ದೇಶ

ರಾಮ್ ರಹೀಮ್ ಆಯ್ತು, ಈಗ ಬಾಬಾ ರಾಮ್ ಪಾಲ್ ಸರದಿ!

ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟ ಮಾಡುತ್ತಿದ್ದಂತೆಯೇ ಬಾಬಾ ರಾಮ್ ರಹೀಮ್ ಪ್ರಕರಣಕ್ಕೆ ತೆರೆ ಎಳೆದಿದ್ದು, ಇದೀಗ ಮತ್ತೋರ್ವ ಬಾಬಾ ನನ್ನು ಜೈಲಿಗಟ್ಟಲು ಹರ್ಯಾಣ ಕೋರ್ಟ್ ಸಿದ್ಧತೆ ನಡೆಸಿದೆ.

ರಾಮ್ ರಹೀಮ್ ಆಯ್ತು, ಈಗ ಬಾಬಾ ರಾಮ್ ಪಾಲ್ ಸರದಿ!
ಸಂಗ್ರಹ ಚಿತ್ರ
Published On :

ಚಂಢೀಘಡ: ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟ ಮಾಡುತ್ತಿದ್ದಂತೆಯೇ ಬಾಬಾ ರಾಮ್ ರಹೀಮ್ ಪ್ರಕರಣಕ್ಕೆ ತೆರೆ ಎಳೆದಿದ್ದು, ಇದೀಗ ಮತ್ತೋರ್ವ ಬಾಬಾ ನನ್ನು ಜೈಲಿಗಟ್ಟಲು ಹರ್ಯಾಣ ಕೋರ್ಟ್ ಸಿದ್ಧತೆ ನಡೆಸಿದೆ.

ಕೊಲೆ ಹಾಗೂ ದೇಶದ್ರೋಹ ಪ್ರಕರಣಗಳಡಿಯಲ್ಲಿ ಬಂಧನಕ್ಕೀಡಾಗಿರುವ ಬಾಬಾ ರಾಮ್ ಪಾಲ್ ಪ್ರಕರಣದ ತೀರ್ಪು ಇಂದು ಹೊರ ಬೀಳುವ ಸಾಧ್ಯತೆ ಇದ್ದು, ಬಾಬಾ ರಾಮ್ ರಹೀಮ್ ಇರುವ ರೋಹ್ಟಕ್ ಜೈಲಿನತ್ತಲೇ ಬಾಬಾ  ರಾಮ್ ಪಾಲ್ ಕೂಡ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಹರ್ಯಾಣದ ಹಿಸ್ಸಾರ್ ನಲ್ಲಿ ಸುಮಾರು 12 ಎಕರೆ ಪ್ರದೇಶದಲ್ಲಿ ಆಶ್ರಮ ನಿರ್ಮಿಸಿಕೊಂಡಿದ್ದ ಬಾಬಾ ರಾಮ್ ಪಾಲ್ ನನ್ನು 2014ರಲ್ಲಿ ಬಂಧಿಸಲಾಗಿತ್ತು.

ಹರಿಯಾಣದ ಹಿಸ್ಸಾರನಲ್ಲಿರುವ ಸತ್ಲೋಕ ಆಶ್ರಮದಲ್ಲಿ ಐವರು ಮಹಿಳೆಯರು ಹಾಗೂ ಹದಿನೆಂಟು ತಿಂಗಳ ಮಗುವಿನ ಮೃತದೇಹ ಪತ್ತೆಯಾಗಿತ್ತು. ಕೊಲೆ ಪ್ರಕರಣ ಸಂಬಂಧ 2010 ರಿಂದ 2014ರವರೆಗೆ ನ್ಯಾಯಾಲಯದಲ್ಲಿ  ವಿಚಾರಣೆ ನಡೆಸಿತ್ತು. ಅಂತಿಮವಾಗಿ 42 ಬಾರಿ ಸಮನ್ಸ್‌ ನೀಡಿದ್ದರೂ ಅದನ್ನು ತಿರಸ್ಕರಿಸಿದ್ದ ಬಾಬಾ ರಾಮ್ ಪಾಲ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ. ಅಂತಿಮವಾಗಿ ಬಾಬಾ ರಾಮ್ ಪಾಲ್ ಬಂಧನಕ್ಕೆ ಸಶಸ್ತ್ರ  ಪಡೆಯನ್ನೇ ಆಶ್ರಮಕ್ಕೆ ರವಾನಿಸಲಾಗಿತ್ತಾದರೂ ಆಶ್ರಮದಲ್ಲಿದ್ದ ಸುಮಾರು 15 ಸಾವಿರ ಮಂದಿ ಭಕ್ತರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದರು.

ಪೆಟ್ರೋಲ್ ಬಾಂಬ್, ದೊಣ್ಣೆಗಳು ಮತ್ತು ಇತರೆ ಮಾರಕಾಯುಧಗಳಿಂದ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದರು. ಅಂತೂ ಹರಸಾಹಸ ಪಟ್ಟ ಪೊಲೀಸರು ಆಶ್ರಮದಲ್ಲಿದ್ದ ಅನುಯಾಯಿಗಳನ್ನು ತೆರವುಗೊಳಿಸಿ ಬಾಬಾ ರಾಮ್  ಪಾಲ್ ನನ್ನು ಬಂಧಿಸಿದ್ದರು.

ಇನ್ನು 2014 ನವೆಂಬರ್ 17ರಂದು ಬಾಬಾ ಮತ್ತು ಆತನ ಬೆಂಬಲಿಗರ ವಿರುದ್ಧ ಐಪಿಸಿ ಸೆಕ್ಷನ್ 186 (ಸಾರ್ವಜನಿಕರಿಗೆ ಧಕ್ಕೆ) ಐಪಿಸಿ ಸೆಕ್ಷನ್ 332 (ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ) ಹಾಗೂ ಐಪಿಸಿ ಸೆಕ್ಷನ್ 353 (ಸರ್ಕಾರಿ  ಅಧಿಕಾರಿ ಮೇಲೆ ಹಲ್ಲೆ ಹಾಗೂ ಕೊಲೆ ಯತ್ನ) ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.  ಇದಲ್ಲದೆ ಬಾಬಾ ರಾಮ್ ಪಾಲ್ ಆಪ್ತರಾದ ಪುರುಷೋತ್ತಮ ದಾಸ್, ರಾಜ್ ಕುಮಾರ್, ಮೊಹಿಂದರ್ ಸಿಂಗ್, ರಾಜೇಂದರ್ ಸಿಂಗ್,  ರಾಹುಲ್ ಸೇರಿದಂತೆ ಸುಮಾರು 40 ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 147 (ಗಲಭೆ), 149 (ಕಾನೂನು ಬಾಹಿರ ಸಭೆ) ಮತ್ತು 188 ಮತ್ತು 342ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಐಟಿಐ ತರಬೇತಿ ಪಡೆದು ಹರಿಯಾಣ ರಾಜ್ಯ ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್‌ ಆಗಿದ್ದ ರಾಮ್‌ ಪಾಲ್‌ ಬಳಿಕ ಸ್ವ ಘೋಷಿತ ದೇವಮಾನವನಾಗಿ ಹಿಸ್ಸಾರ್ ನಲ್ಲಿ ಆಶ್ರಮ ಸ್ಥಾಪಿಸಿದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.