ಗೋರಖ್ ಪುರದ ಬಿಆರ್ ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆ ನೋಡಲ್ ಅಧಿಕಾರಿ ವಜಾ!
ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಉತ್ತರ ಪ್ರದೇಶದ ಗೋರಖ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿನ ಶಿಶುಗಳ ಸರಣಿ ಸಾವಿನ ಪ್ರಕರಣ ಸಂಬಂಧ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಖಫೀಲ್ ಖಾನ್ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ.

ಲಖನೌ: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಉತ್ತರ ಪ್ರದೇಶದ ಗೋರಖ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿನ ಶಿಶುಗಳ ಸರಣಿ ಸಾವಿನ ಪ್ರಕರಣ ಸಂಬಂಧ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಖಫೀಲ್ ಖಾನ್ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ.
ಮೂಲಗಳ ಪ್ರಕಾರ ಕರ್ತವ್ಯ ನಿರ್ಲಕ್ಷದ ಆರೋಪ ಹೊರಿಸಿ ಖಫೀಲ್ ಖಾನ್ ರನ್ನು ಸೇವೆಯಿಂದ ಆಸ್ಪತ್ರೆ ಆಡಳಿತ ಮಂಡಳಿ ವಜಾ ಮಾಡಿದ್ದು, ಅವರ ಸ್ಥಾನಕ್ಕೆ ಡಾ.ಭುಪೇಂದ್ರ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.
ನಿನ್ನೆಯಷ್ಟೇ ಆಸ್ಪತ್ರೆಯ ಪ್ರಾಂಶುಪಾಲ ರಾಜೀವ್ ಮಿಶ್ರಾ ಅವರನ್ನು ವಜಾ ಮಾಡಲಾಗಿತ್ತು. ಇದೀಗ ಇದರ ಮುಂದುವರೆದ ಭಾಗ ಎಂಬಂತೆ ಮಕ್ಕಳ ವಿಭಾಗದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಹಿರಿಯ ವೈದ್ಯ ಡಾ.ಖಫೀಲ್ ಖಾನ್ ರನ್ನು ವಜಾಗೊಳಿಸಲಾಗಿದೆ. ಇನ್ನು ಆಸ್ಪತ್ರೆ ಪ್ರಾಂಶುಪಾಲರಾಗಿ ಡಾ.ಪಿಕಿ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ.
ಕಳೆದ ಶುಕ್ರವಾರ ಬೆಳಕಿಗೆ ಬಂದ ಪ್ರಕರಣದಲ್ಲಿ ಈ ವರೆಗೂ ಸುಮಾರು 80 ಮಂದಿ ಮಕ್ಕಳು ಅಸುನೀಗಿದ್ದಾರೆ ಎಂದು ಹೇಳಲಾಗುತ್ತಿದೆ. ಮೆದುಳು ಸೋಂಕಿನಿಂದ ಬಳಲುತ್ತಿದ್ದ ನೂರಾರು ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯುಂಟಾಗಿದ್ದರಿಂದ ಮಕ್ಕಳು ಸಾವನ್ನಪ್ಪಿದ್ದರು.
ಸ್ವಂತ ಹಣದಲ್ಲಿ ಆಕ್ಸಿಜನ್ ಸಿಲಿಂಡರ್ ಖರೀದಿಸಿದ ವೈದ್ಯ: ಮಾಧ್ಯಮಗಲ್ಲಿ ಹೀರೋ ಆಗಿದ್ದ ಖಫೀಲ್ ಖಾನ್
ಬಿಆರ್ ಡಿ ಆಸ್ಪತ್ರೆ ದುರಂತ ಬೆಳಕಿಗೆ ಬಂದ ಕ್ಷಣದಿಂದಲೇ ವೈದ್ಯ ಖಫೀಲ್ ಖಾನ್ ಕೂಡ ಸುದ್ದಿಯಾಗುತ್ತಿದ್ದರು. ಕಾರಣ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯುಂಟಾದಾಗ ಸ್ವತಃ ಖಫೀಳ್ ಖಾನ್ ತಮ್ಮ ಸ್ವಂತ ಹಣದಿಂದ ಖರೀದಿಸಿ ಆಸ್ಪತ್ರೆಗೆ ಸುಮಾರು 12 ಸಿಲಿಂಡರ್ ಗಳನ್ನು ತಾವೇ ಖುದ್ಧಾಗಿ ತಮ್ಮ ಕಾರಿನಲ್ಲಿ ತಂದಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಮಾಧ್ಯಮಗಳ ವರದಿಯಂತೆ ಗುರುವಾರ ರಾತ್ರಿ ವೈದ್ಯ ಖಫೀಲ್ ಖಾನ್ ತಮ್ಮ ಮನೆಯಲ್ಲಿ ನಿದ್ರಿಸುತ್ತಿದ್ದಾಗ ಮಧ್ಯರಾತ್ರಿ ವೇಳೆ ಆಸ್ಪತ್ರೆಯಿಂದ ಕರೆ ಬಂದಂತೆ. ದಾದಿಗಳು ವೈದ್ಯರಿಗೆ ಕರೆ ಮಾಡಿ ಆಸ್ಪತ್ರೆಯಲ್ಲಿ ಆಮ್ಲಜನಕ ಸಂಪೂರ್ಣ ಖಾಲಿಯಾಗಿದ್ದು, ಇನ್ನು ಕೇವಲ ಆರ್ಧಗಂಟೆಗೆ ಸಾಕಾಗುವಷ್ಟು ಮಾತ್ರ ಆಮ್ಲಜನಕವಿದೆ ಎಂದು ಹೇಳಿದ್ದರಂತೆ.
ಕೂಡಲೇ ವೈದ್ಯ ಖಫೀಲ್ ಖಾನ್ ಅವರು ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದವರಿಗೆ ಕರೆ ಮಾಡಿದ್ದಾರೆ. ಆದರೆ ಆಸ್ಪತ್ರೆ ಬಾಕಿ ಹಣವನ್ನು ಪಾವತಿ ಮಾಡದ ಹೊರತು ಸಿಲಿಂಡರ್ ಪೂರೈಕೆ ಮಾಡುವುದಿಲ್ಲ ಎಂದು ಪೂರೈಕೆದಾರ ಖಾರವಾಗಿ ಹೇಳಿದ್ದಾನೆ. ಇದರಿಂದ ಬೇಸತ್ತ ವೈದ್ಯ ಖಫೀಲ್ ಖಾನ್ ಅವರು ಆರ್ಧರಾತ್ರಿಯಲ್ಲೇ ತಮ್ಮ ಕಾರಿನಲ್ಲಿ ತೆರಳಿ ಮತ್ತೋರ್ವ ಆಮ್ಲಜನಕ ಪೂರೈಕೆದಾರರನ್ನು ಸಂಪರ್ಕಿಸಿದ್ದಾರೆ. ಆದರೆ ಆತ ಹಣ ನೀಡಿದರೆ ಮಾತ್ರ ಆಮ್ಲಜನಕ ಪೂರೈಕೆ ಮಾಡುವುದಾಗಿ ಹೇಳಿದ್ದಾನೆ. ಕೂಡಲೇ ಖಫೀಲ್ ಖಾನ್ ಅವರು ಆತನಿಗೆ ಹಣ ನೀಡಿ ತಮ್ಮ ಕಾರಿನಲ್ಲೇ 2 ಆಮ್ಲಜನಕದ ಸಿಲಿಂಡರ್ ಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಆದರೆ ಅಷ್ಟು ಹೊತ್ತಿಗಾಗಲೇ ಆಸ್ಪತ್ರೆಯಲ್ಲಿ ಆಮ್ಲಜನಕ ಖಾಲಿಯಾಗಿತ್ತು ಎಂದು ಹೇಳಲಾಗುತ್ತಿದೆ. ಬಳಿಕ ಮಾರನೆಯ ದಿನ ಅಂದರೆ ಶುಕ್ರವಾರ ಬೆಳಗ್ಗೆ ವೈದ್ಯರೊಂದಿಗೆ ತುರ್ತು ಸಭೆ ನಡೆಸಿದ ಖಫೀಲ್ ಖಾನ್ ಅವರು, ಆ್ಯಂಬು ಬ್ಯಾಗ್ ಗಳ ಮೂಲಕ ಆಕ್ಸಿಜನ್ ಪಂಪ್ ಮಾಡುವಂತೆ ಸೂಚನೆ ನೀಡಿದ್ದರು. ಅಲ್ಲದೆ 10 ಸಾವಿರ ರುಗಳನ್ನು ನೀಡಿ ಸುಮಾರು 12 ಆಕ್ಸಿಜನ್ ಸಿಲಿಂಡರ್ ಗಳನ್ನು ಖರೀದಿಸಿ ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಆದರೆ ಪ್ರಸ್ತುತ ಖಫೀಲ್ ಖಾನ್ ಅವರ ವಜಾ ಮಾಡಿರುವ ಆಸ್ಪತ್ರೆ ಆಡಳಿತ ಮಂಡಳಿ ಕ್ರಮ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಂತೆಯೇ ಖಫೀಲ್ ಖಾನ್ ಅವರ ಸ್ಥಾನಕ್ಕೆ ವೈದ್ಯ ಭುಪೇಂದ್ರ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


