ಜಿಎಸ್ ಟಿ ಆಯ್ತು, ಈಗ ರಾಜಕೀಯ ಪಕ್ಷಗಳ ದೇಣಿಗೆ ಮೇಲೆ ಕೇಂದ್ರದ ಕಣ್ಣು!
ಜಿಎಸ್ ಟಿ ಜಾರಿಯಾದ ಬೆನ್ನಲ್ಲೇ ಇದೀಗ ರಾಜಕೀಯ ಪಕ್ಷಗಳ ದೇಣಿಗೆ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ, ದೇಣಿಗೆ ಸಂಗ್ರಹ ವ್ಯವಸ್ಥೆ ಶುದ್ಧೀಕರಿಸಲು ಮಹತ್ವದ ಕ್ರಮ ಕೈಗೊಳ್ಳುವುದಾಗಿ ಘೋಷಣೆ ಮಾಡಿದೆ.

ನವದೆಹಲಿ: ಜಿಎಸ್ ಟಿ ಜಾರಿಯಾದ ಬೆನ್ನಲ್ಲೇ ಇದೀಗ ರಾಜಕೀಯ ಪಕ್ಷಗಳ ದೇಣಿಗೆ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ, ದೇಣಿಗೆ ಸಂಗ್ರಹ ವ್ಯವಸ್ಥೆ ಶುದ್ಧೀಕರಿಸಲು ಮಹತ್ವದ ಕ್ರಮ ಕೈಗೊಳ್ಳುವುದಾಗಿ ಘೋಷಣೆ ಮಾಡಿದೆ.
ಈ ಬಗ್ಗೆ ಸ್ವತಃ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಕೇಂದ್ರ ಸರ್ಕಾರ ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹ ವ್ಯವಸ್ಥೆ ಕುರಿತಂತೆ ಕೆಲ ನಿರ್ಣಯಗಳನ್ನು ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಅಂದುಕೊಂಡಂತೆ ಜಿಎಸ್ ಟಿ ಕಾಯ್ದೆ ಜಾರಿಗೆ ತರಲಾಗಿದ್ದು, ಇದೀಗ ರಾಜಕೀಯ ಪಕ್ಷಗಳಲ್ಲಿನ ದೇಣಿಗೆ ಸಂಗ್ರಹ ವ್ಯವಸ್ಥೆಯನ್ನು ಶುದ್ಧೀಕರಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆಯಲ್ಲಿ ತೊಡಗಿದೆ. ಈ ಬಗ್ಗೆ ಶೀಘ್ರದಲ್ಲೇ ಕೆಲ ಮಹತ್ವದ ನಿರ್ಣಯಗಳನ್ನು ಪ್ರಕಟಿಸುತ್ತೇವೆ ಎಂದು ಜೇಟ್ಲಿ ಹೇಳಿದ್ದಾರೆ.
ಕಳೆದ 70 ವರ್ಷಗಳಿಂದಲೂ ಜಾರಿಯಲ್ಲಿರುವ ರಾಜಕೀಯ ದೇಣಿಗೆ ಸಂಗ್ರಹ ವ್ಯವಸ್ಥೆಯಿಂದಾಗಿ ವಿಶ್ವದ ಅತ್ಯಂತ ದೊಡ್ಡ ಪ್ರಜಾ ಪ್ರಭುತ್ವ ದೇಶವಾಗಿರುವ ಭಾರತಕ್ಕೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ದೇಣಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಸುಧಾರಣೆ ತರಲು ನಿರ್ಧರಿಸಿದ್ದಾರೆ. ಇನ್ನು ಕೇಂದ್ರ ಸರ್ಕಾರ ಈ ಕಾರ್ಯಕ್ಕೆ ಮೊದಲ ಪ್ರಾಶಸ್ತ್ಯ ನೀಡಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ಈ ಹಿಂದೆ ಜೇಟ್ಲಿ ಮಂಡಿಸಿದ ಬಜೆಟ್ ಮಂಡನೆ ವೇಳೆಯಲ್ಲೂ ಕೂಡ ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹ ಕುರಿತಂತೆ ಜೇಟ್ಲಿ ಹಲವು ಸುಧಾರಣಾ ಕ್ರಮಗಳನ್ನು ಮಂಡಿಸಿದ್ದರು. ಈ ಪೈಕಿ 5 ಸಾವಿರಕ್ಕೂ ಅಧಿಕ ಮೊತ್ತದ ಹಣವನ್ನು ದೇಣಿಗೆ ನೀಡ ಬಯಸುವವರು ಕ್ಯಾಶ್ ಲೆಸ್ ಅಥವಾ ಡಿಜಿಟಲ್ ಪಾವತಿ ಮೂಲಕ, ಇಲ್ಲವೇ ಚೆಕ್ ಅಥವಾ ಡಿಡಿ ಮೂಲಕ ನೀಡಬೇಕು ಎಂಬ ಮಹತ್ವದ ನಿರ್ಧಾರ ಕೈಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


