ದೇಶ

ರಾಯಭಾರ ಕಚೇರಿ ಮೂಲಕ ಜಾಧವ್ ಸಂಪರ್ಕಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದ್ದೇವೆ: ವಿ.ಕೆ. ಸಿಂಗ್

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್'ಭೂಷಣ್ ಜಾಧವ್ ಕುರಿತಂತೆ ಮಾಹಿತಿ ಕಲೆಹಾಕಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ...

ರಾಯಭಾರ ಕಚೇರಿ ಮೂಲಕ ಜಾಧವ್ ಸಂಪರ್ಕಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದ್ದೇವೆ: ವಿ.ಕೆ. ಸಿಂಗ್
ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್
Published On :
ನವದೆಹಲಿ: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್'ಭೂಷಣ್ ಜಾಧವ್ ಕುರಿತಂತೆ ಮಾಹಿತಿ ಕಲೆಹಾಕಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರು ಶನಿವಾರ ಹೇಳಿದ್ದಾರೆ. 
ನಿವೃತ್ತ ಯೋಧರು ಆಯೋಜಿಸಿದ್ದ 'ರಾಷ್ಟ್ರೀಯತೆ ಹಾಗೂ ದೇಶಭಕ್ತಿ' ಸಮಾವೇಶದಲ್ಲಿ ಮಾತನಾಡಿರುವ ಅವರು, ಕುಲ್'ಭೂಷಣ್ ಜಾಧವ್ ಕುರಿತಂತೆ ಮಾಹಿತಿ ನೀಡುವಂತೆ ಭಾರತೀಯ ರಾಯಭಾರಿ ಅಧಿಕಾರಿಗಳು 13 ಬಾರಿ ಪಾಕಿಸ್ತಾನದ ಬಳಿ ಮನವಿ ಮಾಡಿದೆ. ಆದರೂ ಪಾಕಿಸ್ತಾನ ಮಾಹಿತಿ ನೀಡಲು ನಿರಾಕರಿಸಿದೆ. ಇಷ್ಟಾದರೂ ಸರ್ಕಾರ ತನ್ನ ಪ್ರಯತ್ನವನ್ನು ನಿಲ್ಲಿಸಿಲ್ಲ. ಜಾಧವ್ ಕುರಿತಂತೆ ಮಾಹಿತಿ ಕಲೆಹಾಕಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ. 
ಇದೇ ವೇಳೆ ಕಲ್ಲುತೂರಾಟದಿಂದ ತಪ್ಪಿಸಿಕೊಳ್ಳಲು ಕಲ್ಲುತೂರಾಟ ನಡೆಸುತ್ತಿದ್ದ ಕಾಶ್ಮೀರ ಯುವಕನನ್ನೇ ಜೀಪಿನ ಮುಂಭಾಗ ಕಟ್ಟಿದ್ದ ಯೋಧರ ವಿಡಿಯೋ ಸಂಬಂಧದ ಪ್ರಶ್ನೆಗೆ ಉತ್ತರಿಸುವ ಅವರು, ನಾನು ಆ ವಿಡಿಯೋವನ್ನು ನೋಡಿಲ್ಲ. ಪ್ರಕರಣ ಸಂಬಂಧ ಸತ್ಯಾಂಶಗಳು ಗೊತ್ತಿಲ್ಲದೆಯೇ ನಾನು ಯಾವುದಕ್ಕೂ ಪ್ರತಿಕ್ರಿಯೆಯನ್ನು ನೀಡುವುದಿಲ್ಲ ಎಂದಿದ್ದಾರೆ. 
ನಂತರ ಸಮಾವೇಶ ಕುರಿತಂತೆ ಮಾತನಾಡಿದ ಅವರು, ಎಲ್ಲಾ ಹಿರಿಯ ನಾಯಕರು ಒಗ್ಗಟ್ಟಿನಿಂದ ಕೈಜೋಡಿಸಿ ದೇಶದ ಅಭಿವೃದ್ಧಿಗಾಗಿ ದುಡಿಯುತ್ತೇವೆ. ನಮ್ಮ ಜೀವನದುದ್ದಕ್ಕೂ ನಾವು ಕಲಿತ ಪಾಠವನ್ನೇ ಜನತೆಗೆ ಬೋಧಿಸುತ್ತೇವೆಂದು ತಿಳಿಸಿದರು. 
ಬಲೂಚಿಸ್ತಾನ ಮತ್ತು ಕರಾಚಿಯಲ್ಲಿ ಬೇಹುಗಾರಿಕೆ ನಡೆಸುತ್ತಿದ್ದಾನೆಂದು ಆರೋಪಿಸಿದ್ದ ಪಾಕಿಸ್ತಾನ ಕುಲ್'ಭೂಷಣ್ ಜಾಧವ್ ಅವರನ್ನು ಬಂಧನಕ್ಕೊಳಪಡಿಸಿತ್ತು. ಏಪ್ರಿಲ್ 10 ರಂದು ರಹಸ್ಯವಾಗಿ ವಿಚಾರಣೆ ನಡೆಸಿದ್ದ ಪಾಕಿಸ್ತಾನ ಸೇನಾ ನ್ಯಾಯಾಲಯ ಜಾಧವ್ ಅವರಿಗೆ ಗಲ್ಲುಶಿಕ್ಷೆಯನ್ನು ವಿಧಿಸಿತ್ತು. 
ಅಂತರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರರಾಷ್ಟ್ರಗಳ ನಡುವೆ ಆಗಿರುವ ವಿಯೆನ್ನಾ ಒಪ್ಪಂದದ ನಿಯಮದ ಪ್ರಕಾರ. ಯಾವುದೇ ಒಂದು ರಾಷ್ಟ್ರದ ಪ್ರಜೆ ಬೇರೊಂದು ರಾಷ್ಟ್ರದಲ್ಲಿ ತಪ್ಪನ್ನು ಮಾಡಿದ್ದರೆ, ಆ ಪ್ರಜೆಯ ಪರವಾಗಿ ಮಾದ ಮಾಡಲು ನ್ಯಾಯವಾದಿಗಳನ್ನು ನೇಮಿಸಲು ಅವಕಾಶವನ್ನು ಆ ರಾಷ್ಟ್ರಕ್ಕೆ ನೀಡಬೇಕು. ನಂತರ ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು. ಹೀಗೆ ಆ ವ್ಯಕ್ತಿಯ ಪರವಾಗಿ ಆತನ ರಾಷ್ಟ್ರ ನೇಮಿಸಿದ ನ್ಯಾಯವಾದಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ನಂತರವೂ ತಪ್ಪು ಮಾಡಿರುವುದು ಸಾಬೀತಾದರೆ ಮಾತ್ರ ಆತನಿಗೆ ಶಿಕ್ಷೆ ನೀಡುವ ಅವಕಾಶವಿರುತ್ತದೆ. 
ಆದರೆ, ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಉಲ್ಲಂಘನೆ ಮಾಡಿದಂತಾಗಿದೆ. ಜಾಧವ್ ಅವರ ಮೇಲೆ ಗೂಢಚಾರದ ಆರೋಪ ಹೊರಿಸಿರುವ ಪಾಕಿಸ್ತಾನ, ಆತನ ಪರವಾಗಿ ನ್ಯಾಯವಾದಿಯನ್ನು ನೇಮಕ ಮಾಡಲು ಭಾರತಕ್ಕೆ ಯಾವುದೇ ಅವಕಾಶವನ್ನು ನೀಡಿಲ್ಲ. ಭಾರತವು ಜಾಧವ್ ಪರವಾಗಿ ನ್ಯಾಯವಾದಿ ನೇಮಕ ಮಾಡುವ ಬಗ್ಗೆ ಸಾಕಷ್ಟು ಬಾರಿ ಪಾಕಿಸ್ತಾನದ ಗಮನಕ್ಕೆ ತಂದಿದ್ದರೂ ಪಾಕಿಸ್ತಾನ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. 
ಜಾಧವ್ ವಿರುದ್ಧದ ಚಾರ್ಜ್ ಶೀಟ್ ಹಾಗೂ ಗಲ್ಲು ಶಿಕ್ಷೆಯ ತೀರ್ಪಿನ ಪ್ರತಿ ನೀಡುವಂತೆ ಹಾಗೂ ವಕೀಲರಿಗೆ ಕುಲಭೂಷಣ್ ಜಾಧವ್ ಭೇಟಿಗೆ ಅವಕಾಶ ನೀಡುವಂತೆ ನಿನ್ನೆಯಷ್ಟೇ ಭಾರತ ಮನವಿ ಮಾಡಿಕೊಂಡಿತ್ತು. ಕಳೆದ ಒಂದು ವರ್ಷದಿಂದ ಕುಲಭೂಷಣ್ ಜಾಧವ್ ಅವರಿಗೆ ವಕೀಲರ ಭೇಟಿಗೆ ಅವಕಾಶ ನೀಡುವಂತೆ ಭಾರತ ಮಾಡಿದ ಮನವಿಯನ್ನು ಪಾಕಿಸ್ತಾನ 13 ಬಾರಿ ತಿರಸ್ಕರಿಸಿದೆ. ಈಗಲಾದರೂ ವಕೀಲರ ಭೇಟಿಗೆ ಅವಕಾಶ ನೀಡಿ, ನಾವು ಗಲ್ಲು ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆಂದು ತಿಳಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.