ಡೋಕ್ಲಾಮ್ ವಿವಾದ: ಭಾರತ ಶಾಂತಿ ಬಯಸುತ್ತದೆ, ಯುದ್ಧವನ್ನಲ್ಲ- ರಾಜನಾಥ ಸಿಂಗ್
ಭಾರತ ಶಾಂತಿಯನ್ನು ಬಯಸುತ್ತದೆ ಎಂಬುದನ್ನು ನಮ್ಮ ಎಲ್ಲಾ ನೆರೆ ರಾಷ್ಟ್ರಗಳಿಗೆ ಸಂದೇಶ ನೀಡ ಬಯಸುತ್ತೇನೆಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ...

Published On :
ನವದೆಹಲಿ: ಭಾರತ ಶಾಂತಿಯನ್ನು ಬಯಸುತ್ತದೆ ಎಂಬುದನ್ನು ನಮ್ಮ ಎಲ್ಲಾ ನೆರೆ ರಾಷ್ಟ್ರಗಳಿಗೆ ಸಂದೇಶ ನೀಡ ಬಯಸುತ್ತೇನೆಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.
ದೆಹಲಿಯಲ್ಲಿ ದೇಶ ಕಾಯುವ ಉಂಡೋ ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಪಡೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡೋಕ್ಲಾಮ್ ವಿವಾದ ಸಂಬಂಧ ಮಾತನಾಡಿರುವ ಅವರು, ಭಾರತ ಶಾಂತಿಯನ್ನು ಬಯಸುತ್ತದೆ ಎಂಬ ಸಂದೇಶವನ್ನು ನೆರೆ ರಾಷ್ಟ್ರಗಳಿಗೆ ನೀಡಸಲು ಬಯಸುತ್ತೇನೆ. ಭಾರತ ಹಾಗೂ ಚೀನಾ ನಡುವೆ ಉಂಟಾಗಿರುವ ಡೋಕ್ಲಾಮ್ ವಿವಾದ ಸಂಬಂಧ ಶೀಘ್ರದಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಭಾರತ ಆಕ್ರಮಣಕಾರಿ ರಾಷ್ಟ್ರವಲ್ಲ. ಎಂದಿಗೂ ಯಾರ ಮೇಲೂ ಮೊದಲು ದಾಳಿ ಮಾಡಿಲ್ಲ. ಆದರೆ, ಭದ್ರತೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ಭಾರತದ ಗಡಿಯನ್ನು ರಕ್ಷಣೆ ಮಾಡಲು ನಮ್ಮ ಯೋಧರು ಸದಾಕಾಲ ಸನ್ನದ್ಧರಾಗಿರುತ್ತಾರೆ. ವಿವಾದ ಸಂಬಂಧ ಚೀನಾ ಭಾರತದೊಂದಿಗೆ ಶಾಂತಿಯುತ ಮಾಕುತರೆ ಹಾಗೂ ಗಡಿ ಬಿಕ್ಕಟ್ಟು ಪರಿಹಾರಕ್ಕೆ ಮುಂದಾಗಬೇಕಿದೆ. ಈ ಸಂಬಂಧ ಸಕಾರಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದ್ದು, ಗಡಿ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನೀ ಸೈನಿಕರು ಅಲ್ಲಿ ಇದ್ದ ಭಾರತೀಯ ಬಂಕರ್ ಗಳನ್ನು ನಾಶ ಮಾಡಿದ್ದರು. ಇದೇ ಕಾರಣಕ್ಕೆ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿತ್ತು. ಯುದ್ಧ ಮಾಡುವ ಉದ್ದೇಶಕ್ಕೆ ಅಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು. ಜೂನ್ 6 ಘಟನೆ ಬಳಿಕ ಇಂಡೋ-ಚೀನಾ ಗಡಿ ಪ್ರಕ್ಷುಬ್ದಗೊಂಡಿದೆ.
ಭಾರತದ ಗಡಿ ರಕ್ಷಣಾ ದೃಷ್ಟಿಯಿಂದ ಭೂತಾನ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತ ಸಿಲಿಗುರಿ ಕಾರಿಡಾರ್ ನಿರ್ಮಿಸುತ್ತಿದೆ. ಒಂದು ವೇಳೆ ಈ ಕಾರಿಡಾರ್ ಪೂರ್ಣಗೊಂಡಿದ್ದೇ ಆದರೆ ಗಡಿಯಲ್ಲಿ ಚೀನಿ ಸೈನಿಕರು ಏನೇ ಯೋಜನೆ ರೂಪಿಸಿದರೂ ಭಾರತಕ್ಕೆ ಆದರ ಮಾಹಿತಿ ಲಭ್ಯವಾಗುತ್ತದೆ. ಇನ್ನು ಇದೇ ಕಾರಿಡಾರ್ ಗೆ ಹೊಂದಿಕೊಂಡಂತೆ ಭಾರತೀಯ ಪಡೆಗಳ ಶಿಬಿರವಿದ್ದು, ಇದೇ ಕಾರಣಕ್ಕೆ ಚೀನಾ ಕೂಡ ಡೋಕ್ಲಾಮ್ ಸಮೀಪದಲ್ಲೇ ದಿಢೀರ್ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಇದನ್ನು ಯಾವಾಗ ಭಾರತೀಯ ಸೈನಿಕರು ವಿರೋಧಿಸಿದರೋ ಆಗ ಚೀನೀ ಸೈನಿಕರು ಕಾಲುಕೆರೆದು ಸಂಘರ್ಷಕ್ಕೆ ಮುಂದಾಗಿದ್ದಾರೆ.
ಗಡಿಯಲ್ಲಿ ವಿವಾದ ತಾರಕ್ಕೇರಿದ್ದಾಗಿನಿಂದಲೂ ಭಾರತವನ್ನು ಬೆದರಿಸುವ ಪ್ರಯತ್ನಗಳನ್ನು ಚೀನಾ ಮಾಡುತ್ತಲೇ ಬಂದಿದೆ. ಡೋಕ್ಲಾಮ್ ವಿವಾದ ಸಂಬಂಧ ಕೆಲ ತಿಂಗಳಿನಿಂದಲೂ ಭಾರತ ಹಾಗೂ ಚೀನಾ ನಡುವೆ ವಾಕ್ಸಮರ ಮುಂದುವರೆಯುತ್ತಲೇ ಇದೆ.
ಡೋಕ್ಲಾಮ್ ವಿವಾದದಲ್ಲಿ ಚೀನಾ ಗರಿಷ್ಟ ಸಂಯಮವನ್ನು ತೋರಿಸಿದೆ. ಆದರೆ, ಇದೀಗ ನಮ್ಮ ತಾಳ್ಮೆಯ ಕಟ್ಟೆಯೊಡೆದಿದೆ. ಭಾರತ ಇದನ್ನು ತಿಳಿಯಬೇಕಿದ್ದು, ಮೊದಲು ಡೋಕ್ಲಾಮ್ ನಿಂದ ತನ್ನ ಸೇನಾಪಡೆಗಳನ್ನು ಭಾರತ ಹಿಂದಕ್ಕೆ ಕರೆಸಿಕೊಳ್ಳಬೇಕು. ಇಲ್ಲದೇ ಹೋದರೆ, ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಚೀನಾ ಈ ಹಿಂದೆ ಭಾರತಕ್ಕೆ ಬೆದರಿಕೆ ಹಾಕಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


