ದೇಶ

ಗುಜರಾತ್ ಚುನಾವಣೆ: ಮಧ್ಯಾಹ್ನ 2 ಗಂಟೆಯವರೆಗೆ ಶೇ.32ರಷ್ಟು ಮತದಾನ

ತೀವ್ರ ಕುತೂಹಲ ಕೆರಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್​ ವಿಧಾನಸಭೆ ಚುನಾವಣೆಯ ಮೊದಲ....

ಗುಜರಾತ್ ಚುನಾವಣೆ: ಮಧ್ಯಾಹ್ನ 2 ಗಂಟೆಯವರೆಗೆ ಶೇ.32ರಷ್ಟು ಮತದಾನ
ಮತಗಟ್ಟೆ ಬಳಿ ಮತದಾರರು
Published On :
ಅಹಮದಾಬಾದ್: ತೀವ್ರ ಕುತೂಹಲ ಕೆರಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್​ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಶನಿವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದ್ದು, ಮಧ್ಯಾಹ್ನ 2 ಗಂಟೆಯವರೆಗೆ ಶೇ.32ರಷ್ಟು ಮತದಾನವಾಗಿದೆ.
ಮೊದಲ ಹಂತದಲ್ಲಿ ಒಟ್ಟು 89 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, 19 ಜಿಲ್ಲೆಗಳಲ್ಲಿ ಚುನಾವಣೆ ಬಿರುಸಿನಿಂದ ಸಾಗಿದೆ. ಅಮ್ರೆಲಿಯಲ್ಲಿ ಶೇ.32, ಭಾವನಗರ ಶೇ.33, ಕಚ್ ನಲ್ಲಿ ಶೇ.29, ಮೊರ್ಬಿಯಲ್ಲಿ ಶೇ.33, ರಾಜ್ಕೋಟ್ ನಲ್ಲಿ ಶೇ.35, ಜಾಮಾನಗರದಲ್ಲಿ ಶೇ. 32, ದ್ವಾರಕಾದಲ್ಲಿ ಶೇ. 27, ಪೋರಬಂದರ್ ನಲ್ಲಿ ಶೇ. 28 ಮತ್ತು ಗಿರ್ ಸೋಮನಾಥ್ ದಲ್ಲಿ ಶೇ.30ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಸೂರತ್ ಸೇರಿದಂತೆ ಕೆಲವು ಕಡೆ ಮತ ಯಂತ್ರದಲ್ಲಿ ತಾಂತ್ರಿಕ ತೊಂದರೆ ಕಂಡು ಬಂದಿದೆ ಎಂದು ಪ್ರತಿಕ್ಷಗಳು ಆರೋಪಿಸಿವೆ. ಕಾಂಗ್ರೆಸ್​ನ ಹಿರಿಯ ನಾಯಕ ಅಹ್ಮದ್​ ಪಟೇಲ್​ ಸ್ಫರ್ಧಿಸುತ್ತಿರುವ ಕ್ಷೇತ್ರ ಸೂರತ್​ನಲ್ಲಿ ಮತ ಯಂತ್ರದಲ್ಲಿ ಸಮಸ್ಯೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಟ್ವೀಟ್​ ಮೂಲಕ ಚುನಾವಣಾ ಆಯೋಗಕ್ಕೂ ತಿಳಿಸಿದ್ದಾರೆ.
ಕೂಡಲೆ ಕ್ರಮ ತೆಗೆದುಕೊಂಡ ಆಯೋಗ ತೊಂದರೆಗಳನ್ನು ಸರಿಪಡಿಸಿದ್ದು, ಈಗ ಯಾವುದೇ ತೊಂದರೆ ಇಲ್ಲದೆ ಮತದಾನ ನಡೆಯುತ್ತಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. 
ಸೂರತ್​ನಲ್ಲಿ 70, ಪೋರಬಂದರ್​ನಲ್ಲಿ 8, ವಲ್ಸಾದ್​ನಲ್ಲಿ 5, ಅಮ್ರೇಲಿಯಲ್ಲಿ 3 ಹಾಗೂ ರಾಜ್​ಕೋಟ್​​ನಲ್ಲೂ 3 ಮತ ಯಂತ್ರಗಳಲ್ಲಿ ತೊಂದರೆ ಕಂಡುಬಂದಿತ್ತು.
ಮತದಾನಕ್ಕಾಗಿ ಒಟ್ಟು 24,689 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 19 ಜಿಲ್ಲೆಗಳ ಒಟ್ಟು 2,12,31,652 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಪೈಕಿ 1,11,05,933 ಪುರುಷ ಮತದಾರರಿದ್ದು, 1,01,25,472 ಮಹಿಳಾ  ಮತದಾರರಿದ್ದಾರೆ. ಇನ್ನು 247 ಮಂದಿ ತೃತೀಯ ಲಿಂಗಿಗಳೂ ಕೂಡ ಇಂದು ಮತದಾನ ಮಾಡುತ್ತಿರುವುದು ವಿಶೇಷವಾಗಿದೆ. ಸಂಜೆ 5 ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಎರಡನೇ ಹಂತದ ಮತದಾನ ಡಿಸೆಂಬರ್14 ರಂದು ನಡೆಯಲಿದೆ.
ಬಿಜೆಪಿಯದ್ದೇ ಪಾರಮ್ಯ
ಪ್ರಸ್ತುತ 89 ಕ್ಷೇತ್ರಗಳ ಪೈಕಿ ಆಡಳಿತಾರೂಢ ಬಿಜೆಪಿ ಪಕ್ಷವೇ ಅತೀ ಹೆಚ್ಚು ಶಾಸಕರು ಅಂದರೆ 67 ಕ್ಷೇತ್ರಗಳನ್ನು ಹೊಂದಿದ್ದು, ಕಾಂಗ್ರೆಸ್ 16 ಮತ್ತು ಎನ್ ಸಿಪಿ ಮತ್ತು ಜೆಡಿಯು ತಲಾ ಒಂದೊಂದು ಸ್ಥಾನಗಳಿಸಿವೆ.  ಉಳಿದೆರಡು  ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.