ ಲಾಬ್‌ಸಾಂಗ್ ಸಾಂಗೇ ನೇತೃತ್ವದಲ್ಲಿ ಲಡಾಖ್ ನ ಪಾಂಗ್ ಗಾಂಗ್ ಸರೋವರ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ಭಾರತ ಅವಕಾಶ ಮಾಡಿಕೊಟ್ಟಿದೆ.
ಪಾಂಗ್ ಗಾಂಗ್ ಸರೋವರದ ದಡದಲ್ಲಿ ಲಾಬ್‌ಸಾಂಗ್ ಸಾಂಗೇ ನೇತೃತ್ವದಲ್ಲಿ ಸಾವಿರಾರು ಬೌದ್ಧ ಧರ್ಮೀಯರು ಪ್ರಾರ್ಥನೆ ಮಾಡಿದ್ದಾರೆ. ಈ ಪ್ರದೇಶ ಭಾರತ ಮತ್ತು ಚೀನಾ ನಡುವಿನ ವಿವಾದಿತ ಪ್ರದೇಶವಾಗಿದ್ದು, ಈ ಸರೋವರ ಭಾರತ–ಚೀನಾ ನಡುವಣ ನೈಜ ನಿಯಂತ್ರಣ ರೇಖೆಯಲ್ಲಿಯೇ (ಎಲ್‌ಎಸಿ) ಇದೆ.
ಎಲ್‌ಎಸಿ ಬಗ್ಗೆಯೇ ಭಾರತ ಮತ್ತು ಚೀನಾ ನಡುವೆ ವಿವಾದ ಇದ್ದು, ಸರೋವರದ ಪೂರ್ವದ ಕೊನೆಗೆ ಟಿಬೆಟ್ ಇದೆ. ಸರೋವರದ ಕೆಲವು ಭಾಗಗಳನ್ನು ಚೀನಾ ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿದೆ ಎಂಬುದು ಭಾರತದ ವಾದ. 1962ರ ಭಾರತ–ಚೀನಾ ಯುದ್ಧದ ಸಂದರ್ಭದಲ್ಲಿ ಈ ಸರೋವರದ ದಡದಲ್ಲಿಯೂ ಕಾದಾಟ ನಡೆದಿತ್ತು. ಈ ಸರೋವರದಲ್ಲಿ ದೋಣಿಯಲ್ಲಿ ಬರುವ ಚೀನಾ ಸೈನಿಕರು ಭಾರತದ ವಶದಲ್ಲಿರುವ ಪ್ರದೇಶಕ್ಕೂ ಬರುತ್ತಾರೆ. ಇದು ಆಗಾಗ ಸಂಘರ್ಷಕ್ಕೂ ಕಾರಣವಾಗುತ್ತಿದೆ. ಲಡಾಖ್‌ನಲ್ಲಿ 38 ಸಾವಿರ ಚ. ಕಿ.ಮೀ ಪ್ರದೇಶವನ್ನು ಚೀನಾ ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿದೆ ಎಂದು ಭಾರತ ಆರೋಪಿಸುತ್ತಿದೆ.
ಇನ್ನು ಪಾಂಗ್ ಗಾಂಗ್ ಸರೋವರಕ್ಕೆ ಸಾಂಗೇ ಅವರ ಭೇಟಿ ಪ್ರಕರಣ ಭಾರತ ಮತ್ತು ಚೀನಾ ನಡುವಿನ ಸಂಘರ್ಷವನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


