ಜಲ್ಲಿಕಟ್ಟು ವಿವಾದ: ತಮಿಳುನಾಡು ಪೊಲೀಸರ ಕ್ರಮ ಸ್ವಾಗತಿಸಿದ ಸುಬ್ರಮಣಿಯನ್ ಸ್ವಾಮಿ
ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ಬಳಿಕವೂ ತಮಿಳುನಾಡಿನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ ಹಿನ್ನಲೆಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ತೆಗೆದುಕೊಂಡಿರುವ ಕ್ರಮವನ್ನು ಸುಬ್ರಮಣಿಯನ್ ಸ್ವಾಮಿಯವರು...

ನವದೆಹಲಿ: ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ಬಳಿಕವೂ ತಮಿಳುನಾಡಿನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ ಹಿನ್ನಲೆಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ತೆಗೆದುಕೊಂಡಿರುವ ಕ್ರಮವನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಸೋಮವಾರ ಸ್ವಾಗತಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ತಮಿಳುನಾಡು ಜನತೆಯ ಆಗ್ರಹವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡ ಬಳಿಕವೂ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆದರೆ ಅದು ನಿಜಕ್ಕೂ ಅರ್ಥಹೀನ. ಈ ಹಿನ್ನಲೆಯಲ್ಲಿ ಪೊಲೀಸರು ಕೈಗೊಂಡಿರುವ ಕ್ರಮವನ್ನು ನಾನು ಸ್ವಾಗತಿಸುತ್ತೇನೆಂದು ಹೇಳಿದ್ದಾರೆ.
ಜಲ್ಲಿಕಟ್ಟು ಕ್ರೀಡೆ ಕಾನೂನು ಬದ್ಧವಾಗಿದ್ದು, ಇಂದು ನಡೆದ ತಮಿಳುನಾಡಿನ ವಿಧಾನಮಂಡಲ ಅಧಿವೇಶನವದಲ್ಲಿ ಇದಕ್ಕೆ ಅನುಮೋದನೆಯನ್ನು ಪಡೆದುಕೊಳ್ಳಲಾಗಿದೆ. ಜನತೆಯ ಆಗ್ರಹವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ವೀಕರಿಸಿದ್ದು, ಅದಕ್ಕೆ ಸ್ಪಂದನೆಯನ್ನೂ ನೀಡಿದೆ. ಹೀಗಿರುವಾಗ ಮತ್ತೆ ಯಾವ ಕಾರಣಕ್ಕೆ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಪ್ರತಿಭಟನೆಯನ್ನು ಆಯೋಜಿಸಿದ್ದ ಪ್ರತಿಷ್ಠಿತ ತಮಿಳು ಗಾಯಕರೇ ಇದೀಗ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಆದರೆ, ತಮಿಳುನಾಡಿನಲ್ಲಿ ಈಗಲೂ ಪ್ರತಿಭಟನೆ ನಡೆಸುತ್ತಿದ್ದು, ಇದು ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆ ಹೆಸರಿನಲ್ಲಿ ಕೆಲವರು ದೇಶ ವಿರೋಧಿ ಚಟುವಟಿಕೆಗಲನ್ನು ನಡೆಸುತ್ತಿದ್ದಾರೆಂದು ಹೇಳಿದ್ದಾರೆ.
ಇದೇ ವೇಳೆ ಜಲ್ಲಿಕಟ್ಟು ಕ್ರೀಡೆಗೆ ಬೆಂಬಲ ವ್ಯಕ್ತಪಡಿಸಿರುವ ಅವರು, ಕ್ರೀಡೆಯನ್ನು ಈ ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದು, ಎಂದಿಗೂ ಗೂಳಿಗಳು ಸಾವನ್ನಪ್ಪಿಲ್ಲ. ಇದರಲ್ಲಿ ಪ್ರಾಣಿ ಹಿಂಸೆಯೆಂಬುದು ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಜಲ್ಲಿಕಟ್ಟು ಕ್ರೀಡೆಯನ್ನು ಪ್ರಾಣಿಹಿಂಸೆ ಎಂದು ಹೇಳುವುದಾದರೆ, ಹಲಾಲ್ ಮಾಂಸವನ್ನು ನಿಷೇಧಿಸಬೇಕು.'ಪೆಟಾ'ದವರು ವಿದೇಶಿಯರಾಗಿದ್ದು, ಅವರಿಗೆ ನಮ್ಮ ಸಂಪ್ರದಾಯ, ಆಚಾರ-ವಿಚಾರಗಳು ಅರ್ಥವಾಗುವುದಿಲ್ಲ. ಗೂಳಿಗಳಿಗೆ ಹಿಂಸೆಯಾಗುವುದೇ ಆದರೆ, ಆದು ನನಗೆ ಅರ್ಥವಾಗುತ್ತಿತ್ತು. ಆದರೆ, ಈ ಕ್ರೀಡೆಯಲ್ಲಿ ಅಂತಹ ಯಾವುದೇ ವಿಷಯಗಳಿಲ್ಲ. ನಿಜ ಹೇಳಬೇಕೆಂದರೆ ಈ ಕ್ರೀಡೆ ದೇಸೀ ಹಸು ಹಾಗೂ ಗೂಳಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


