ದೇಶ

ಪೆಲ್ಲೆಟ್ ಗನ್ಸ್ ಪ್ರಕರಣ: ಪ್ರತ್ಯೇಕತಾವಾದಿಗಳ ಜೊತೆ ಮಾತುಕತೆ ಇಲ್ಲ; ಸುಪ್ರೀಂಗೆ ಕೇಂದ್ರ

ಕಾಶ್ಮೀರದ ಪ್ರತ್ಯೇಕತಾವಾದಿಗಳು ಹಾಗೂ ಆಜಾದಿ ಬಯಸುವವರೊಂದಿಗೆ ಕಾಶ್ಮೀರದ ಅಸ್ಥಿರತೆ ಕುರಿತು ಮಾತುಕತೆ ನಡೆಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಪೆಲ್ಲೆಟ್ ಗನ್ಸ್ ಪ್ರಕರಣ: ಪ್ರತ್ಯೇಕತಾವಾದಿಗಳ ಜೊತೆ ಮಾತುಕತೆ ಇಲ್ಲ; ಸುಪ್ರೀಂಗೆ ಕೇಂದ್ರ
ಸುಪ್ರೀಂ ಕೋರ್ಟ್
Published On :
ನವದೆಹಲಿ: ಕಾಶ್ಮೀರದ ಪ್ರತ್ಯೇಕತಾವಾದಿಗಳು ಹಾಗೂ ಆಜಾದಿ ಬಯಸುವವರೊಂದಿಗೆ ಕಾಶ್ಮೀರದ ಅಸ್ಥಿರತೆ ಕುರಿತು ಮಾತುಕತೆ ನಡೆಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. 
ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆಗಳು ಪೆಲ್ಲೆಟ್ ಗನ್ ಗಳನ್ನು ಉಪಯೋಗಿಸುವುದನ್ನು ವಿರೋಧಿಸಿ ಜಮ್ಮು-ಕಾಶ್ಮೀರದ ಬಾರ್ ಅಸೋಸಿಯೇಷನ್ ಸುಪ್ರೀಂ ಕೋರ್ತ್ ಮೊರೆ ಹೋಗಿತ್ತು. ಬಾರ್ ಅಸೋಸಿಯೇಷನ್ ನ ಅರ್ಜಿ ವಿಚಾರಣೆ  ವೇಳೆಯಲ್ಲಿ ನ್ಯಾಯಾಲಯಕ್ಕೆ ಹೇಳಿಕೆ ಸಲ್ಲಿಸಿರುವ ಕೇಂದ್ರ ಸರ್ಕಾರ, ಕಾಶ್ಮೀರದ ಅಸ್ಥಿರತೆಯನ್ನು ಬಗೆಹರಿಸುವ ಭಾಗವಾಗಿ ಕಲ್ಲು ತೂರಾಟ ಮಾಡುವವರೊಂದಿಗೆ, ಪ್ರತ್ಯೇಕತಾವಾದಿ ಹುರಿಯತ್ ನಾಯಕರೊಂದಿಗೆ, ಆಜಾದಿ ಬಯಸುವವರೊಂದಿಗೆ ಮಾತುಕತೆ ನಡೆಸುವುದಿಲ್ಲ. ಮಾತುಕತೆ ನಡೆಸುವುದೇನಿದ್ದರೂ ಕಾನೂನುಬದ್ಧವಾಗಿ ಅನುಮತಿ ನೀಡಲಾದವರೊಂದಿಗೆ ಜನರ ಪರವಾಗಿರುವವರೊಂದಿಗೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. 
ಕೇಂದ್ರ ಸರ್ಕಾರದ ಹೇಳಿಕೆಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದೊಂದಿಗೆ ಮಾತನಾಡಲು ಸಂಬಂಧಿಸಿದ ಸೂಕ್ತ ಹೆಸರುಗಳನ್ನು ಸೂಚಿಸಬೇಕೆಂದು ಹೇಳಿದೆ. ಬಾರ್ ಅಸೋಸಿಯೇಷನ್ ಯಾರ ಕಾಳಜಿಯ ಪರವಾಗಿ ಮಾತನಾಡುತ್ತಿದೆಯೋ ಅಂತಹ ಸೂಕ್ತ ವ್ಯಕ್ತಿಗಳಿಂದ ಮೊದಲ ಹಂತದ ಪ್ರಯತ್ನ ನಡೆದರೆ ಮಾತ್ರ ಮಾತುಕತೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ. 
ಕಾಶ್ಮೀರದಲ್ಲಿ ಉಗ್ರ ಬುರ್ಹಾನ್ ವನಿಯ ಹತ್ಯೆ ನಂತರ ಪೆಲ್ಲೆಟ್ ಗನ್ ಗಳ ಬಳಕೆ ಹೆಚ್ಚಿದ್ದು, ಜನರಿಗೆ ಇದರಿಂದ ಹಾನಿ ಉಂಟಾಗುತ್ತಿದ್ದು ಕುರುಡರಾಗುತ್ತಿದ್ದಾರೆ. ಆದ್ದರಿಂದ ಪೆಲ್ಲೆಟ್ ಗನ್ ಗಳ ಬಳಕೆಯನ್ನು ನಿಲ್ಲಿಸಬೇಕು ಹಾಗೂ ಕಾಶ್ಮೀರದ ಅಸ್ಥಿರತೆ, ಅಶಾಂತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹುರಿಯತ್ ನಾಯಕರು ಹಾಗೂ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸಬೇಕೆಂಬುದು ಜಮ್ಮು-ಕಾಶ್ಮೀರ ಬಾರ್ ಅಸೋಸಿಯೇಷನ್ ನ ಪ್ರಮುಖ ಬೇಡಿಕೆಯಾಗಿದೆ. 
ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಯುವುದು ನಿಂತರೆ, ಪೆಲ್ಲೆಟ್ ಗನ್ ಗಳ ಬಳಕೆಯನ್ನೂ ಸ್ಥಗಿತಗೊಳಿಸಲು ಭದ್ರತಾ ಪಡೆ ಹಾಗೂ ಪೊಲೀಸರಿಗೆ ಸೂಚನೆ ನೀಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದ್ದು, ಮುಂದಿನ ವಿಚಾರಣೆಯನ್ನು ಮೇ.9 ಕ್ಕೆ ಮುಂದೂಡಿದೆ. ಇಂದು ಪ್ರಸ್ತಾಪವಾದ ವಿಷಯಗಳ ಬಗ್ಗೆ ಸಂಬಂಧಿಸಿದವರೊಂದಿಗೆ ಚರ್ಚಿಸಿ, ಅದರ ಫಲಿತಾಂಶವನ್ನು ಮುಂದಿನ ವಿಚಾರಣೆಯಲ್ಲಿ ತಿಳಿಸುವಂತೆ ಕೋರ್ಟ್ ಬಾರ್ ಅಸೋಸಿಯೇಷನ್ ಗೆ ಸೂಚನೆ ನೀಡಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.