ಬಿಎಸ್'ಪಿ ಇದೀಗ 'ಬೆಹನ್'ಜೀ ಸಂಪತ್ತಿನ ಪಕ್ಷ': ಪ್ರಧಾನಿ ಮೋದಿ
ಬಹುಜನ ಸಮಾಜ ಪಕ್ಷದ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಾಗ್ದಾಳಿ ನಡೆಸಿದ್ದು, ಬಿಎಸ್'ಪಿ ಇದೀಗ ಬೆಹನ್'ಜೀ ಸಂಪತ್ತಿನ ಪಕ್ಷವಾಗಿದೆ ಎಂದು ಸೋಮವಾರ ಹೇಳಿದ್ದಾರೆ...

ಒರಾಯ್: ಬಹುಜನ ಸಮಾಜ ಪಕ್ಷದ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಾಗ್ದಾಳಿ ನಡೆಸಿದ್ದು, ಬಿಎಸ್'ಪಿ ಇದೀಗ ಬೆಹನ್'ಜೀ ಸಂಪತ್ತಿನ ಪಕ್ಷವಾಗಿದೆ ಎಂದು ಸೋಮವಾರ ಹೇಳಿದ್ದಾರೆ.
ಅಲಹಾಬಾದ್ ಒರಾಯ್ ನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯನ್ನುದ್ದೇಶಿ ಮಾತನಾಡಿರುವ ಅವರು, ಹಲವು ವಿಚಾರಗಳ ಸಂಬಂಧ ಒಬ್ಬರ ಮೇಲೊಬ್ಬರು ಕೆಸರೆರಚಾಟ ಮಾಡಿಕೊಳ್ಳುತ್ತಿದ್ದ ಬಿಎಸ್'ಪಿ ಹಾಗೂ ಸಮಾಜವಾದಿ ಪಕ್ಷ ಇದೀಗ ಕೇಂದ್ರದ ನೋಟು ನಿಷೇಧ ನಿರ್ಧಾರ ಕುರಿತಂತೆ ಒಟ್ಟಾಗಿ ವಿರೋಧ ವ್ಯಕ್ತಪಡಿಸಲು ಮುಂದಾಗಿದೆ. ಬಿಎಸ್ ಪಿ ಪಕ್ಷದ ಸ್ವರೂಪ ಇಂದು ಬದಲಾಗಿದ್ದು, ಬಿಎಸ್'ಪಿ ಇದೀಗ ಬೆಹನ್'ಜೀ ಸಂಪತ್ತಿನ ಪಕ್ಷವಾಗಿದೆ. ನೋಟು ನಿಷೇಧದ ಬಳಿಕ ಮಾಯಾವತಿಯವರು ನ್ಯಾಯಯುತವಲ್ಲದೆ ಆಸ್ತಿಯನ್ನು ಹೆಚ್ಚಿನ ಮಟ್ಟದಲ್ಲಿ ಸಂಪಾದಿಸಿದ್ದಾರೆಂದು ಆರೋಪಿಸಿದ್ದಾರೆ.
ಸಮಾಜವಾದಿ ಹಾಗೂ ಬಹಜನ ಸಮಾಜ ಪಕ್ಷಗಳು ಪ್ರತಿಸ್ಪರ್ಧಿಗಳಲ್ಲವೇ?...ರೂ.500 ಹಾಗೂ 1,000 ಮುಖಬೆಲೆಯ ದುಬಾರಿ ನೋಟುಗಳ ಮೇಲೆ ಕೇಂದ್ರ ನಿಷೇಧ ಹೇರಿದ ಬಳಿಕ ಹಾಗೂ ಕಾಳಧನಿಕರ ದಾಖಲೆಗಳನ್ನು ಕೇಳಿದ ಬಳಿಕ ವಿರೋಧ ಪಕ್ಷಗಳು ಒಟ್ಟಾಗಿ ದನಿ ಎತ್ತಿದ್ದವು. ಇದು ನಿಜಕ್ಕೂ ನನಗೆ ಆಶ್ಚರ್ಯವನ್ನುಂಟು ಮಾಡಿತ್ತು.
ಈ ಹಿಂದೆ ಹೇಳಿಕೆ ನೀಡಿದ್ದ ಮಾಯಾವತಿಯವರು ಇನ್ನು ಯಾವುದೇ ಯೋಜನೆಗಳಿಲ್ಲ ಎಂದು ಹೇಳಿದ್ದರು. ಯೋಜನೆ ರೂಪಿಸುವುದು ನೀವೇ... ಇಲ್ಲವೇ ಸರ್ಕಾರವೇ...? ಎಂಬ ಪ್ರಶ್ನೆಯನ್ನು ಸಹೋದರಿಗೆ ಈ ಸಂದರ್ಭದಲ್ಲಿ ಕೇಳಲು ಇಚ್ಛಿಸುತ್ತೇನೆ. ಮಾಯಾವತಿಯವರು ನನಗೆ ಒಂದು ವಾರಗಳ ಕಾಲ ಕಾಲಾವಕಾಶವನ್ನು ನೀಡುತ್ತೇನೆಂದು ಹೇಳಿದ್ದರು. ಆ ಕೆಲಸವನ್ನು ನಾನು ಮಾಡಿ ಮುಗಿಸಿದ್ದೆ. ಲೂಟಿ ಮಾಡಿದವರು ಅಂತ್ಯ ಕಾಣುವಂತೆ ಮಾಡಿದೆ. ಲೂಟಿ ಮಾಡಿದ ಹಣ ಬ್ಯಾಂಕ್ ಗಳಿಗೆ ಬರಲಿಲ್ಲ. ನೋಟು ನಿಷೇಧ ನಿರ್ಧಾರದೊಂದಿಗೆ ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿಗಳಿಗೆ ಸಮಸ್ಯೆಯಿದೆ. ಏಕೆಂದರೆ, ಸರ್ಕಾರ ಇದ್ದಕ್ಕಿದ್ದಂತೆ ನಿರ್ಧಾರ ಕೈಗೊಂಡಿದ್ದರಿಗೆ ಅವರಿಗೆ ತಯಾರಾಗಲು ಸಮಯಾವಕಾಶ ಸಿಗಲಿಲ್ಲ.
ತಮ್ಮ ಸಹೋದರರ ಖಾತೆ ಬಗ್ಗೆ ಮಾತನಾಡಲಾಗುತ್ತಿದೆ ಎಂಬುದು ಮಾಯಾವತಿಯವರ ಪ್ರಶ್ನೆಯಾಗಿದೆ. ಚುನಾವಣೆಯಿರುವುದರಿಂದ ಬಿಜೆಪಿ ತಂತ್ರ ರೂಪಿಸುತ್ತಿದೆ ಎಂದು ಹೇಳುತ್ತಿದ್ದಾರೆ. ಬಿಜೆಪಿಯವರು ತಂತ್ರ ರೂಪಿಸುತ್ತಿಲ್ಲ. ಎಲ್ಲವೂ ನೀವೇ ಮಾಡಿಕೊಂಡದ್ದು. ನೋಟು ನಿಷೇಧ ಬಳಿಕ ರೂ. 100 ಕೋಟಿ ಹಣವನ್ನು ಜಮಾ ಮಾಡಿದ್ದೀರಿ. ಬಿಎಸ್ ಪಿ ಬಹುಜನ ಸಮಾಜ ಪಕ್ಷವಲ್ಲದೆ, ಬೆಹನ್'ಜೀ ಸಂಪತ್ತು ಪಕ್ಷವಾಗಿ ಬದಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಉತ್ತರಪ್ರದೇಶ ಜನತೆಗೆ ಅಭಿವೃದ್ಧಿ ಭರವಸೆಗಳನ್ನು ನೀಡಿರುವ ಅವರು, ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದರೆ, ರಾಜ್ಯವನ್ನು ಉನ್ನತಮಟ್ಟದಲ್ಲಿ ಅಭಿವೃದ್ಧಿ ಪಡಿಸುತ್ತೇವೆ. ಎಸ್ ಹಾಗೂ ಬಿಎಸ್ ಪಿ ಪಕ್ಷಗಳನ್ನು ಬದಿಗೆ ಒತ್ತಿ ರಾಜ್ಯ ಅಭಿವೃದ್ಧಿಯಾಗಬೇಕೋ ಇಲ್ಲವೋ ಎಂಬುದನ್ನು ನಿರ್ಧರಿಸುವುದು ಇದೀಗ ಜನರ ಕೈಯಲ್ಲಿದೆ.
ಇಡೀ ದೇಶದಲ್ಲಿರುವ ರಾಜ್ಯಗಳನ್ನು ಗಮನಿಸುವುದಾದರೆ, ಉತ್ತರಪ್ರದೇಶ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬಿಎಸ್ ಪಿ, ಕಾಂಗ್ರೆಸ್ ಹಾಗೂ ಎಸ್ ಪಿ ಪಕ್ಷಗಳ ಸಚಿವರು ಉತ್ತರಪ್ರದೇಶವನ್ನು ನಾಶಪಡಿಸುತ್ತಿದ್ದಾರೆ. ಇದರ ಪರಿಣಾಮ ಹೆಚ್ಚಾಗಿ ಬುಂದೇಲ್ಖಂಡ ಎದುರಿಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ವತಂತ್ರ ಬುಂದೇಲ್ಖಂಡ ಅಭಿವೃದ್ಧಿ ಮಂಡಳಿಯನ್ನು ರಚನೆ ಮಾಡಲಾಗುತ್ತದೆ. ಮತ್ತೆಂದೂ ಬುಂದೇಲ್ಖಂಡ ಇಂತಹ ಕೆಟ್ಟ ಪರಿಸ್ಥಿತಿಯನ್ನು ಹಿಂತಿರುಗಿ ನೋಡದಂತೆ ಮಾಡುತ್ತೇವೆಂದು ತಿಳಿಸಿದ್ದಾರೆ.
ನಂತರ ಕಾಂಗ್ರೆಸ್ ವಿರುದ್ಧ ಕಿಡಿಕಾಡಿದ ಅವರು, ಯಶಸ್ವಿ ಸರ್ಕಾರವೆಂದು ಹೇಳಿಕೊಳ್ಳುವ ಪಕ್ಷ 70 ವರ್ಷಗಳ ಕಾಲದಲ್ಲಿ ಉತ್ತರಪ್ರದೇಶ ರಾಜ್ಯವನ್ನು ಅಭಿವೃದ್ಧಿಪಡಿಸುವುದರಲ್ಲಿ ವಿಫಲವಾಗಿದೆ. ಪ್ರಸ್ತುತ ರಾಜ್ಯದಲ್ಲಿರುವ ಸರ್ಕಾರ ಮಕ್ಕಳ ಶಿಕ್ಷಣದ ಬಗ್ಗೆ ಚಿಂತನೆ ನಡೆಸುವುದಿಲ್ಲ. ಇದರಿಂದ ರಾಜ್ಯದಲ್ಲಿ ಬಡಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಭ್ರಷ್ಟಾಚಾರದಿಂದಾಗಿ ಉತ್ತರಪ್ರದೇಶ ಇಂದು ಬಡತನವನ್ನು ಎದುರಿಸುವಂತಾಗಿದೆ. ಈ ಎಲ್ಲ ಸಮಸ್ಯೆಗಳಿಂದ ಉತ್ತರಪ್ರದೇಶ ಮುಕ್ತಿ ಪಡೆಯಬೇಕೆಂದು ನಾವು ಬಯಸುತ್ತೇವೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


